ಆರ್ಥಿಕ ಸಮೀಕ್ಷೆ
ಕಾರವಾರ: ದೊಡ್ಡ ಮಟ್ಟದ ಕೈಗಾರಿಕೆ, ಹೇಳಿಕೊಳ್ಳುವಂತ ಸೇವಾ ವಲಯಗಳಿಲ್ಲದಿದ್ದರೂ ಜಿಲ್ಲೆಯ ಆರ್ಥಿಕ ಸ್ಥಿತಿಗತಿ ಸಾಧಾರಣ ಸ್ಥಿತಿಯಲ್ಲಿದ್ದು, ಈ ಹಿಂದೆ ಹಿಂದುಳಿದ ಪಟ್ಟಿಯಲ್ಲಿದ್ದ ಸಿದ್ದಾಪುರ ತಾಲ್ಲೂಕು ರಾಜ್ಯದ ಸರಾಸರಿ ತಲಾ ಆದಾಯಕ್ಕಿಂತ ಶೇ 1.10ರಷ್ಟು ಹೆಚ್ಚು ಆದಾಯ ಹೊಂದಿದೆ ಎಂಬುದನ್ನು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಆರ್ಥಿಕ ಸಮೀಕ್ಷಾ ವರದಿ ಹೇಳುತ್ತಿದೆ.
ನಿರ್ದೇಶನಾಲಯವು ಈಚೆಗೆಷ್ಟೆ ಸರ್ಕಾರಕ್ಕೆ 2023–24ನೇ ಸಾಲಿನ ಜಿಲ್ಲಾವಾರು ಆರ್ಥಿಕ ಸಮೀಕ್ಷೆ ವರದಿ ಸಲ್ಲಿಸಿದೆ. ತಾಲ್ಲೂಕುವಾರು ಆರ್ಥಿಕ ಸ್ಥಿತಿಗತಿಯ ವರದಿಯು ಸದ್ಯ 2022–23ನೇ ಸಾಲಿಗೆ ಕೊನೆಗೊಂಡಿದೆ. ಈ ವರದಿ ಅನ್ವಯ ಸಿದ್ದಾಪುರ ತಾಲ್ಲೂಕಿನ ಜನರ ಸರಾಸರಿ ತಲಾ ಆದಾಯ ವಾರ್ಷಿಕ ₹3,33,859 ರಷ್ಟಿದೆ. ಇದೇ ಅವಧಿಯಲ್ಲಿ ರಾಜ್ಯದ ಸರಾಸರಿ ತಲಾ ಆದಾಯ ₹3,04,474 ಇತ್ತು.
ಆರ್ಥಿಕ ಚಟುವಟಿಕೆಗಳು ಹೆಚ್ಚಿಲ್ಲದ ತಾಲ್ಲೂಕಿನಲ್ಲಿ ಜಿಲ್ಲೆಯ ಉಳಿದ ತಾಲ್ಲೂಕುಗಳಿಗಿಂತ ಒಂದೂವರೆ ಪಟ್ಟು ಹೆಚ್ಚು ಆದಾಯ ಇರುವುದು ಅಚ್ಚರಿ ಮೂಡಿಸಿದೆ. ವಾಣಿಜ್ಯ ಚಟುವಟಿಕೆಗಳು ವಿಫುಲವಾಗಿರುವ ಶಿರಸಿ, ಕುಮಟಾ, ಭಟ್ಕಳ, ಕಾರವಾರಕ್ಕಿಂತ ಕುಗ್ರಾಮಗಳೇ ಅಧಿಕವಾಗಿರುವ ತಾಲ್ಲೂಕು ತಲಾ ಆದಾಯ ಪ್ರಮಾಣದಲ್ಲಿ ಮುಂದಿದೆ ಎಂಬುದನ್ನು 2022–23ರ ಆರ್ಥಿಕ ಸಮೀಕ್ಷಾ ವರದಿ ಸಾರಿದೆ. ಈ ಅವಧಿಯಲ್ಲಿ ಜಿಲ್ಲೆಯ ಸರಾಸರಿ ತಲಾ ಆದಾಯವು ₹2,20,984 ರಷ್ಟಿದ್ದು, ರಾಜ್ಯದ ಒಟ್ಟಾರೆ ಸರಾಸರಿಗೆ ಹೋಲಿಕೆ ಮಾಡಿದರೆ ಶೇ 0.73ರಷ್ಟಿದೆ.
‘ಆರ್ಥಿಕ ಸಮೀಕ್ಷೆ ನಡೆಸಿ, ತಲಾ ಆದಾಯ ಮಾಹಿತಿ ಪಡೆಯಲು ರಾಜ್ಯದ 21 ವಲಯಗಳನ್ನು ಪರಿಗಣನೆಗೆ ಪಡೆದು ಅವುಗಳ ವಾರ್ಷಿಕ ವಹಿವಾಟು ಮಾಹಿತಿ ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆಗಳು ಪ್ರಧಾನವಾಗಿದ್ದು, ಅವುಗಳೊಂದಿಗೆ ಇಲ್ಲಿನ ಸೇವಾ ವಲಯದ ಒಟ್ಟಾರೆ ವಹಿವಾಟನ್ನೂ ಪರಿಗಣಿಸಿ ತಲಾ ಆದಾಯ ಲೆಕ್ಕಾಚಾರ ಹಾಕಲಾಗಿದೆ. ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆ ಕ್ಷೇತ್ರಗಳಲ್ಲಿ ಸಿದ್ದಾಪುರ ತಾಲ್ಲೂಕು ಉತ್ತಮ ಆದಾಯ ಗಳಿಕೆಯಲ್ಲಿದೆ. ಹೀಗಾಗಿ ಅಲ್ಲಿನ ತಲಾ ಆದಾಯವೂ ಏರಿಕೆಯಾಗಿದೆ’ ಎಂದು ರಾಜ್ಯದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ನರಸಿಂಹ ಫಣಿ ‘ಪ್ರಜಾವಾಣಿ’ಗೆ ವಿವರಿಸಿದರು.
ತಲಾ ಆದಾಯ ಮಾಹಿತಿ ಪರಿಗಣನೆಗೆ 21 ವಲಯಗಳ ಒಟ್ಟಾರೆ ವಹಿವಾಟು ಲೆಕ್ಕಾಚಾರ ಹಾಕಲಾಗುತ್ತಿದ್ದರೂ ಉತ್ತರ ಕನ್ನಡದ ತಲಾ ಆದಾಯ ನಿರ್ಧರಿಸಲು ಕೃಷಿ, ಸೇವಾ ವಲಯ ಮತ್ತು ಮೀನುಗಾರಿಕೆ ಕ್ಷೇತ್ರದ ಆದಾಯವೇ ಪ್ರಧಾನ ಅಂಶವಾಗುತ್ತಿದೆ.– ನರಸಿಂಹ ಫಣಿ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ
ಜಿಲ್ಲೆಯಲ್ಲಿ ದೊಡ್ಡಮಟ್ಟದ ಕೈಗಾರಿಕೆಗಳಿಲ್ಲದಿರುವುದು, ಸೇವಾ ವಲಯಗಳ ವಹಿವಾಟು ಹೆಚ್ಚಿಲ್ಲದಿರುವುದು ತಲಾ ಆದಾಯ ಪ್ರಮಾಣ ಇನ್ನೂ ಏರಿಕೆಯಾಗದಿರಲು ಪ್ರಮುಖ ಕಾರಣವಾಗಿರಬಹುದು .– ಜಗದೀಶ ಬಿರ್ಕೋಡಿಕರ್, ಆರ್ಥಿಕ ವಿಶ್ಲೇಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.