
ಅಂಕೋಲಾ: ತಾಲ್ಲೂಕಿನ ಅಗಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಳೆಬೈಲ್ ಗ್ರಾಮದಲ್ಲಿ ಕಳೆದ ಕೆಲ ತಿಂಗಳಿಂದ ಗ್ರಾಮದಲ್ಲಿರುವ ಏಕೈಕ ನೀರು ಪೂರೈಸುತ್ತಿರುವ ಕೊಳವೆಬಾವಿ ಕೆಟ್ಟಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ಗ್ರಾಮದಲ್ಲಿ ವಾಸವಿರುವ ಹಾಲಕ್ಕಿ ಜನಾಂಗದ 50ಕ್ಕೂ ಹೆಚ್ಚು ಮನೆಗಳಿಗೆ ಇದೇ ಕೊಳವೆಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಕೊಳವೆಬಾವಿ ಕೆಟ್ಟಿದ್ದರಿಂದ ಕುಡಿಯುವ ನೀರು ಪೂರೈಕೆಯಾಗುವುದು ಸ್ಥಗಿತಗೊಂಡಿದೆ. ಸಂಬಂಧಿಸಿದ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯವರು ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ.
‘ಅನೇಕ ಬಾರಿ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿರುವ ಅಂಗನವಾಡಿ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೂ ಸಹ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಶಾಲೆಗೆ ತಾತ್ಕಾಲಿಕವಾಗಿ ಖಾಸಗಿ ಬೊರ್‌ವೇಲ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಊರಿನಲ್ಲಿರುವ ಕೆಲ ಮನೆಯ ಬಾವಿಯ ಮೂಲಕ ಸದ್ಯಕ್ಕೆ ಕುಡಿಯುವ ನೀರನ್ನು ಪಡೆಯುತ್ತಿದ್ದೇವೆ. ಆದರೆ ಮುಂಬರುವ ಬೇಸಿಗೆಯಲ್ಲಿ ಬಾವಿಯ ನೀರು ಬತ್ತಿ ಹೋದರೆ ತೀವ್ರ ತೊಂದರೆಗೆ ಒಳಗಾಗಬೇಕಾಗುತ್ತದೆ’ ಎಂದು ಸ್ಥಳೀಯ ಯುವಕರು ದೂರಿದರು.
‘ಗ್ರಾಮ ಪಂಚಾಯಿತಿಯವರು ಶೀಘ್ರ ಕೊಳವೆಬಾವಿ ಸರಿಪಡಿಸಿ ನೀರು ಪೂರೈಸುವ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟಿಸಲಾಗುವುದು’ ಎಂದು ಗ್ರಾಮಸ್ಥರಾದ ಶ್ರೀಧರ್ ಗೌಡ, ತಾಕು ಗೌಡ, ಶೋಭಾ ಗೌಡ, ಸರೋಜಾ ಗೌಡ, ಮಂಜುನಾಥ ಪಾಲಂಕರ್, ಜಾನಿ ಡಿಸೋಜ, ಮಂಜು ಗೌಡ ಇತರರು ಎಚ್ಚರಿಸಿದ್ದಾರೆ.
ಸರಳೆಬೈಲ್ ಗ್ರಾಮದಲ್ಲಿ ಬೇರೆ ಜಲಮೂಲ ಇಲ್ಲದ ಕಾರಣ ನೀರಿನ ಸಮಸ್ಯೆ ಉಂಟಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸುತ್ತೇವೆಸರೋಜಾ ನಾಯ ಪಿಡಿಒ ಅಗಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.