ADVERTISEMENT

ಹಳಕಾರ ವಿಲೇಜ್ ಫಾರೆಸ್ಟ್ ಗೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 4:36 IST
Last Updated 22 ಅಕ್ಟೋಬರ್ 2020, 4:36 IST

ಕುಮಟಾ: ರಾಜ್ಯದ ಕುಮಟಾದಲ್ಲಿ ಮಾತ್ರ ಇರುವ ವಿಶಿಷ್ಟ ‘ಹಳಕಾರ ವಿಲೇಜ್ ಫಾರೆಸ್ಟ್’ ಸಂಸ್ಥೆಯ ಹೊಸ ಆಡಳಿತ ಮಂಡಳಿ ಆಯ್ಕೆಗೆ ನ.5 ರ ನಂತರ ಚುನಾವಣೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಹಶೀಲ್ದಾರ್ ಮೇಘರಾಜ ನಾಯ್ಕ ತಿಳಿಸಿದರು.

ಬುಧವಾರ ‘ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಹಾಗೂ ನಂತರ ಆರಂಭವಾದ ವಿಧಾನ ಪರಿಷತ್ತು ಚುನಾವಣೆ ಕಾರಣದಿಂದ ಹಳಕಾರ ವಿಲೇಜ್ ಫಾರೆಸ್ಟ್ ಸಂಸ್ಥೆಯ ಚುನಾವಣೆ ಪ್ರಕ್ರಿಯೆಗೆ ವಿಳಂಬವಾಯಿತು. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಸಂಸ್ಥೆಯ ಪದಾಧಿಕಾರಿಗಳನ್ನು ಕರೆಸಿ ಚರ್ಚಿಸಿ ಪ್ರಕ್ರಿಯೆ ನಡೆಸಲಾಗುವುದು' ಎಂದರು.

ಸಂಸ್ಥೆಯ ಅಧ್ಯಕ್ಷ ನಾಗರಾಜ ಭಟ್ಟ, ‘2018 ನೇ ಸಾಲಿಗೆ ಸಂಸ್ಥೆಗೆ ಹೊಸ ಆಡಳಿತ ಮಂಡಳಿ ಆಯ್ಕೆ ಆಗಬೇಕಿತ್ತು. ಸಂಸ್ಥೆಯ ನಿಯಮದಂತೆ ಚುನಾವಣೆಗೆ ಆರು ತಿಂಗಳ ಮೊದಲೇ ತಹಶೀಲ್ದಾರ್ ಅವರಿಗೆ ಪ್ರಕ್ರಿಯೆ ಕೈಕೊಳ್ಳುವ ಬಗ್ಗೆ ಮನವಿ ಮಾಡಲಾಗಿತ್ತು. ಅದೇ ಸಂದರ್ಭದಲ್ಲಿ ಹಿಂದಿದ್ದ ಕುಮಟಾ ತಹಶೀಲ್ದಾರ್ ವರ್ಗವಾಗಿದ್ದರಿಂದ ಚುನಾವಣೆ ನಡೆಯುವುದು ಹಾಗೇ ಉಳಿಯಿತು' ಎಂದರು.

ADVERTISEMENT

‘ಹಳಕಾರ ವಿಲೇಜ್ ಫಾರೆಸ್ಟ್ ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ 34 ಹೆಕ್ಟೇರ್ ನೈಸರ್ಗಿಕ ಅರಣ್ಯ ಹೊಂದಿದ್ದು, ಅದರ ರಕ್ಷಣೆ ಊರಿನವರ ಜವಾಬ್ದಾರಿಯಾಗಿದೆ. ಸಂಸ್ಥೆಯ ನಿಯಮ ಪ್ರಕಾರ ಊರಿನಲ್ಲಿ ಕೃಷಿ ಜಮೀನು ಹೊಂದಿ ಪಹಣಿ ಪತ್ರಿಕೆಯಲ್ಲಿ ಹೆಸರಿಸುವವರು ಮಾತ್ರ ಮತದಾನ ಹಕ್ಕು ಹೊಂದಿರುತ್ತಾರೆ. ಚುನಾವಣೆಗೆ ಮೊದಲು ಸ್ಥಳೀಯ ಗ್ರಾಮ ಲೆಕ್ಕಿಗರು ಮತದಾರರ ಯಾದಿ ಸಿದ್ಧಪಡಿಸಬೇಕಿದೆ' ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.