ADVERTISEMENT

ರೈತರು ಅತಿಕ್ರಮಣದಾರರಲ್ಲ, ಜಾಗದ ಒಡೆಯರು

ಬಿಜೆಪಿ ಮಂಡಲ, ಜೆಡಿಎಸ್ ಮತ್ತು ರೈತ ಸಂಘಟನೆಗಳಿಂದ ಪ್ರತಿಭಟನೆ: ಹರತಾಳು ಹಾಲಪ್ಪ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 3:16 IST
Last Updated 18 ಡಿಸೆಂಬರ್ 2025, 3:16 IST
ಸಿದ್ದಾಪುರ ಪಟ್ಟಣದಲ್ಲಿ ಅರಣ್ಯ ಅತಿಕ್ರಮಣದಾರರ ವಿರುದ್ಧ ನಡೆಯುತ್ತಿರುವ ದಬಾಳಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ  ಹರತಾಳು ಹಾಲಪ್ಪ ಮಾತನಾಡಿದರು 
ಸಿದ್ದಾಪುರ ಪಟ್ಟಣದಲ್ಲಿ ಅರಣ್ಯ ಅತಿಕ್ರಮಣದಾರರ ವಿರುದ್ಧ ನಡೆಯುತ್ತಿರುವ ದಬಾಳಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ  ಹರತಾಳು ಹಾಲಪ್ಪ ಮಾತನಾಡಿದರು    

ಸಿದ್ದಾಪುರ: ‘ನಾವು ಅತಿಕ್ರಮಣದಾರರಲ್ಲ. ನಮ್ಮ ಪೂರ್ವಜರು ಮಾಡಿದ ಜಮೀನನ್ನು ನಾವು ಉಳುಮೆ ಮಾಡುತ್ತಿದ್ದೇವೆ. ನಾವು ಉಳುಮೆ ಮಾಡುತ್ತಿರುವ ಒಡೆಯರು’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಮಂಡಲ, ಜೆಡಿಎಸ್ ಮತ್ತು ರೈತ ಸಂಘಟನೆಗಳಿಂದ ಅರಣ್ಯ ಅತಿಕ್ರಮಣದಾರರ ವಿರುದ್ಧ ನಡೆಯುತ್ತಿರುವ ದಬಾಳಿಕೆ  ವಿರೋಧಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಮೊದಲಿಂದಲೂ ನಾವು ಬೆಟ್ಟದ ಮಧ್ಯೆಯೇ ಜೀವನ ಮಾಡುತ್ತಿದ್ದೇವೆ. ಯಾವ ಕಾನೂನು ಸಹ ಬದಲಾಗಿಲ್ಲ. ಆದರೆ ಈ ಸರ್ಕಾರದಲ್ಲಿ ರೈತರ ಮೇಲೆ ದಬ್ಬಾಳಿಗೆ ಆರಂಭವಾಗಿದೆ. ಇದರ ವಿರುದ್ಧ ನಾವು ಸಂಘಟಿತರಾಗಿ ಹೋರಾಡಬೇಕಿದೆ. ರೈತರ ಬೆಳೆಗಳಿಗೆ ಖರೀದಿ ಕೇಂದ್ರ ತೆರೆಯಿರಿ ಎಂದರೆ ಸರ್ಕಾರ ಶಾಸಕರ ಖರೀದಿ ಕೇಂದ್ರ ತೆರೆದಿದೆ. ಶಾಸಕರು ಕೆಡಿಪಿ ಸಭೆಗಳಲ್ಲಿ ಆಗು ಹೋಗುಗಳ ಕುರಿತು ಮಾಹಿತಿ ಪಡೆಯಬೇಕು. ಆದರೆ ಇಲ್ಲಿಯ ಶಾಸಕರಿಗೆ ಕೆಡಿಪಿ ಸಭೆಯ ಬಗ್ಗೆ ಅರಿವಿಲ್ಲದಂತೆ ಕಾಣುತ್ತದೆ. ರೈತರು ಪಕ್ಷಾತೀತವಾಗಿ ಈ ಹೋರಾಟದಲ್ಲಿ ಭಾಗಿಯಾಗಬೇಕು’ ಎಂದರು. 

ADVERTISEMENT

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಮಾತನಾಡಿ, ‘ಅತಿಕ್ರಮಣದ ಸಮಸ್ಯೆ ಮೊದಲಿಂದಲೂ ಇತ್ತು. ಆದರೆ ರೈತರ ಮೇಲಿನ ದಬ್ಬಾಳಿಕೆ ಇರಲಿಲ್ಲ. ಈಶ್ವರ ಖಂಡ್ರೆಯಂತಹ ಅರಣ್ಯ ಮಂತ್ರಿಯಿಂದ ಈ ಸಮಸ್ಯೆ ಉಲ್ಬಣಿಸುತ್ತಿದೆ. ರೈತರ ಬೆಟ್ಟದ ಮೇಲಿನ ಹಕ್ಕನ್ನೂ  ಹಂತ ಹಂತವಾಗಿ ಕಸಿಯಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ‘ಕಳೆದ 2.5 ವರ್ಷದಲ್ಲಿ 4,500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅರಣ್ಯ ಸಚಿವರಿಗೆ ಅರಣ್ಯದ ಅಂಚಿನಲ್ಲಿ ರೈತರು ವಾಸವಿರುವ ವಿಷಯವೇ ಅರಿವಿಲ್ಲದಂತೆ ಕಾಣುತ್ತದೆ’ ಎಂದು ತಿಳಿಸಿದರು. 

ಪ್ರತಿಭಟನೆಯಲ್ಲಿ ಮಾಂಡಲಾಧ್ಯಕ್ಷ ತಿಮ್ಮಪ್ಪ ಎಂ. ಕೆ.ಶಶಿಭೂಷಣ ಹೆಗಡೆ , ಅನಂತ ಮೂರ್ತಿ ಹೆಗಡೆ, ಬಿಜೆಪಿ ಜಿಲ್ಲಾ ಘಟಕದ  ಅಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ, ಉಪೇಂದ್ರ ಪೈ, ಸುರಕ್ಷಾ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಧರ್ಮರಾಜ ಗೌಡರ್ ಮಾತನಾಡಿದರು.

 ಪ್ರಮುಖರಾದ ಗುರುಪ್ರಸಾದ ಹೆಗಡೆ, ಶಿವಾಜಿ ನರಸಾನಿ, ಪ್ರಶಾಂತ ನಾಯ್ಕ, ಕೆರಿಯಪ್ಪ ನಾಯ್ಕ, ಉಷಾ ಹೆಗಡೆ, ಗುರುರಾಜ ಶಾನಭಾಗ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು ಇದ್ದರು.

ಪಟ್ಟಣದ ತಿಮ್ಮಪ್ಪ ನಾಯ್ಕ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ಪ್ರತಿಭಟನೆಕಾರರು ಬಸ್ ನಿಲ್ದಾಣದ ಎದುರಿಗೆ ಮಾನವ ಸರಪಳಿ ನಿರ್ಮಿಸಿ ನಂತರ ತಹಶೀಲ್ದಾರ್‌ ಕಚೇರಿಗೆ ಬಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ನಂತರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅನ್ನ ನೀಡುತ್ತಿರುವ ರೈತರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಲು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.