ಕಾರವಾರ: ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ಮುಸ್ಲಿಂ ಸಮುದಾಯದವರು ಶುಕ್ರವಾರ ನಗರದಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಈದ್ ಮಿಲಾದ್ ಆಚರಿಸಿದರು.
ಪ್ರವಾದಿ ಅವರ ಸಂದೇಶವಿರುವ ಬಾವುಟಗಳು, ಬಗೆಬಗೆಯ ಧರ್ಮ ಧ್ವಜಗಳನ್ನು ಬೀಸುತ್ತ ನೂರಾರು ಜನರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆಗೆ ಇಲ್ಲಿನ ಮದೀನಾ ಜಾಮಿಯಾ ಮಸೀದಿ ಎದುರಿಗೆ ಚಾಲನೆ ದೊರೆಯಿತು. ಮೆರವಣಿಗೆಯ ಉದ್ದಕ್ಕೂ ಪ್ರವಾದಿಯವರ ಸಂದೇಶದ ಹಾಡುಗಳನ್ನು ಹಾಡುತ್ತ ಸಾಗಲಾಯಿತು. ಸಾರ್ವಜನಿಕರಿಗೆ ಸಿಹಿತಿನಿಸುಗಳನ್ನು ಹಂಚಲಾಯಿತು. ಅಲ್ಲಲ್ಲಿ ತಂಪುಪಾನೀಯಗಳನ್ನೂ ವಿತರಿಸಲಾಯಿತು.
ಧಾರ್ಮಿಕ ಸ್ತಬ್ಧಚಿತ್ರ ಮೆರವಣಿಗೆಯ ಆಕರ್ಷಣೆಯಾಗಿತ್ತು. ಕಾರವಾರ ಸುನ್ನಿ ಮುಸ್ಲಿಂ ಅಸೋಸಿಯೇಶನ್ ನೇತೃತ್ವದಲ್ಲಿ ಮುಖ್ಯ ರಸ್ತೆಗಳ ಮೂಲಕ ಸಾಗಿದ ಮೆರವಣಿಗೆಯು ಕಾಜುಬಾಗದ ಮಹಾಸತಿ ಕಲ್ಯಾಣ ಮಂಟಪದವರೆಗೆ ತಲುಪಿತು. ಅಲ್ಲಿ ಧಾರ್ಮಿಕ ಸಂದೇಶ ಸಾರುವ ಪ್ರವಚನವನ್ನು ಮೌಲ್ವಿಗಳು ನೀಡಿದರು.
ಪ್ರವಾದಿ ಮುಹಮ್ಮದ್ ಅವರ ಕುರಿತ ಗೀತೆಗಳನ್ನು ಹಾಡುವ ಜೊತೆಗೆ ಮಕ್ಕಳು, ಯುವಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು. ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ನಡೆಯಿತು.
ಸುನ್ನಿ ಮುಸ್ಲಿಂ ಅಸೋಸಿಯೇಶನ್ ಅಧ್ಯಕ್ಷ ಎಫ್.ಡಿ.ಶೇಖ್, ಉಪಾಧ್ಯಕ್ಷ ಇಮ್ತಿಯಾಜ್ ಬುಖಾರಿ, ಮುಜಮ್ಮಿಲ್ ಮಾಂಡ್ಲಿಕ್, ಮನ್ಸೂರ್ ಮಾಂಡ್ಲಿಕ್, ಇತರರು ಪಾಲ್ಗೊಂಡಿದ್ದರು.
ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದ್ದರು.
ಭಟ್ಕಳ ವರದಿ: ಈದ್ ಮಿಲಾದ್ ಅಂಗವಾಗಿ ಶುಕ್ರವಾರ ಮುಸ್ಲಿಮರಿಂದ ಮೆರವಣಿಗೆ ನಡೆಯಿತು.
ಪಟ್ಟಣದ ಈದ್ಗಾ ಮೈದಾನದಿಂದ ಹೊರಟ ಮೆರವಣಿಗೆ ಸಂಶುದ್ದೀನ್ ಸರ್ಕಲ್ ಮೂಲಕ ಸಾಗಿ ಬಂದು ಮುಖ್ಯ ರಸ್ತೆಯಲ್ಲಿ ಸಂಚರಿಸಿ ಪುನಃ ಹಳೆ ಬಸ್ ನಿಲ್ದಾಣಕ್ಕೆ ಬಂದು ಕೊನೆಗೊಂಡಿತು. ಮೆರವಣಿಗೆಯಲ್ಲಿ ಮಕ್ಕಳ ನೃತ್ಯ, ಕವಾಯತು ಜನಮನಸೂರೆಗೊಂಡಿತು.
ಸಾವಿರಕ್ಕೂ ಅಧಿಕ ಜನರು ಹಾಗೂ ವಾಹನಗಳು ಮರೆವಣಿಗೆಯಲ್ಲಿ ಪಾಲ್ಗೊಂಡಿದ್ದವು. ಮೆರವಣಿಗೆಯ ವೇಳೆ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಶಿರಸಿ: ನಗರದಲ್ಲಿ ಶುಕ್ರವಾರ ಮುಸ್ಲಿಮರು ಸಂಭ್ರಮದಿಂದ ಈದ್ ಮಿಲಾದ್ ಆಚರಿಸಿದರು.
ಪ್ರಾರ್ಥನಾ ಮಂದಿರದಿಂದ ನಗರದ ಬಸ್ ನಿಲ್ದಾಣದ ಮೂಲಕ ಪ್ರಮುಖ ಬೀದಿಗಳಲ್ಲಿ ಮುಸ್ಮಿಮರು, ಧರ್ಮಗುರುಗಳ ನೇತೃತ್ವದಲ್ಲಿ ಮೆರವಣಿಗೆ ಮೂಲಕ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಆಯಾ ಮಸೀದಿಗಳಿಂದ ಹೊರಟ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗಿ ವಾಪಾಸ್ ಮಸೀದಿಗಳಿಗೆ ಆಗಮಿಸುವ ಮೂಲಕ ಮೆರವಣಿಗೆ ಸಮಾಪ್ತಿಗೊಂಡಿತು.
ಮೆರವಣಿಗೆಯಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ‌್ ಸಂದೇಶ ಸಾರುವ ಹಾಡುಗಳು, ದಫ್ ಕುಣಿತ, ವಿದ್ಯಾರ್ಥಿಗಳು ಹಾಗೂ ಮದರಸದ ಮಕ್ಕಳು ಗಮನ ಸೆಳೆದರು. ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಸಿಹಿತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು. ಕೆಲವು ಕಡೆಗಳಲ್ಲಿ ಹಿಂದೂಗಳು ಕೈಜೋಡಿಸಿ ಸೌಹಾರ್ದದ ಸಂದೇಶ ಸಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.