
ಹಳಿಯಾಳ: ಪ್ರತಿಯೊಬ್ಬರೂ ವಿದ್ಯೆ ಸಂಪಾದಿಸಬೇಕು. ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮಾಡುತ್ತಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಶುಕ್ರವಾರ ತಾಲ್ಲೂಕಿನ ಬಿ.ಕೆ.ಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (ಪಿಎಂಶ್ರೀ) ದ್ವಿಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಮಕ್ಕಳು ಪಠ್ಯಕ್ರಮದ ಜೊತೆಗೆ ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಿ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಮಕ್ಕಳು ಸಹ ಸದೃಢ ಆರೋಗ್ಯದಿಂದ ಇರಲು ಸಾಧ್ಯ. ಪ್ರತಿಯೊಂದು ಶಾಲೆಗೂ ಸಹ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ನಾವು ಎಷ್ಟೇ ಸಂಪತ್ತು ಗಳಿಸಿದರೆ ಆ ಎಲ್ಲ ಸಂಪತ್ತು ವಿದ್ಯೆಗಿಂತ ದೊಡ್ಡದಲ್ಲ. ಪ್ರತಿಯೊಬ್ಬರಲ್ಲೂ ವಿದ್ಯೆ ಇದ್ದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡಿ ಶಿಕ್ಷಿತರಾಗಿ ಸಂಸ್ಕಾರಯುತವಾಗಿ ಶಿಕ್ಷಣ ಹೊಂದಿರಿ. ಇಂದು ಯುವಕರು ಬಹಳಷ್ಟು ದುಶ್ಚಟಕ್ಕೆ ಒಳಗಾಗುತ್ತಿದ್ದು ದುಶ್ಚಟದಿಂದ ದೂರವಿರಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ ಮಾತನಾಡಿ, ಬಿ.ಕೆ.ಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಿಎಮ್ ಶ್ರೀ 1821 ರಲ್ಲಿ ಪ್ರಾರಂಭವಾಗಿದೆ. ಎಲ್ಲ ತರಗತಿಗಳಿಗೆ ಶಿಕ್ಷಕರು ಇದ್ದು ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ. ಕನ್ನಡ ಮಾಧ್ಯಮ ಜೊತೆಗೆ 1ರಿಂದ 7 ರವರೆಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಹಿರಿಯ ಶಿಕ್ಷಕ ಉದಯ ನಾಯಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರು ಗೋಸಾಯಿಮಠದ ಭವಾನಿ ಪೀಠ ಮಂಜುನಾಥ ಭಾರತಿ ಸ್ವಾಮೀಜಿ, ಬಾಗಲಕೋಟೆಯ ಶಾಂತಾರೂಢ ಭಾರತಿಯ ಸ್ವಾಮಿಜಿ ಸಾನಿಧ್ಯ ವಹಿಸಿ ಮಾತನಾಡಿದರು.
ಬಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಹುಲ ಪಾಟೀಲ, ಮುಖಂಡರಾದ ನಾಗೇಂದ್ರ ಜೋಮಣ್ಣವರ, ಶಾಂತರಾಮ ಸೂರ್ಯವಂಶಿ, ವಸಂತ ಚೋರ್ಲೆಕರ, ಗುರುನಾಥ ಪಾಟೀಲ, ತಹಶೀಲ್ದಾರ ಫಿರೋಜ್ ಷಾ ಸೋಮನಕಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಲಾಸರಾಜ ಪ್ರಸನ್ನ, ಎಸ್‌ಡಿಎಂಸಿ ಅಧ್ಯಕ್ಷ ಶಾಂತಾರಾಮ ನಾಕಾಡಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.