ADVERTISEMENT

ಕಾರವಾರ: ಪರಿಸರ ಕಾಳಜಿ ಬೋಧಿಸುವ ಶಿಕ್ಷಕಿ

ಖಾಲಿ ಬಿದ್ದ ಅಂಗಳದಲ್ಲಿ ಹಸಿರು ಕ್ರಾಂತಿ: ಕೈತೋಟದ ನಡುವೆ ಪಾಠ

ಗಣಪತಿ ಹೆಗಡೆ
Published 5 ಸೆಪ್ಟೆಂಬರ್ 2025, 4:44 IST
Last Updated 5 ಸೆಪ್ಟೆಂಬರ್ 2025, 4:44 IST
ಶಿಕ್ಷಕಿ ಅರ್ಚನಾ ಭಟ್ಟ ಅವರೊಂದಿಗೆ ಶಾಲೆಯ ಉದ್ಯಾನದಲ್ಲಿ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು  
ಶಿಕ್ಷಕಿ ಅರ್ಚನಾ ಭಟ್ಟ ಅವರೊಂದಿಗೆ ಶಾಲೆಯ ಉದ್ಯಾನದಲ್ಲಿ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು     

ಕಾರವಾರ: ಹಳಿಯಾಳ ತಾಲ್ಲೂಕು ಡೊಂಕನಾಳ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಕೃತಿಯ ಬಗ್ಗೆ ಎಳವೆಯಲ್ಲೇ ಜ್ಞಾನ ಸಿಗುತ್ತಿದೆ. ಹೂವು, ತರಕಾರಿ ಗಿಡಗಳ ಬಗ್ಗೆ ಪಟಪಟನೆ ಉತ್ತರಿಸುವ ಈ ಶಾಲೆಯ ಮಕ್ಕಳು ರಾಸಾಯನಿಕ ರಹಿತ ಜೀವನದ ಬಗ್ಗೆ ಪ್ರಶ್ನಿಸಿದವರಿಗೆ ಪಾಠ ಮಾಡುವಷ್ಟು ಪ್ರಬುದ್ಧರು!

ಎಳೆ ವಯಸ್ಸಿನ ಹತ್ತಾರು ಮಕ್ಕಳಿಗೆ ರಾಸಾಯನಿಕಗಳ ಬಳಕೆಯಿಂದ ದೂರವಿದ್ದು, ಪರಿಸರದ ಮಧ್ಯೆ ಬದುಕುವ ಕಲೆಯನ್ನು ಕಲಿಸಿದವರು ಈ ಶಾಲೆಯ ಶಿಕ್ಷಕಿ ಅರ್ಚನಾ ಭಟ್ಟ. ನಾಲ್ಕು ಗೋಡೆಗಳ ನಡುವೆ ಕಲಿಕೆ ಸೀಮಿತಗೊಳಿಸದೆ, ಪರಿಸರದ ನಡುವೆ ಮಕ್ಕಳಿಗೆ ಜ್ಞಾನಾರ್ಜನೆ ಮಾಡುವ ಅಪರೂಪದ ಶಿಕ್ಷಕರು ಅವರು ಎಂಬುದಾಗಿ ಗ್ರಾಮಸ್ಥರು ಹೇಳುತ್ತಾರೆ.

ಒಂದರಿಂದ 5ನೇ ತರಗತಿವರೆಗಿನ 54 ವಿದ್ಯಾರ್ಥಿಗಳಿರುವ ಡೊಂಕನಾಳ ಸರ್ಕಾರಿ ಶಾಲೆಯ ಅಂಗಳದ ತುಂಬ ಹಸಿರಿನ ಸಿರಿ ಕಂಗೊಳಿಸುತ್ತದೆ. ಬಗೆಬಗೆಯ ತರಕಾರಿಗಳು, ಅತ್ಯಾಕರ್ಷಕ ಹೂವಿನ ಗಿಡಗಳು ನೋಡುಗರನ್ನು ಸೆಳೆಯುತ್ತವೆ. ಈ ಸಸಿಗಳನ್ನು ವಿದ್ಯಾರ್ಥಿಗಳ ಜೊತೆ ಸೇರಿ ಬೆಳೆಸಿದ ಶಿಕ್ಷಕಿ, ಸಸಿಗಳ ಬೆಳವಣಿಗೆಯ ಪ್ರತಿ ಹಂತದ ಬಗ್ಗೆಯೂ ಮಕ್ಕಳಿಗೆ ಪಾಠ ಬೋಧಿಸುತ್ತಾರೆ.

