ADVERTISEMENT

10 ಅಡಿಗೂ ಎತ್ತರ ಹಾರಿ ಕಲ್ಲು ಕ್ವಾರಿಗೆ ಬಿದ್ದ ಕಾರು: ಒಬ್ಬ ಸಾವು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 7:27 IST
Last Updated 1 ಅಕ್ಟೋಬರ್ 2020, 7:27 IST
ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ಕಾರು
ಅಪಘಾತದಲ್ಲಿ ನುಜ್ಜುಗುಜ್ಜಾಗಿರುವ ಕಾರು   

ಗೋಕರ್ಣ: ಇಲ್ಲಿಯ ಚೌಡಗೇರಿ ಶಾಲೆಯ ಬಳಿ ಬುಧವಾರ ಮಧ್ಯರಾತ್ರಿ ಅತಿ ವೇಗದಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 10 ಅಡಿಗಿಂತಲೂ ಎತ್ತರ ಹಾರಿ, ರಸ್ತೆಯಿಂದ 20 ಅಡಿಗಿಂತಲೂ ದೂರದಲ್ಲಿರುವ ಕಲ್ಲು ಕ್ವಾರಿಗೆ ಬಿದ್ದಿದೆ. ಅಪಘಾತದಲ್ಲಿ ಒಬ್ಬ ಮೃತಪಟ್ಟಿದ್ದಾರೆ.

ಮೂಲತಃ ಅಗರಗೋಣ ನಿವಾಸಿಯಾಗಿದ್ದು, ಅಂಕೋಲಾದಲ್ಲಿ ನೆಲೆಸಿರುವ ಗೌರವ ದೇವರಾಜ ಗೋಳಿಕಟ್ಟೆ (25) ಮೃತಪಟ್ಟವರು. ತಮ್ಮ ಮೂವರು ಗೆಳೆಯರೊಂದಿಗೆ ಅಗರಗೋಣದಿಂದ ಅಂಕೋಲಾಕ್ಕೆ ತಿರುಗಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಎಲ್ಲಾ ಘಟನೆ ಸಿನಿಮೀಯ ರೀತಿಯಲ್ಲಿ ನಡೆದಿದ್ದು, ಗೌರವ ಅವರೇ ಕಾರು ಚಲಾಯಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಅತಿ ವೇಗದಲ್ಲಿದ್ದ ಕಾರನ್ನು ಚೌಡಗೇರಿಯ ಶಾಲೆಯ ಬಳಿ ತಿರುಗಿಸಲು ಪ್ರಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿತು. 10 ಅಡಿಗಿಂತ ಎತ್ತರಕ್ಕೆ ಹಾರಿ ಮರದ ಎರಡು ಟೊಂಗೆಗಳ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಟೊಂಗೆ ಮರಿದು, ನೀರಿನಿಂದ ತುಂಬಿದ್ದ ಕಲ್ಲು ಕ್ವಾರಿಯಲ್ಲಿ ಕಾರು ಉಲ್ಟಾ ಬಿದ್ದಿದೆ.

ADVERTISEMENT

ಗೌರವ ಹೊರತು ಪಡಿಸಿ ಉಳಿದ ಮೂವರಾದ ಹನೀಶ ನಾಯಕ, ವರುಣ ನಾಯಕ ಮತ್ತು ರಜತ ನಾಯಕ ಮೇಲೆದ್ದು ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಪಿ.ಎಸ್. ಐ. ನವೀನ್ ನಾಯ್ಕ ಮತ್ತು ಸಿಬ್ಬಂದಿ ಹರಸಾಹಸ ಪಟ್ಟು ಕ್ರೇನಿನ ಮುಖಾಂತರ ಕಾರನ್ನು ತೆಗೆದರು. ಎರಡು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ಮಾಡಲಾಯಿತು.

ತಂದೆಗೆ ಕೋವಿಡ್: ಮೃತಪಟ್ಟ ಗೌರವನ ತಂದೆ ಶಿಕ್ಷಕರಾಗಿದ್ದು, ಕೋವಿಡ್‌ನಿಂದ ಮಂಗಳೂರಿನ ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ತಾಯಿ ಮತ್ತು ತಂಗಿ ಮನೆಯಲ್ಲಿಯೇ ಕ್ವಾರೆಂಟೈನ್ ನಲ್ಲಿದ್ದಾರೆ. ಗೌರವನಿಗೂ ಕೋವಿಡ್ ಇರಬಹುದೆಂದು ಅನುಮಾನವಿದ್ದು, ಶವದ ಕೋವಿಡ್ ಪರೀಕ್ಷೆ ನಡೆಸಿಯೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಿ.ಎಸ್.ಐ. ನವೀನ್ ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.