
ಕಾರವಾರ: ಗ್ರಾಹಕರಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಪೂರೈಸುವ ‘ಗೃಹಜ್ಯೋತಿ’ ಯೋಜನೆಯನ್ನು ರಾಜ್ಯ ಸರ್ಕಾರ ಪರಿಚಯಿಸಿದರೆ, ಹೆಸ್ಕಾಂಗೆ ₹13.15 ಕೋಟಿಯಷ್ಟು ಬಿಲ್ ಪಾವತಿಸದೆ ಸರ್ಕಾರಿ ಇಲಾಖೆಗಳು ಹೊರೆಯಾಗುತ್ತಿವೆ.
ಹಲವು ತಿಂಗಳುಗಳಿಂದ ವಿದ್ಯುತ್ ಶುಲ್ಕ ಬಾಕಿ ಇರಿಸಿಕೊಂಡಿರುವ ಇಲಾಖೆಗಳ ಪಟ್ಟಿ ಸಿದ್ಧಪಡಿಸಿದ ಹೆಸ್ಕಾಂ ಅಧಿಕಾರಿಗಳು ಅಂತಹ ಇಲಾಖೆಗಳಿಗೆ ಸಂಬಂಧಿಸಿದ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಅಭಿಯಾನ ಆರಂಭಿಸಿವೆ.
ಜಿಲ್ಲೆಯಲ್ಲಿ ಗುರುವಾರ ಕಂದಾಯ ಇಲಾಖೆ ಕಚೇರಿಗಳು, ಅಂಗನವಾಡಿ ಕೇಂದ್ರಗಳು ಸೇರಿದಂತೆ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಹಲವು ತಾಸು ಕಡಿತಗೊಳಿಸಲಾಗಿತ್ತು. ಬಿಲ್ ಪಾವತಿಸಲು ಗಡುವು ಪಡೆದುಕೊಂಡ ಇಲಾಖೆಗಳು ಪುನಃ ಸಂಪರ್ಕ ಪಡೆದುಕೊಂಡವು.
‘ಗೃಹಜ್ಯೋತಿ ಯೋಜನೆ ಜಾರಿಯಾದ ಬಳಿಕ ಹೆಸ್ಕಾಂಗೆ ಬರುವ ಆದಾಯ ಗಣನೀಯ ಇಳಿಕೆಯಾಗಿದೆ. ಉಚಿತ ವಿದ್ಯುತ್ ಪೂರೈಕೆ ಪ್ರಮಾಣ ಹೆಚ್ಚಿದೆ. ಇಂತಹ ಸ್ಥಿತಿಯಲ್ಲಿ ಸರ್ಕಾರಿ ಇಲಾಖೆಗಳಿಂದಲೇ ಕೋಟ್ಯಂತರ ಮೊತ್ತದ ಶುಲ್ಕ ಪಾವತಿ ಬಾಕಿ ಇರುವುದು ಸಮಸ್ಯೆ ಬಿಗಡಾಯಿಸಲು ಕಾರಣವಾಗುತ್ತಿದೆ’ ಎಂದು ಹೆಸ್ಕಾಂ ಅಧಿಕಾರಿಯೊಬ್ಬರು ಹೇಳಿದರು.
‘ಶುಲ್ಕ ವಸೂಲಾತಿಯಾಗದ ಕಾರಣಕ್ಕೆ ನಿರ್ವಹಣೆಗೆ ಅಗತ್ಯ ಸಲಕರಣೆ ಖರೀದಿ, ಹೊಸ ಮಾರ್ಗಗಳ ಅಳವಡಿಕೆಗೆ ಅನುದಾನದ ಲಭ್ಯತೆ ಕೊರತೆಯಾಗಿದೆ. ಶುಲ್ಕ ವಸೂಲಿಸಿದರೆ ಮಾತ್ರ ನಿರ್ವಹಣೆಗೆ, ಸಲಕರಣೆಗಳ ಖರೀದಿಗೆ ಅನುದಾನ ಸಿಗಲಿದೆ. ಹಲವು ಬಾರಿ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಬಿಲ್ ಪಾವತಿಗೆ ಪತ್ರ ಬರೆದರೂ ಸ್ಪಂದನೆ ಸಿಗದೆ ಕಾರಣದಿಂದ ಹಿರಿಯ ಅಧಿಕಾರಿಗಳ ನಿರ್ದೇಶನ ಆಧರಿಸಿ ಸಂಪರ್ಕ ಕಡಿತಗೊಳಿಸುವ ಅಭಿಯಾನ ನಡೆದಿದೆ’ ಎಂದು ವಿವರಿಸಿದರು.
‘ಗ್ರಾಮ ಪಂಚಾಯಿತಿಗಳು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ನಗರ ಸ್ಥಳೀಯ ಸಂಸ್ಥೆಗಳು ಬೀದಿದೀಪಕ್ಕೆ ಬಳಸುವ ವಿದ್ಯುತ್ ಸಂಪರ್ಕಗಳ ಬಿಲ್ ಪಾವತಿಸದೆ ಕೋಟ್ಯಂತರ ಮೊತ್ತದ ಬಿಲ್ ಬಾಕಿ ಉಳಿದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.