ADVERTISEMENT

‘ಕಳೆದ ಮೂರುವರೆ ವರ್ಷದಲ್ಲಿ ಶಾಲೆಯ ಚಿತ್ರಣ ಬದಲಾಗಿದೆ. ಶಿಕ್ಷಕಿ ಅರ್ಚನಾ ಅವರು ಶಾಲೆಗೆ ಆಗಮಿಸಿದ ಬಳಿಕ ಉದ್ಯಾನ ನಿರ್ಮಾಣದ ಜೊತೆಗೆ ಪರಿಸರದ ನಡುವೆ ಮಕ್ಕಳು ಕಲಿಯವ ಆಸಕ್ತಿ ಬೆಳೆಸಿದ್ದಾರೆ. ಖಾಲಿ ಇದ್ದ ಅಂಗಳದಲ್ಲಿ ಹಸಿರು ಸಸಿಗಳು ಕಂಗೊಳಿಸುತ್ತಿವೆ. ಬಿಸಿಯೂಟಕ್ಕೆ ಬೇಕಿದ್ದ ತರಕಾರಿಗಳನ್ನು ಮಾರುಕಟ್ಟೆಯಿಂದ ತರದೇ, ಶಾಲೆಯ ಅಂಗಳದಲ್ಲೇ ಅಪ್ಪಟ ಸಾವಯವ ಪದ್ಧತಿಯಲ್ಲಿ ಬೆಳೆಯಲಾಗುತ್ತಿದೆ. ಇನ್ನೋರ್ವ ಶಿಕ್ಷಕಿ ಜಯಶ್ರೀ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಅಕ್ಷರ ದಾಸೋಹ ಸಿಬ್ಬಂದಿ ಸಹಕಾರ ಒದಗಿಸುತ್ತಿದ್ದಾರೆ’ ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಠಕ್ಕು ಬಾಜಾರಿ.

‘ಶಾಲೆ ಆರಂಭಕ್ಕೆ ಅರ್ಧ ತಾಸು ಮುನ್ನವೇ ಶಾಲೆಗೆ ಬಂದು ಸಸಿಗಳ ಆರೈಕೆ ಮಾಡುತ್ತೇವೆ. ತರಗತಿಗಳ ಬಿಡುವಿನ ಅವಧಿಯಲ್ಲಿ ಮಕ್ಕಳಿಗೆ ಸಸ್ಯಗಳ ಬಗ್ಗೆ ಪಾಠ ಹೇಳಿಕೊಡುವ ಜೊತೆಗೆ ಸಾವಯವ ಪದ್ಧತಿಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಇಲ್ಲಿ ಬೆಳೆಯಲಾಗುವ ತರಕಾರಿಗಳನ್ನೇ ಬಳಸಿ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸಲಾಗುತ್ತದೆ. ಅವರಿಗೂ ಸಸಿಗಳ ಆರೈಕೆಯಲ್ಲಿ ಆಸಕ್ತಿ ಬೆಳೆಯುತ್ತಿದೆ’ ಎಂದು ಶಿಕ್ಷಕಿ ಅರ್ಚನಾ ಭಟ್ಟ ಹೇಳುತ್ತಾರೆ.

ಶಾಲೆಯ ಉದ್ಯಾನ ನಿರ್ಮಾಣದ ಕೆಲಸದಲ್ಲಿ ತೊಡಗಿರುವ ಶಿಕ್ಷಕಿ ಅರ್ಚನಾ ಭಟ್ಟ.
ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪರಿಸರದ ರಕ್ಷಣೆ ಕಾಳಜಿ ಮೂಡಿಸಬೇಕಿದೆ. ನಿತ್ಯ ಕೆಲ ನಿಮಿಷ ಇದಕ್ಕಾಗಿಯೇ ಪ್ರಾಯೋಗಿಕ ಪಾಠ ನಡೆಯುತ್ತಿದೆ
ಅರ್ಚನಾ ಭಟ್ಟ ಡೊಂಕನಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ

ರಾಜ್ಯದಲ್ಲಿ ಗಮನಸೆಳೆದ ಶಾಲೆ:

‘ಡೊಂಕನಾಳ ಕುಗ್ರಾಮವಾದರೂ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಬಗೆಬಗೆಯ ತರಕಾರಿ ಹೂವಿನ ಸಸಿಗಳನ್ನು ಬೆಳೆಸಲಾಗುತ್ತಿದೆ. ಮಕ್ಕಳಿಗೆ ಪರಿಸರ ಪಾಠ ಹೇಳಿಕೊಟ್ಟು ಪೌಷ್ಟಿಕ ತರಕಾರಿಗಳನ್ನು ಬೆಳೆದು ಬಿಸಿಯೂಟಕ್ಕೆ ನೀಡಲಾಗುತ್ತಿದೆ. ಬಹುತೇಕ ಶಾಲೆಗಳಲ್ಲಿ ಪೌಷ್ಟಿಕ ವನ ನಿರ್ಮಿಸಿದ್ದರೂ ಈ ಶಾಲೆಯ ಉದ್ಯಾನ ಗಮನಿಸಿ ರಾಜ್ಯಮಟ್ಟದಲ್ಲೇ ಉತ್ತಮ ವನ ಎಂದು ಅಕ್ಷರ ದಾಸೋಹ ವಿಭಾಗದ ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ’ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಅಕ್ಷರ ದಾಸೋಹ ವಿಭಾಗದ ಸಹಾಯಕ ನಿರ್ದೇಶಕ ಸದಾನಂದ ಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.