ADVERTISEMENT

ಶಿರಸಿ: ದೋಟಿ ಸಹಾಯಧನಕ್ಕೆ ನಿಯಮಾವಳಿ ಕೊಕ್ಕೆ

810 ರೈತರಿಗೆ ₹ 2.5 ಕೋಟಿ ಸಹಾಯಧನ ಬಿಡುಗಡೆ ಬಾಕಿ

ರಾಜೇಂದ್ರ ಹೆಗಡೆ
Published 24 ಜೂನ್ 2025, 4:17 IST
Last Updated 24 ಜೂನ್ 2025, 4:17 IST
ಅಡಿಕೆ ತೋಟದಲ್ಲಿ ದೋಟಿ ಮೂಲಕ ಮದ್ದು ಸಿಂಪಡಣೆ ಕಾರ್ಯದಲ್ಲಿ ನಿರತವಾಗಿರುವ ರೈತ
ಅಡಿಕೆ ತೋಟದಲ್ಲಿ ದೋಟಿ ಮೂಲಕ ಮದ್ದು ಸಿಂಪಡಣೆ ಕಾರ್ಯದಲ್ಲಿ ನಿರತವಾಗಿರುವ ರೈತ   

ಶಿರಸಿ: ಅಡಿಕೆ ತೋಟದಲ್ಲಿ ಬಹು ವಿಧದ ಕೆಲಸಗಳಿಗೆ ಬಳಸುವ ದೋಟಿ ಖರೀದಿ ಮೇಲೆ ಸಹಾಯಧನ ನೀಡಲು ಕೇಂದ್ರ ಸರ್ಕಾರದ ಸಬ್ ಮಿಷನ್ ಆನ್ ಅಗ್ರಿಕಲ್ಟ‌ರ್ ಮೆಕನೈಜೇಶನ್ (ಎಸ್ಎಂಎಎಂ) ಒಪ್ಪಿಗೆ ನೀಡದ ಕಾರಣ ಅರ್ಜಿ ವಿಲೇವಾರಿ ಬಾಕಿಯುಳಿಯುವ ಜತೆ ಈ ಹಿಂದೆ ದೋಟಿ ಖರೀದಿಸಿದ್ದ ರೈತರಿಗೆ ನೀಡಬೇಕಿದ್ದ ₹2.5 ಕೋಟಿ ಸಹಾಯಧನಕ್ಕೂ ಕೊಕ್ಕೆ ಬಿದ್ದಿದೆ. 

ದಶಕದ ಈಚೆಗೆ ಅಡಿಕೆ ಬೆಳೆಯುವ ಕೃಷಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಸುಮಾರು 32 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಇದಕ್ಕೆ ಪೂರಕವಾಗಿ ಇತ್ತೀಚಿನ ವರ್ಷಗಳಲ್ಲಿ ನೆಲದಲ್ಲಿಯೇ ನಿಂತು ಕೆಲಸ ಮಾಡಬಹುದಾದ ದೋಟಿಗಳ ಆವಿಷ್ಕಾರವಾಗಿದೆ. ಇದು ಕೆಲಸ ಸುಲಭಗೊಳಿಸಿದ್ದಲ್ಲದೆ ಸುರಕ್ಷತೆಯೂ ಆಗಿದೆ. ಈ ದೋಟಿಗಳನ್ನು 2022–23ನೇ ಸಾಲಿನಿಂದ ಕೃಷಿ ಇಲಾಖೆ ಸಹಾಯಧನದ ವ್ಯಾಪ್ತಿಗೆ ಸೇರಿಸಿದೆ. ಕೇಂದ್ರ ಸರ್ಕಾರದ ಎಸ್‌ಎಂಎಎಂ ಅಡಿ ಪರಿಗಣಿಸಿ ಕೃಷಿಯಲ್ಲಿ ಯಂತ್ರೋಪಕರಣಗಳ ಅಳವಡಿಕೆಯನ್ನು ಉತ್ತೇಜಿಸುವ ಸಲುವಾಗಿ ಸಹಾಯಧನ ನೀಡಲಾರಂಭಿಸಿತ್ತು.

