ADVERTISEMENT

ಶಿರಸಿ: ಅಂಗನವಾಡಿ ಕಾರ್ಯಕರ್ತೆಯರಿಗೆ ‘ಮೊಟ್ಟೆ’ಯ ಭಾರ !

ಸ್ವಂತ ಹಣ ವೆಚ್ಚ ಮಾಡಿ ಮಕ್ಕಳಿಗೆ ಕೋಳಿ ಮೊಟ್ಟೆ ಪೂರೈಕೆ

ಸಂಧ್ಯಾ ಹೆಗಡೆ
Published 15 ಜುಲೈ 2020, 14:08 IST
Last Updated 15 ಜುಲೈ 2020, 14:08 IST
ಶಿರಸಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎದುರು ಸೇರಿದ್ದ ಅಂಗನವಾಡಿ ಕಾರ್ಯಕರ್ತೆಯರು (ಸಾಂದರ್ಭಿಕ ಚಿತ್ರ)
ಶಿರಸಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎದುರು ಸೇರಿದ್ದ ಅಂಗನವಾಡಿ ಕಾರ್ಯಕರ್ತೆಯರು (ಸಾಂದರ್ಭಿಕ ಚಿತ್ರ)   

ಶಿರಸಿ: ಸದೃಢ ಮಕ್ಕಳನ್ನು ರೂಪಿಸುವ ಉದ್ದೇಶದಿಂದ ಸರ್ಕಾರ ಅಂಗನವಾಡಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ನೀಡುತ್ತಿರುವ ಮೊಟ್ಟೆ ವಿತರಣೆ ಯೋಜನೆಯು ಕಾರ್ಯಕರ್ತೆಯರಿಗೆ ಭಾರವಾಗಿ ಪರಿಣಮಿಸಿದೆ. ಖರ್ಚು ಸರಿದೂಗಿಸಲು ಅಂಗನವಾಡಿ ಕಾರ್ಯಕರ್ತೆಯರು ಗೌರವಧನದ ಹಣವನ್ನೇ ವೆಚ್ಚ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಸರ್ಕಾರದ ನಿಯಮದಂತೆ ಮೂರರಿಂದ ಆರು ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ವಾರಕ್ಕೆ ಎರಡು ದಿನ, ಗರ್ಭಿಣಿ ಮತ್ತು ಬಾಣಂತಿಯರಿಗೆ ತಿಂಗಳಿಗೆ ಸರಾಸರಿ 25 ದಿನ ಮೊಟ್ಟೆಯನ್ನು ವಿತರಿಸುವ ಜವಾಬ್ದಾರಿ, ಸಂಬಂಧಪಟ್ಟ ಅಂಗನವಾಡಿ ಕೇಂದ್ರದ ಮುಖ್ಯಸ್ಥರದ್ದಾಗಿದೆ. ಪ್ರತಿ ಮೊಟ್ಟೆಗೆ ಸರ್ಕಾರ ₹ 5 ನೀಡುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಮೊಟ್ಟೆಯೊಂದರ ದರ ₹ 6ರಿಂದ ₹ 7 ಇರುವುದು ಅಂಗನವಾಡಿ ಕಾರ್ಯಕರ್ತೆಯರಿಗೆ ಹೊರೆಯಾಗಿ ಪರಿಣಮಿಸಿದೆ.

