ADVERTISEMENT

ಕುಚಲಕ್ಕಿ ಭತ್ತ ಖರೀದಿಗೆ ಎಂಟು ಕೇಂದ್ರ, ಡಿ.1ರವರೆಗೆ ನೋಂದಣಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 12:57 IST
Last Updated 18 ನವೆಂಬರ್ 2022, 12:57 IST
ಪ್ರಭುಲಿಂಗ ಕವಳಿಕಟ್ಟಿ
ಪ್ರಭುಲಿಂಗ ಕವಳಿಕಟ್ಟಿ   

ಕಾರವಾರ: ಕುಚಲಕ್ಕಿಗೆ ಬಳಕೆ ಮಾಡುವ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲು ಜಿಲ್ಲೆಯ ಎಂಟು ಕಡೆ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ನಗರದಲ್ಲಿ ಗುರುವಾರ ನಡೆದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧ್ಯಕ್ಷತೆಯ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟ ಮಾಡುವ ರೈತರ ನೋಂದಣಿಯನ್ನುನ.21ರಿಂದ ಡಿ.1ರವರೆಗೆ ಮಾಡಿಕೊಳ್ಳಲಾಗುತ್ತದೆ. ಡಿ.1ರಿಂದ 2023ರ ಫೆ.28ರವರೆಗೆ ಭತ್ತ ಖರೀದಿಸಲಾಗುತ್ತದೆ ಎಂದು ಸಭೆಯ ಬಳಿಕ ಜಿಲ್ಲಾಧಿಕಾರಿ ತಿಳಿಸಿದರು.

‘ಕುಚಲಕ್ಕಿ ಮಾಡಲು ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷಾ ಮತ್ತು ಎಂಒ4 ತಳಿಗಳ ಭತ್ತವನ್ನು ಸರ್ಕಾರದ ಸೂಚನೆಯಂತೆ ಖರೀದಿಸಲಾಗುತ್ತದೆ. ಈ ತಳಿಗಳ ಪ್ರತಿ ಕ್ವಿಂಟಲ್ ಸಾಮಾನ್ಯ ಭತ್ತಕ್ಕೆ ₹ 2,040 ಹಾಗೂ ‘ಎ’ ಗ್ರೇಡ್‌ಗೆ ₹ 2,060ರಂತೆ ಸರ್ಕಾರ ದರ ನಿಗದಿ ಮಾಡಿದೆ. ಅಲ್ಲದೇ ಪ್ರೋತ್ಸಾಹದಾಯಕ ವಾಗಿ ಪ್ರತಿ ಕ್ವಿಂಟಲ್‌ಗೆ ₹ 500 ಹೆಚ್ಚುವರಿ ದರವನ್ನು ಸರ್ಕಾರ ನೀಡಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಫ್ರೂಟ್ಸ್’ ದತ್ತಾಂಶದಲ್ಲಿ ನೋಂದಣಿ ಮಾಡಿಕೊಂಡಿರುವ ರೈತರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಬಹುದು. ನೋಂದಣಿಗೆ ರೈತರು ಪಹಣಿ ಪತ್ರ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆಯ ಸಂಖ್ಯೆ ಹಾಗೂ ಐ.ಎಫ್.ಎಸ್‌.ಸಿ ಕೋಡ್, ಬ್ಯಾಂಕ್‌ನ ವ್ಯವಸ್ಥಾಪಕರು ದೃಢೀಕರಿಸಿರುವ ಭಾವಚಿತ್ರವಿರುವ ಪಾಸ್ ಪುಸ್ತಕದ ಪ್ರತಿ ಹಾಗೂ ಬೆಳೆ ದೃಢೀಕರಣ ಪತ್ರಗಳನ್ನು ಸಲ್ಲಿಸಬೇಕು. ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು’ ಹೇಳಿದರು.

‘ಭತ್ತ ಮಾರಾಟ ಮಾಡಿದ ರೈತರಿಗೆ ನೇರ ನಗದು ವರ್ಗಾವಣೆ ವ್ಯವಸ್ಥೆಯಡಿ ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಒಬ್ಬ ರೈತ ಒಂದು ಎಕರೆಗೆ ಗರಿಷ್ಠ 16 ಕ್ವಿಂಟಲ್‌ಗಳಂತೆ 40 ಕ್ವಿಂಟಲ್‌ ತನಕ ಮಾರಾಟ ಮಾಡಬಹುದು. ಭತ್ತ ಖರೀದಿ ಕೇಂದ್ರದ ಮಾಹಿತಿಗೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

ಖರೀದಿ ಕೇಂದ್ರಗಳು:ಶಿರಸಿಯ ಕೆಎಫ್‌ಸಿಎಸ್‌ಸಿ ಸಗಟು ಮಳಿಗೆ, ಮುಂಡಗೋಡಿನ ಎಪಿಎಂಸಿ ಯಾರ್ಡ್‌ನ ಕೆಎಫ್‌ಸಿಎಸ್‌ಸಿ ಅಕ್ಷರ ದಾಸೋಹ ಮಳಿಗೆ, ಹಳಿಯಾಳದ ಎಪಿಎಂಸಿ ಯಾರ್ಡ್‌ನ ಕೆಎಫ್‌ಸಿಎಸ್‌ಸಿ ಸಗಟು ಮಳಿಗೆ, ಜೊಯಿಡಾ ಕೆಎಫ್‌ಸಿಎಸ್‌ಸಿ ಅಕ್ಷರ ದಾಸೋಹ ಮಳಿಗೆ, ಕುಮಟಾ ಎಪಿಎಂಸಿ ಯಾರ್ಡ್‌ನ ಕೆಎಫ್‌ಸಿಎಸ್‌ಸಿ ಅಕ್ಷರ ದಾಸೋಹ ಮಳಿಗೆ, ಅಂಕೋಲಾದ ಎಪಿಎಂಸಿ ಯಾರ್ಡ್‌ನ ಕೆಎಫ್‌ಸಿಎಸ್‌ಸಿ ಮಳಿಗೆ, ಭಟ್ಕಳದ ಪಂಚಾಯತ್‌ರಾಜ್ ಕಟ್ಟಡದ ಕೆಎಫ್‌ಸಿಎಸ್‌ಸಿ ಅಕ್ಷರ ದಾಸೋಹ ಮಳಿಗೆ ಹಾಗೂ ಹೊನ್ನಾವರದ ಎಪಿಎಂಸಿ ಯಾರ್ಡ್‌ನ ಕೆಎಫ್‌ಸಿಎಸ್‌ಸಿ ಅಕ್ಷರ ದಾಸೋಹ ಮಳಿಗೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ರೇವಣಕರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.