ADVERTISEMENT

ಉತ್ತರ ಕನ್ನಡ: ಜಿಲ್ಲೆಯ ಆರು ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯ ತಾಲೀಮು

‘ಡ್ರೈ ರನ್’ಗೆ ಸಿದ್ಧತೆ ಪೂರ್ಣ: ‘ಕೊರೊನಾ ಯೋಧ’ರಿಗೆ ಮೊದಲು ಲಸಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 16:32 IST
Last Updated 7 ಜನವರಿ 2021, 16:32 IST
ಉತ್ತರ ಕನ್ನಡದ ಆರು ಕೇಂದ್ರಗಳಲ್ಲಿ ಲಸಿಕೆಯ ತಾಲೀಮು ನಡೆಯಲಿದೆ
ಉತ್ತರ ಕನ್ನಡದ ಆರು ಕೇಂದ್ರಗಳಲ್ಲಿ ಲಸಿಕೆಯ ತಾಲೀಮು ನಡೆಯಲಿದೆ   

ಕಾರವಾರ: ಜಿಲ್ಲೆಯಲ್ಲಿ ಮೊದಲನೇ ಹಂತದ ಕೋವಿಡ್–19 ಲಸಿಕಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಜ.8ರಂದು ಬೆಳಿಗ್ಗೆ 10ಕ್ಕೆ ತಾಲೀಮು (ಡ್ರೈ ರನ್) ನಡೆಯಲಿದೆ. ಜಿಲ್ಲೆಯ ಆರು ಕೇಂದ್ರಗಳಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಿದ್ಧತೆ ಪೂರ್ಣಗೊಂಡಿದೆ.

ಸಾಂಕ್ರಾಮಿಕ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ‘ಕೊರೊನಾ ಯೋಧ’ರು ಮೊದಲ ಹಂತದಲ್ಲಿ ಲಸಿಕೆ ಪಡೆಯಲಿದ್ದಾರೆ. ಇದರ ಭಾಗವಾಗಿ ಆಯ್ದ ಮಂದಿಯನ್ನು ಮಾತ್ರ ಬಳಸಿಕೊಂಡು ಡ್ರೈ ರನ್ ಕಾರ್ಯಾಚರಣೆ ನಡೆಯಲಿದೆ. ಈ ಕಾರ್ಯಕ್ಕೆ ವೀಕ್ಷಕರನ್ನು ನೇಮಕ ಮಾಡಿಜಿಲ್ಲಾಧಿಕಾರಿ ಗುರುವಾರ ಆದೇಶಿಸಿದ್ದಾರೆ.

ಸರಿಯಾದ ಸಮಯಕ್ಕೆ ಸ್ಥಳದಲ್ಲಿ ಹಾಜರಿದ್ದು, ಲಸಿಕಾ ಕಾರ್ಯದ ತಾಲೀಮು ಯಶಸ್ವಿಯಾಗಲು ಕ್ರಮ ಕೈಗೊಳ್ಳಬೇಕು. ಈ ಕಾರ್ಯಕ್ರಮದ ಸಾಧಕ–ಬಾಧಕಗಳ ಬಗ್ಗೆ ಸ್ಪಷ್ಟವಾದ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಲಿಖಿತವಾಗಿ ಬರೆದು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ತಾಲೀಮಿನ ಸಂದರ್ಭದಲ್ಲಿ ಯಾವುದಾದರೂ ಲೋಪದೋಷಗಳು ಕಂಡುಬಂದರೆ, ಲಸಿಕಾ ಕಾರ್ಯಕ್ರಮದ ಸಂದರ್ಭದಲ್ಲಿ ಅವುಗಳನ್ನು ಸರಿಪಡಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ವರದಿ ಕೊಡಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ.

ADVERTISEMENT

ಏನಿದು ‘ಡ್ರೈ ರನ್’?: ‘ಕೋವಿಡ್ ಲಸಿಕೆ ನೀಡುವ ಪೂರ್ವದಲ್ಲಿ ಹಮ್ಮಿಕೊಳ್ಳುವ ಅಣಕು ಕಾರ್ಯಾಚರಣೆಯೇ ಡ್ರೈ ರನ್. ಇದರಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯವೊಂದನ್ನು ಹೊರತುಪಡಿಸಿ ಮತ್ತೆಲ್ಲ ಹಂತಗಳನ್ನೂ ಚಾಚೂ ತಪ್ಪದೇ ಪಾಲಿಸಲಾಗುತ್ತದೆ. ಲಸಿಕೆ ನೀಡುವ ಕಾರ್ಯಕ್ಕೆ ನಮ್ಮ ಸಿದ್ಧತೆಯನ್ನು ಪರಿಶೀಲಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.‌

ವಿವಿಧ ಹಂತಗಳನ್ನು ವಿವರಿಸಿದ ಅವರು, ‘ಒಟ್ಟು ಪ್ರಕ್ರಿಯೆಗಳು ಮೂರು ಕೊಠಡಿಗಳಲ್ಲಿ ಆಗುತ್ತವೆ. ಮೊದಲನೇ ಕೊಠಡಿಯಲ್ಲಿ, ಕಾರ್ಯಾಚರಣೆಯಲ್ಲಿ ಭಾಗವಹಿಸಲು ಹೆಸರು ನೋಂದಣಿ ಮಾಡಿಕೊಂಡ ವ್ಯಕ್ತಿಯ ಆಧಾರ್ ಕಾರ್ಡ್ ಮುಂತಾದ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುತ್ತದೆ. ಅಲ್ಲಿ ಪೊಲೀಸ್ ಸೇರಿದಂತೆ ಇತರ ಭದ್ರತಾ ವ್ಯವಸ್ಥೆ ಇರುತ್ತದೆ’ ಎಂದರು.

‘ಎರಡನೇ ಕೊಠಡಿಯಲ್ಲಿ ಲಸಿಕೆ ನೀಡುವ ಅಣಕು ಮಾಡಲಾಗುತ್ತದೆ. ಬಳಿಕ ಆ ವ್ಯಕ್ತಿಯನ್ನು ಮೂರನೇ ಕೊಠಡಿಗೆ ಕಳುಹಿಸಿ, ಆರೋಗ್ಯದ ಮೇಲೆ ಅರ್ಧ ಗಂಟೆ ನಿಗಾ ವಹಿಸಲಾಗುತ್ತದೆ. ಈ ಎಲ್ಲ ಹಂತಗಳನ್ನೂ ಡ್ರೈ ರನ್‌ ಮೂಲಕಅಣಕು ರೂಪದಲ್ಲಿ ಪಾಲಿಸಲಾಗುತ್ತದೆ. ಇದರಲ್ಲಿ ಆಗಿರುವ ಲೋಪಗಳನ್ನು ಪತ್ತೆ ಹಚ್ಚಿ ಸರಿಪಡಿಲಾಗುತ್ತದೆ’ ಎಂದು ವಿವರಿಸಿದರು.

ಶಿರಸಿ ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಹೆಗಡೆಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.