‘ಮಾರುಕಟ್ಟೆಯಲ್ಲಿ ಪ್ರತಿ ದೋಟಿಗೆ ₹ 70 ಸಾವಿರದಿಂದ ₹ 80 ಸಾವಿರ ದರವಿದೆ. ರೈತರು ದೋಟಿಗಳನ್ನು ಖರೀದಿಸಿದ ಬಳಿಕ ಬಿಲ್, ಪಹಣಿಪತ್ರಿಕೆ, ಬ್ಯಾಂಕ್ ದಾಖಲೆಗಳೊಂದಿಗೆ ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬೇಕಿತ್ತು. ಸಾಮಾನ್ಯ ರೈತರಿಗೆ ಶೇ 40ರಷ್ಟು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ 50ರಷ್ಟು ಸಹಾಯಧನ ಲಭಿಸುತ್ತಿತ್ತು. ರೈತರಿಗೆ ₹ 30 ಸಾವಿರದಿಂದ ₹ 40 ಸಾವಿರದವರೆಗೆ ಸಹಾಯಧನ ದೊರೆಯುತ್ತಿತ್ತು. ಆದರೆ ಎಸ್‌ಎಂಎಎಂನ ಬದಲಾದ ನಿಯಮಾವಳಿ ಕಾರಣಕ್ಕೆ ವರ್ಷಗಳಿಂದ ಸಹಾಯಧನ ರೈತರಿಗೆ ಬಿಡುಗಡೆಯಾಗಿಲ್ಲ’ ಎಂಬುದು ದೋಟಿ ಸಹಾಯಧನ ನಿರೀಕ್ಷೆಯಲ್ಲಿರುವ ರೈತರ ಮಾತಾಗಿದೆ. 

ADVERTISEMENT

‘ಎಸ್‌ಎಂಎಎಂನ ಬದಲಾದ ನಿಯಮಾವಳಿಯಲ್ಲಿ ಅಲ್ಯುಮಿನಿಯಂ ಸಾಧನಗಳಿಗೆ ಸಹಾಯಧನ ಕಡಿಮೆ ಇದೆ. ಅಡಿಕೆ ಕಾರ್ಯ ನಡೆಸುವ ದೋಟಿಗಳನ್ನು ಈ ಯೋಜನೆಯಲ್ಲಿ ಅಲ್ಯುಮಿನಿಯಂ ಉಪಕರಣ ಎಂದು 2023–24ನೇ ಸಾಲಿನಿಂದ ಪರಿಗಣಿಸಲಾಗಿದ್ದು, ಈ ಹಿಂದೆ ನೀಡುತ್ತಿದ್ದ ಶೇ.40ರಿಂದ ಶೇ.50ರಷ್ಟು ಸಹಾಯಧನ ಕಡಿತಗೊಳಿಸಿ, ನಿಯಮಾವಳಿ ಪ್ರಕಾರ ಪ್ರತಿ ದೋಟಿಗೆ ₹4ರಿಂದ ₹5 ಸಾವಿರ ಮಾತ್ರ ಸಹಾಯಧನ ನೀಡುವಂತೆ ಪರಿಷ್ಕರಣೆ ಮಾಡಲಾಗಿದೆ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 

‘ಪ್ರತಿ ದೋಟಿಗೆ ರೈತರು ₹70ರಿಂದ ₹80 ಸಾವಿರ ನೀಡಿ ಖರೀದಿಸಿರುವುದರಿಂದ ಈ ಸಹಾಯಧನ ತೀರಾ ಕಡಿಮೆ ಎಂಬಂತಾಗಿದೆ. ಅಡಿಕೆ ಇಳಿಸುವ ಈ ದೋಟಿ ಕೇವಲ ಅಲ್ಯುಮಿನಿಯಂನಿಂದ ತಯಾರಾಗಿಲ್ಲ, ವಿವಿಧ ಲೋಹ ಬಳಸಿ ಸಿದ್ಧಪಡಿಸಿರುವುದರಿಂದ ಇವುಗಳನ್ನು ಅಲ್ಯುಮಿನಿಯಂ ಎಂದು ಪರಿಗಣಿಸಬಾರದು ಎಂದು ತೋಟಗಾರಿಕೆ ಇಲಾಖೆ ಎಸ್‌ಎಂಎಎಂಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರೂ ಈವರೆಗೆ ಸ್ಪಂದನೆ ಸಿಕ್ಕಿಲ್ಲ’ ಎನ್ನುತ್ತಾರೆ ಅವರು. 

