
ಶಿರಸಿ: ಜಿಲ್ಲೆಯ ಮೂತ್ರಾಂಗ ರೋಗ ಹಾಗೂ ಕಾಮಶಾಸ್ತ್ರಜ್ಞ ಡಾ.ಗಜಾನನ ಭಟ್ ಅವರಿಗೆ ಪ್ರತಿಷ್ಠಿತ ಫಾರ್ಚುನಾ ಸಮೂಹದ 2025ನೇ ಸಾಲಿನ ವಿಶ್ವದ ಅತ್ಯುತ್ತಮ ಮೂತ್ರಾಂಗ ಹಾಗೂ ಕಾಮಶಾಸ್ತ್ರಜ್ಞ ಪ್ರಶಸ್ತಿ ನೀಡಲಾಗಿದೆ.
ಫಾರ್ಚುನಾ ಸಮೂಹ ಸಂಸ್ಥೆಗಳು ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿರುವ ಸಾಧಕರನ್ನು ಪ್ರತಿ ವರ್ಷ ಗುರುತಿಸಿ, ಅವರ ಸಾಧನೆಗಳನ್ನು ಪ್ರಶಸ್ತಿಯ ಮೂಲಕ ಗೌರವಿಸುತ್ತವೆ. 102 ದೇಶಗಳ 90 ಸಾವಿರಕ್ಕೂ ಹೆಚ್ಚಿನ ಮೂತ್ರಾಂಗ ತಜ್ಞರು ಹಾಗೂ 5 ಸಾವಿರಕ್ಕೂ ಹೆಚ್ಚಿನ ಕಾಮಶಾಸ್ತ್ರಜ್ಞರಲ್ಲಿ ಮೂರು ಹಂತಗಳಲ್ಲಿ ನಡೆದ ಆಯ್ಕೆ ಪ್ರಕ್ರಿಯೆಗಳಲ್ಲಿ ಡಾ. ಗಜಾನನ ಭಟ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು.
ಡಾ.ಭಟ್ ಕನಿಷ್ಠ ಮೂಲ ಸೌಕರ್ಯ ಹೊಂದಿರುವ ಶಿರಸಿಯಂತಹ ನಗರದಲ್ಲಿ ಕಳೆದೊಂದು ದಶಕದಿಂದ ವೈದ್ಯಕೀಯ ಸೌಲಭ್ಯಗಳ ತೀವ್ರ ಕೊರತೆ ಎದುರಿಸುತ್ತಿರುವ ಉತ್ತರ ಕನ್ನಡದ ಬಡ ರೋಗಿಗಳಿಗೆ ಮೂತ್ರಾಂಗ ವಿಭಾಗದಲ್ಲಿ ಅಂತರ್ ದರ್ಶಕ ಹಾಗೂ ಲೇಸರ್ ಸಹಿತ ಶಸ್ತ್ರಚಿಕಿತ್ಸೆಗಳ ಸಹಿತ ಸಲ್ಲಿಸಿದ ಸಮಗ್ರ ಸೇವೆ, ಭಾರತದಂತಹ ಸಂಕೀರ್ಣ ಸಾಮಾಜಿಕ ಕಟ್ಟುಪಾಡುಗಳನ್ನೊಳಗೊಂಡ ದೇಶದಲ್ಲಿ ಕಾಮಶಾಸ್ತ್ರದಲ್ಲಿ ನಡೆಸಿದ ಸಂಶೋಧನೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ತ್ರೀ ಲೈಂಗಿಕತೆಯ ಸಮಸ್ಯೆಗಳ ನಿವಾರಣಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿಯು 24 ಕ್ಯಾರೆಟ್ ಸ್ವರ್ಣ ಲೇಪಿತ ಮೂರ್ತಿಯ ಟ್ರೋಫಿ ಹಾಗೂ ಪ್ರಮಾಣ ಪತ್ರಗಳನ್ನೊಳಗೊಂಡಿದೆ. ಸಂಯುಕ್ತ ಅರಬ್ ಸಂಸ್ಥಾನದ ದುಬೈ ಮಹಾನಗರದ ಸೌಲ್ ಬೀಚ್ ಪರಿಸರದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕ್ಯಾನ್ಸರ್ ಕುರಿತು ನ್ಯಾನೋ ತಂತ್ರಜ್ಞಾನ ಸಂಶೋಧನೆಯಲ್ಲಿ ಅಗ್ರಗಣ್ಯ ಸಂಸ್ಥೆಯಾದ ಲೈಲಾನ್ ಪ್ರಿಸಿಷನ್ ಆಂಕಾಲಜಿ ಸಂಸ್ಥೆಯ ಅಧ್ಯಕ್ಷ ಜಾನ್ ತರಂತಿನೋ ಅವರು ಗಜಾನನ ಭಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.