ADVERTISEMENT

ಪರಿಸರ ಸೂಕ್ಷ್ಮ ವಲಯದಲ್ಲಿ ಹೆಚ್ಚಿದ ಮೋಜು

ನಿಯಮ ಉಲ್ಲಂಘಿಸಿ ಪ್ರವಾಸಿಗರ ಓಡಾಟ: ವನ್ಯಜೀವಿಗಳಿಗೆ ಅಡ್ಡಿಯಾಗುವ ಆರೋಪ

ಗಣಪತಿ ಹೆಗಡೆ
Published 19 ಆಗಸ್ಟ್ 2025, 3:20 IST
Last Updated 19 ಆಗಸ್ಟ್ 2025, 3:20 IST
ಜೊಯಿಡಾ ತಾಲ್ಲೂಕಿನ ಇಳಿಯೆಧಾಬೆಯ ವಜ್ರ ಜಲಪಾತದ ಬಳಿ ಪ್ರವಾಸಿಗರು ವಿಹರಿಸುತ್ತಿರುವುದು 
ಜೊಯಿಡಾ ತಾಲ್ಲೂಕಿನ ಇಳಿಯೆಧಾಬೆಯ ವಜ್ರ ಜಲಪಾತದ ಬಳಿ ಪ್ರವಾಸಿಗರು ವಿಹರಿಸುತ್ತಿರುವುದು    

ಕಾರವಾರ: ವಾರಾಂತ್ಯ ಬಂದರೆ ಸಾಕು ಜೊಯಿಡಾ, ದಾಂಡೇಲಿಯ ಪರಿಸರ ಸೂಕ್ಷ್ಮ ವಲಯಕ್ಕೆ ಲಗ್ಗೆ ಇಡುವ ಪ್ರವಾಸಿಗರು ಮೋಜು–ಮಸ್ತಿ ನಡೆಸುತ್ತಿರುವ ಪರಿಣಾಮ ವನ್ಯಜೀವಿಗಳ ಮೇಲೆ ಅಡ್ಡಪರಿಣಾಮ ಬೀರುತ್ತಿದೆ ಎಂಬ ಆರೋಪ ಹೆಚ್ಚುತ್ತಿದೆ.

ಜೊಯಿಡಾ ತಾಲ್ಲೂಕಿನ ಇಳಿಯೆಧಾಬೆಯಲ್ಲಿರುವ ವಜ್ರ ಜಲಪಾತ ಈಚೆಗೆ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸತೊಡಗಿದ್ದು, ಪರಿಸರ ಸೂಕ್ಷ್ಮ ವಲಯದಲ್ಲಿರುವ ಈ ಪ್ರದೇಶದಲ್ಲಿ ಪ್ರವಾಸಿಗರ ಮೋಜುಮಸ್ತಿ ಹೆಚ್ಚುತ್ತಿದೆ. ನದಿ ದಡದಲ್ಲಿರುವ ಅರಣ್ಯದಲ್ಲಿ ರಾಶಿಗಟ್ಟಲೆ ಬಿದ್ದಿರುವ ಪ್ಲಾಸ್ಟಿಕ್, ಮದಯದ ಖಾಲಿ ಬಾಟಲಿಗಳು ಇಲ್ಲಿನ ಅವಸ್ಥೆಗೆ ನಿದರ್ಶನವಾಗಿದೆ. ಈ ಪ್ರದೇಶ ಕಾಳಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಿಂದ ಕೇವಲ 200 ರಿಂದ 500 ಮೀ ದೂರದಲ್ಲಿದೆ.

‘ಹುಲಿ ಸಂರಕ್ಷಿತಾರಣ್ಯದಷ್ಟೆ ಅದರ ಹೊರವಲಯವೂ ಪರಿಸರ ಸೂಕ್ಷ್ಮ ಸ್ಥಳವಾಗಿರುತ್ತವೆ. ಅಲ್ಲಿಯೂ ಹುಲಿ, ಚಿರತೆ, ಇನ್ನಿತರ ವನ್ಯಜೀವಿಗಳ ಓಡಾಟ ಇದ್ದೇ ಇರುತ್ತವೆ. ಅಂತಹ ಸ್ಥಳಗಳಲ್ಲಿ ಮನುಷ್ಯರ ಓಡಾಟಕ್ಕೆ ಕಡಿವಾಣ ಬೀಳಬೇಕು ಎಂದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಹೇಳುತ್ತದೆ. ಆದರೆ, ಇಳಿಯೆಧಾಬೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ’ ಎಂದು ಪರಿಸರ ಕಾರ್ಯಕರ್ತರೊಬ್ಬರು ಆರೋಪಿಸಿದರು.

