
ಶಿರಸಿ: ‘ಸಂವಿಧಾನ ಮತ್ತು ಕಾನೂನು ಚೌಕಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆಯಾಗಿರುವ ಅಧಿಕಾರಗಳು ಪೂರ್ಣಪ್ರಮಾಣದಲ್ಲಿ ಸ್ಥಳೀಯ ಸಂಸ್ಥೆಗಳಿಗೇ ಸಿಗಬೇಕು. ಆದರೆ ಕಳೆದ ಕೆಲವು ದಶಕಗಳಿಂದ ಈ ಅಧಿಕಾರವನ್ನು ಮೇಲ್ಹಂತದ ಅಧಿಕಾರಿಗಳು ಹಾಗೂ ವ್ಯವಸ್ಥೆ ಕಸಿದುಕೊಂಡು ಬಳಸುತ್ತಿರುವುದು ವಿಷಾದನೀಯ’ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಕುರಿತಾದ ಕೆಡಿಪಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ‘ಇಂದಿನ ರಾಜಕಾರಣಿಗಳು ಅಭಿವೃದ್ಧಿ ವ್ಯವಸ್ಥೆಯ ಸುಧಾರಣೆಗಿಂತ ರಾಜಕೀಯದತ್ತಲೇ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ, ಇದು ವ್ಯವಸ್ಥೆಯ ಹಿನ್ನಡೆಗೆ ಕಾರಣವಾಗಿದೆ. ಆದರೆ ಜನಸಾಮಾನ್ಯರ ಆಶೋತ್ತರಗಳು ಸರ್ಕಾರದ ಯೋಜನೆಗಳಲ್ಲಿ ಪ್ರತಿಫಲಿಸಬೇಕು. ಅಭಿವೃದ್ಧಿ ಎನ್ನುವುದು ಕೇವಲ ಅಂಕಿ-ಅಂಶವಾಗದೇ ಜನರ ಬದುಕಿನಲ್ಲಿ ಬದಲಾವಣೆ ತರಬೇಕು. ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಾಗ ಸಾರ್ವಜನಿಕರ ಅಪೇಕ್ಷೆಯನ್ನು ಸೇರ್ಪಡೆಗೊಳಿಸಿ, ಸಮಗ್ರ ಯೋಜನೆ ಸಿದ್ಧಪಡಿಸಬೇಕು’ ಎಂದು ಅವರು ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಬಿ.ಪಿ. ಸತೀಶ ,‘ಜಿಲ್ಲೆಯಲ್ಲಿ ಹೊಸ ಕಟ್ಟಡಗಳ ನಿರ್ಮಾಣ, ಕಾಂಪೌಂಡ್, ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆ, ಆಧುನಿಕ ಯಂತ್ರೋಪಕರಣಗಳ ಖರೀದಿ, ಜೇನು ಸಾಕಾಣಿಕೆಗೆ ಪೂರಕವಾದ ಜೇನುಪೆಟ್ಟಿಗೆಗಳ ವಿತರಣೆ ಹಾಗೂ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಎಲ್ಲಾ ಕಾಮಗಾರಿಗಳಿಗಾಗಿ ಒಟ್ಟು ₹66.72 ಕೋಟಿ ಮೊತ್ತದ ಕರಡು ಯೋಜನೆಯನ್ನು ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿದೆ’ ಎಂದು ವಿವರ ನೀಡಿದರು.
ಗ್ರಾಮ ಪಂಚಾಯಿತಿಗಳ ಪರವಾಗಿ ಮಾತನಾಡಿದ ಕೊಡ್ನಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ ಹೆಗಡೆ, ‘ಪ್ರಸ್ತುತ ಜನಸಂಖ್ಯೆ ಆಧಾರಿತವಾಗಿ ಅನುದಾನ ಹಂಚಿಕೆಯಾಗುತ್ತಿದೆ. ಆದರೆ ಮಲೆನಾಡು ಭಾಗದಲ್ಲಿ ಭೌಗೋಳಿಕವಾಗಿ ವಿಸ್ತಾರವಾಗಿರುವ ಪಂಚಾಯಿತಿಗಳಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ಕಾಮಗಾರಿಗಳ ವ್ಯಾಪ್ತಿ ದೊಡ್ಡದಾಗಿರುತ್ತದೆ. ಅಂತಹ ಕಡೆಗಳಲ್ಲಿ ಅಭಿವೃದ್ಧಿ ನಡೆಸಲು ಅನುದಾನದ ಕೊರತೆಯಾಗುತ್ತಿದೆ’ ಎಂದು ಗಮನ ಸೆಳೆದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಮಾತನಾಡಿ, ‘ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳು ಉತ್ತಮ ಆಂತರಿಕ ಆದಾಯವನ್ನು ಹೊಂದಿವೆ. ಅಂತಹ ಪಂಚಾಯಿತಿಗಳು ತಮ್ಮ ಆದಾಯಕ್ಕೆ ಅನುಗುಣವಾಗಿ ಪ್ರತ್ಯೇಕ ಹಾಗೂ ಪರಿಣಾಮಕಾರಿ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ತಳಮಟ್ಟದ ಕ್ರಿಯಾಯೋಜನೆ ಸಿದ್ಧಪಡಿಸುವುದರಿಂದ ಗ್ರಾಮಗಳ ಅಭಿವೃದ್ಧಿಗೂ ಅನುಕೂಲ ಆಗುತ್ತದೆ. ಯೋಜನೆ ರೂಪಿಸುವಾಗ ಸಂಪನ್ಮೂಲಗಳನ್ನು ಗುರುತಿಸಬೇಕು.ಸುಸ್ಥಿರ ಅಭಿವೃದ್ಧಿಯ ಗುರಿ ಇರಬೇಕು’ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷ ಎಂ.ಕೆ. ಭಟ್ ಯಡಳ್ಳಿ ಅವರು ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಶ ಶಶಿ, ಅಭಿವೃದ್ಧಿ ಸಮಿತಿ ನಿಕಟಪೂರ್ವ ಉಪಾಧ್ಯಕ್ಷ ಪ್ರಮೋದ ಹೆಗಡೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತ ಸ್ವಾಗತಿಸಿದರು.
ಗ್ರಾಮೀಣ ಭಾಗದ ಪ್ರಮುಖ ವಹಿವಾಟು ರಸ್ತೆಗಳನ್ನು ಅಧಿಕೃತವಾಗಿ ನೋಂದಾಯಿಸಿ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಹಾಗೂ ಮಲೆನಾಡಿನ ಅವಶ್ಯಕತೆಯಾದ ಕಾಲುಸಂಕಗಳ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕು.ಪ್ರಮೋದ ಹೆಗಡೆ ಅಭಿವೃದ್ಧಿ ಸಮಿತಿ ನಿಕಟಪೂರ್ವ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.