‘ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ನಾವು ಮೊಟ್ಟೆಯನ್ನು ಕಡ್ಡಾಯವಾಗಿ ವಿತರಣೆ ಮಾಡಲೇಬೇಕು. ಮಾರುಕಟ್ಟೆ ದರ ಹೆಚ್ಚಿರುವುದರಿಂದ, ಹೆಚ್ಚುವರಿ ಹಣವನ್ನು ಕಾರ್ಯಕರ್ತೆಯರು, ಸಹಾಯಕಿಯರು ಸೇರಿ ಕೈಯಿಂದ ಹಾಕಿಕೊಳ್ಳುತ್ತೇವೆ. ಆಹಾರ ಸಾಮಗ್ರಿಗಳು ಇಲಾಖೆಯಿಂದ ಪೂರೈಕೆಯಾಗುತ್ತವೆ. ಆದರೆ, ಮೊಟ್ಟೆಯನ್ನು ತಂದು ದಾಸ್ತಾನು ಮಾಡಲು ಸಾಧ್ಯವಿಲ್ಲದ ಕಾರಣ, ಸ್ಥಳೀಯವಾಗಿ ನಾವೇ ಖರೀದಿಸಬೇಕಾಗಿದೆ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ಸುಮಾರು 47,669 ಮೊಟ್ಟೆ ಪಡೆಯಲು ಅರ್ಹರಿರುವ ಮಕ್ಕಳಿದ್ದಾರೆ. ಸುಮಾರು, 8662 ಗರ್ಭಿಣಿಯರು, 8241 ಬಾಣಂತಿಯರು ಇದ್ದಾರೆ. ತಿಂಗಳಿಗೆ ಸರಾಸರಿ 8.03 ಲಕ್ಷ ಮೊಟ್ಟೆ ವಿತರಣೆಯಾಗುತ್ತದೆ. ಇದಕ್ಕೆ ₹ 46 ಲಕ್ಷ ಅನುದಾನ ದೊರೆಯುತ್ತದೆ ಎಂಬುದು ಇಲಾಖೆ ನೀಡುವ ಮಾಹಿತಿ.

‘2017ರಿಂದ ಹಲವಾರು ಬಾರಿ ಸರ್ಕಾರ ಮೊಟ್ಟೆಯ ದರವನ್ನು ಪರಿಷ್ಕರಿಸಿದ ಆದೇಶ ಹೊರಡಿಸಿದೆ. 24 ಸೆಪ್ಟೆಂಬರ್ 2019ರಲ್ಲಿ ಮೊಟ್ಟೆಯೊಂದಕ್ಕೆ ₹ 5 ನಿಗದಿಪಡಿಸಿದ ಆದೇಶ, ಮತ್ತೆ ಪರಿಷ್ಕೃತಗೊಂಡಿಲ್ಲ. ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ಏರಿಕೆಯಾಗಿರುವ ಕಾರಣ, ಒಬ್ಬರು ಅಂಗನವಾಡಿ ಕಾರ್ಯಕರ್ತೆ ವರ್ಷಕ್ಕೆ ಸರಾಸರಿ ₹ 7000ದಷ್ಟು ಸ್ವಂತ ಹಣವನ್ನು ಮೊಟ್ಟೆ ವಿತರಣೆಗೆ ಬಳಸಿಕೊಳ್ಳಬೇಕಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಐದು ತಿಂಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮೊಟ್ಟೆಗಾಗಿ ಸ್ವಂತ ವೆಚ್ಚ ಮಾಡಿರುವ ಹಣ ಲೆಕ್ಕ ಹಾಕಿದರೆ, ₹ 71.5 ಲಕ್ಷ ದಾಟುತ್ತದೆ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಘಟಕ ಅಧ್ಯಕ್ಷೆ ಯಮುನಾ ಗಾಂವಕರ ಲೆಕ್ಕ ನೀಡಿದರು.

ಬಹುತೇಕ ಸಂದರ್ಭಗಳಲ್ಲಿ ಮೊಟ್ಟೆಗೆ ನೀಡುವ ಅನುದಾನ ಮೂರ್ನಾಲ್ಕು ತಿಂಗಳಿಗೊಮ್ಮೆ ಬರುತ್ತದೆ. ಸರ್ಕಾರ ಮುಂಗಡ ಅನುದಾನ ನೀಡುವಂತಾಗಬೇಕು ಎಂದು ಒತ್ತಾಯಿಸಿದರು.

ಮೊಟ್ಟೆಯ ದರ ಪರಿಷ್ಕರಣೆ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳನ್ನು ವಿನಂತಿಸಲಾಗಿದೆ. ಸರ್ಕಾರ ಮಟ್ಟದಲ್ಲಿ ದರ ಪರಿಷ್ಕರಣೆಯಾಗಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪನಿರ್ದೇಶಕಿ ಪದ್ಮಾವತಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.