ಯಲ್ಲಾಪುರ: ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 3.90 ಕೋಟಿ ವೆಚ್ಚದಲ್ಲಿ ಉತ್ತಮ ಸೇತುವೆ, ಕಾಂಕ್ರೀಟ್ ರಸ್ತೆ, ಸೇರಿದಂತೆ ಎಲ್ಲ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಹೀಗಿರುವಾಗ ಕೇಲವ ಭಾಷಣಕ್ಕೆ ಮರುಳಾಗಿ ಕೆಲಸ ಮಾಡಿಕೊಟ್ಟವರನ್ನು ಮರೆಯಬಾರದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲ್ಲೂಕಿನ ಮದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡೊಳ್ಳಿಯಲ್ಲಿ ಸೋಮವಾರ ನೂತನವಾಗಿ ಆರಂಭಿಸಲಾದ ಕರಡೊಳ್ಳಿ-ಯಲ್ಲಾಪುರ ಬಸ್ಸಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕರಡೊಳ್ಳಿ ಸುತ್ತಮುತ್ತಲ ಪ್ರದೇಶದಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದು ಅವರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಹುಣಶೆಟ್ಟಿಕೊಪ್ಪದ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದರು.
ಸರ್ಕಾರ ಮಹಿಳೆಯರಿಗೆ ಎಲ್ಲ ರೀತಿಯ ಉಚಿತ ಭಾಗ್ಯ ನೀಡಿ ಅವರ ಭವಿಷ್ಯಕ್ಕೆ ಅನುಕೂಲ ಕಲ್ಪಿಸಿರುವುದನ್ನು ಕೂಡ ಜನ ನೆನಪಿಟ್ಟುಕೊಳ್ಳಬೇಕು ಎಂದರು.
ನಂತರ ಬಸ್ ಚಾಲನೆ ನೀಡಿ, ಕರಡೊಳ್ಳಿಯಿಂದ ಯಲ್ಲಾಪುರದವರೆಗೂ ಬಸ್ಸಿನಲ್ಲೇ ಪ್ರಯಾಣ ಬೆಳೆಸಿದರು. ಪ್ರಮುಖರಾದ ವಿಜಯಮಿರಾಶಿ, ವಿನಾಯಕ ತಿನೇಕರ, ಸಾಂದು ಪಟಕಾರೆ, ಡಿಪೋ ವ್ಯವಸ್ಥಾಪಕ ಸಂತೋಷ ವೆರ್ಣೇಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.