‘2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 750 ರೈತರು ಸಹಾಯಧನ ಪಡೆದಿದ್ದಾರೆ. 2023-24ನೇ ಸಾಲಿನಲ್ಲಿ 810 ರೈತರು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಈವರೆಗೆ ಸರ್ಕಾರದ ಸಹಾಯಧನ ಮಂಜೂರಾಗಿಲ್ಲ. ಒಟ್ಟು ₹2.5 ಕೋಟಿ  ಸಂದಾಯವಾಗಬೇಕಾಗಿದೆ. 2024–25ನೇ ಸಾಲಿನಲ್ಲಿ ಡಿಸೆಂಬರ್ ತಿಂಗಳವರೆಗೆ ನೂರಾರು ಅರ್ಜಿ ಸ್ವೀಕರಿಸಲಾಗಿದ್ದು, ನಂತರ ಸ್ಥಗಿತ ಮಾಡಲಾಗಿದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಡಿಡಿ ಬಿ.ಪಿ.ಸತೀಶ. 

₹70–₹80 ಸಾವಿರ ಪ್ರತಿ ದೋಟಿ ದರ  ಶೇ 40ರಿಂದ ಶೇ 50ರಷ್ಟು ಸಹಾಯಧನ ಕಡಿತ ₹ 2.5 ಕೋಟಿ ಸಹಾಯಧನ ಬಿಡುಗಡೆ ಬಾಕಿ
ಸಹಾಯಧನ ನೀಡುವ ಸಂಬಂಧ ಎಸ್‌ಎಂಎಎಂನಿಂದ ಸ್ಪಷ್ಟನೆ ಸಿಕ್ಕ ಬಳಿಕ ಸರ್ಕಾರದ ಮುಂದಿನ ಸೂಚನೆ ಮೇರೆಗೆ ಅರ್ಜಿಗಳ ವಿಲೇವಾರಿ  ಮಾಡಲಾಗುವುದು
ಬಿ.ಪಿ.ಸತೀಶ ತೋಟಗಾರಿಕಾ ಇಲಾಖೆ ಡಿಡಿ

ದೋಟಿಯಿಂದ ಕೆಲಸ ಸುಲಭ: 

ಇತ್ತೀಚಿನ ವರ್ಷಗಳಲ್ಲಿ ಅಡಿಕೆ ದೋಟಿಯ ಬಳಕೆ ಜನಪ್ರಿಯತೆ ಹೆಚ್ಚಾಗಿದೆ. ಅಡಿಕೆ ಬೆಳೆಯುವ ಕ್ಷೇತ್ರ ಗಣನೀಯವಾಗಿ ಏರಿಕೆಯಾಗಿದ್ದರ ಪರಿಣಾಮ ಮರ ಏರಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ಅಡಿಕೆ ಕ್ಷೇತ್ರಕ್ಕೆ ಅನುಗುಣವಾಗಿ ಲಭ್ಯವಾಗುತ್ತಿಲ್ಲ. ಅಲ್ಲದೆ ಹೊಸ ಅಡಿಕೆ ತೋಟಗಳಲ್ಲಿ ಅಡಿಕೆ ಮರಗಳು 30ರಿಂದ 50 ಅಡಿ ಮಾತ್ರ ಎತ್ತರ ಇರುವ ಕಾರಣ ದೋಟಿ ಮೂಲಕ ಸುಲಭವಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ರೈತರು ದೋಟಿ ಖರೀದಿಗೆ ಉತ್ಸಾಹ ತೋರುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.