ADVERTISEMENT

‘ವಜ್ರ ಜಲಪಾತ ನೋಡಲು ವಾರಾಂತ್ಯದಲ್ಲಿ ನೂರಾರು ಪ್ರವಾಸಿಗರು ಬರುತ್ತಿದ್ದಾರೆ. ಹೀಗೆ ಬಂದವರ ಪೈಕಿ ಹಲವರು ಇಲ್ಲಿನ ನದಿ ತಟದಲ್ಲಿಯೇ ಟೆಂಟ್‌ಗಳನ್ನು ಹೂಡಿ, ಸ್ಟೋವ್‌ಗಳನ್ನು ಉರಿಸಿಕೊಂಡು ಅಡುಗೆ ಮಾಡಿಕೊಂಡು ಆಹಾರ ಸೇವನೆ ಜೊತೆಗೆ ಮದ್ಯ ಸೇವನೆಯಂತಹ ಚಟುವಟಿಕೆಯನ್ನೂ ನಡೆಸುತ್ತಿದ್ದಾರೆ. ತಿಂಡಿ ತಿನಿಸುಗಳನ್ನು ತಂದ ಪ್ಲಾಸ್ಟಿಕ್ ಚೀಲಗಳನ್ನು, ಬಾಟಲಿಗಳನ್ನು ಇಲ್ಲಿಯೇ ಎಸೆದು ಹೋಗಲಾಗುತ್ತಿದೆ. ಇವು ಆಹಾರ ಅರಸಿ ಬರುವ ವನ್ಯಜೀವಿಗಳ ಮೇಲೆ ಅಡ್ಡ ಪರಿಣಾಮ ಬೀರುತ್ತಿವೆ’ ಎಂದೂ ದೂರಿದರು.

‘ಇಳಿಯೆಧಾಬೆಯಷ್ಟೇ ಅಲ್ಲದೆ ಹುಲಿ ಸಂರಕ್ಷಿತಾರಣ್ಯದ ಅಂಚಿನ ಪ್ರದೇಶಗಳ ಹಲವೆಡೆ ಇಂತಹ ಚಟುವಟಿಕೆ ನಡೆಯುತ್ತಿದೆ. ಇಳವಾ, ಪಾಟೋಲಿ, ಜಗಲಬೇಟ್ ಸೇರಿದಂತೆ ವಿವಿಧೆಡೆ ಇರುವ ಕೆಲವು ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ತಂಗುವ ಪ್ರವಾಸಿಗರು ಪರಿಸರ ಸೂಕ್ಷ್ಮ ವಲಯಕ್ಕೆ ಲಗ್ಗೆ ಇಟ್ಟು ಪಾರ್ಟಿ ನಡೆಸುತ್ತಿದ್ದರೂ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುಂದಾಗುತ್ತಿಲ್ಲ’ ಎಂದು ಆಕ್ಷೇಪಿಸಿದರು.

ಜೊಯಿಡಾ ತಾಲ್ಲೂಕಿನ ಜಗಲಬೇಟ್ ವಲಯ ಅರಣ್ಯ ವ್ಯಾಪ್ತಿಯ ಇಳಿಯೆಧಾಬೆಯ ಅರಣ್ಯದಲ್ಲಿ ಪ್ರವಾಸಿಗರು ಗ್ಯಾಸ್ ಸ್ಟೋವ್ ಆಹಾರ ಪರಿಕರ ಹೊತ್ತು ಸಾಗುತ್ತಿರುವುದು
ವಜ್ರ ಜಲಪಾತ ಸೇರಿದಂತೆ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸಂಚರಿಸದಂತೆ ಪ್ರವಾಸಿ ಚಟುವಟಿಕೆ ನಡೆಸದಂತೆ ಎಚ್ಚರಿಸುವ ಫಲಕ ಅವಡಿಸಲಾಗಿದೆ. ಅದನ್ನು ಉಲ್ಲಂಘಿಸಿ ಸಾಗಿದ್ದರೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು
ಕೆ.ಸಿ.ಪ್ರಶಾಂತ ಕುಮಾರ್ ಹಳಿಯಾಳ ಡಿಸಿಎಫ್

ಮಾನವ–ವನ್ಯಜೀವಿ ಸಂಘರ್ಷಕ್ಕೆ ಕಾರಣ

‘ಪರಿಸರ ಸೂಕ್ಷ್ಮ ವಲಯದಲ್ಲಿ ಪ್ರವಾಸಿಗರ ಓಡಾಟಕ್ಕೆ ಅವಕಾಶ ಕಲ್ಪಿಸುವ ಮೂಲಕ ಪರಿಸರ ವನ್ಯಜೀವಿಗಳಿಗೆ ಅಡ್ಡಿಪಡಿಸಲಾಗುತ್ತಿದೆ. ದಟ್ಟ ಕಾಡಿನಲ್ಲಿ ಆಹಾರ ಬೇಯಿಸಲು ಅವಕಾಶ ಇಲ್ಲದಿದ್ದರೂ ನೂರಾರು ಪ್ರವಾಸಿಗರು ಸ್ಥಳದಲ್ಲೇ ಆಹಾರ ಸಿದ್ಧಪಡಿಸಿ ಸೇವಿಸುತ್ತಿದ್ದಾರೆ. ಅಲ್ಲಿ ಬಿಸಾಡಿ ಹೋಗುವ ಪದಾರ್ಥಗಳ ವಾಸನೆ ಹಿಡಿದು ಬರುವ ವನ್ಯಜೀವಿಗಳಿಗೆ ಇದು ಕಿರಿಕಿರ ಉಂಟುಮಾಡಬಹುದು. ಮೋಜು–ಮಸ್ತಿಯಿಂದ ಅವುಗಳಿಗೆ ತೊಂದರೆಯಾಗಬಹುದು. ಇದರಿಂದ ಜೊಯಿಡಾ ಭಾಗದಲ್ಲಿ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಬಹುದು. ಈಚೆಗೆ ಕರಡಿ ದಾಳಿ ಹೆಚ್ಚುವಲ್ಲಿ ಇದೂ ಒಂದು ಕಾರಣವಾಗಿರಬಹುದು’ ಎಂದು ಪರಿಸರ ಕಾರ್ಯಕರ್ತರೊಬ್ಬರು ಸಮಸ್ಯೆ ವಿಶ್ಲೇಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.