ಶಿರಸಿ: 2025-26ನೇ ಸಾಲಿನ 15ನೇ ಹಣಕಾಸಿನ ಕ್ರಿಯಾ ಯೋಜನೆ ಅನುಮೋದನೆಗೊಂಡಿದ್ದರೂ ಗ್ರಾಮ ಪಂಚಾಯಿತಿಗಳಿಗೆ ಈವರೆಗೆ ಕೆಲಸ ಮಾಡಲು ಅನುಮತಿ ಸಿಕ್ಕಿಲ್ಲ. ಈ ಕಾರಣ ತ್ವರಿತವಾಗಿ ಅನುಮತಿ ನೀಡಬೇಕೆಂದು ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಶಿರಸಿ ಪಶ್ಚಿಮ ಭಾಗದ ಅಧ್ಯಕ್ಷ ನವೀನ ಶೆಟ್ಟಿ ಆಗ್ರಹಿಸಿದರು.
ಈ ಕುರಿತು ಉಪವಿಭಾಗಾಧಿಕಾರಿ ಕಚೇರಿಯ ಅಧಿಕಾರಿ ಡಿ.ಆರ್.ಬೆಳ್ಳಿಮನೆ ಅವರಿಗೆ ಮನವಿ ನೀಡಿದ ಅವರು, ‘ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವವರೆಗೆ ಕೆಲಸದ ಆದೇಶದ ಮಂಜೂರಾತಿ ಮಾಡಲು ಸಾಧ್ಯವಿಲ್ಲ ಎಂಬುದು ರಾಜ್ಯ ಸರ್ಕಾರಿ ಅಧಿಕಾರಗಳ ಮಾತು. ಅಧಿಕಾರಿಗಳು ನಮ್ಮ ಗ್ರಾಮ ನಮ್ಮ ಯೋಜನೆ ವಾರ್ಷಿಕ ಯೋಜನೆ ಮಾಡಿ ಅದನ್ನು ಅಪ್ಲೋಡ್ ಮಾಡುವುದರ ಜತೆ ಲೆಕ್ಕಪರಿಶೋಧನಾ ವರದಿ ಪೂರ್ಣಗೊಳಿಸಿ ನೀಡುವವರೆಗೆ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎನ್ನುವುದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಒಟ್ಟಿನಲ್ಲಿ ಗ್ರಾಮ ಪಂಚಾಯಿತಿಗೆ ಬಹುಮುಖ್ಯ ಅನುದಾನವಾಗಿರುವ 15ನೇ ಹಣಕಾಸಿನ ಕಾಮಗಾರಿ ನಡೆಸಲು ಅಧಿಕಾರಿಗಳು ತಕ್ಷಣ ಅನುಮತಿ ನೀಡಬೇಕು’ ಎಂದರು.
‘ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಜನತೆಗೆ ತಮ್ಮ ಹಕ್ಕಿನ ಯೋಜನೆಗಳನ್ನು ಒತ್ತಾಯಿಸುವ ನೇರ ವೇದಿಕೆ ಇಲ್ಲ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರಿಲ್ಲದ ಕಾರಣ ಬರಬೇಕಾದ 15ನೇ ಹಣಕಾಸು ಅನುದಾನ ಸ್ಥಗಿತಗೊಂಡು ಅಭಿವೃದ್ಧಿ ಕಾಮಗಾರಿಗಳಿಗೆ ಹಾಕಲು ಅನುದಾನ ಇಲ್ಲದಂತಾಗಿದೆ. ಅಭಿವೃದ್ಧಿ ಯೋಜನೆಗಳು ರಾಜ್ಯದ ಉನ್ನತಾಧಿಕಾರಿಗಳ ಕೈಯಲ್ಲೇ ನಿಂತು ಹೋಗಿವೆ. ಸ್ಥಳೀಯ ಮಟ್ಟದಲ್ಲಿ ಜನರ ಅವಶ್ಯಕತೆಗೆ ತಕ್ಕಂತೆ ಯೋಜನೆಗಳ ರೂಪರೇಷೆ ಸಿದ್ಧವಾಗುತ್ತಿಲ್ಲ’ ಎಂದು ದೂರಿದರು.
‘ಬಸವ ವಸತಿ ಯೋಜನೆ ಅಡಿ ಇನ್ನೂ ಸುಮಾರು 218 ಮನೆಗಳಿಗೆ ಹಣ ಬಿಡುಗಡೆಗೆ ಬಾಕಿ ಇದ್ದು, ತಕ್ಷಣ ಹಣ ಬಿಡುಗಡೆ ಮಾಡಬೇಕು. 2021-22 ಸಾಲಿನಲ್ಲಿ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಆಶ್ರಯ ಯೋಜನೆ ಮನೆ ಕೊಟ್ಟಿದ್ದು ಬಿಟ್ಟರೆ ಈವರೆಗೆ ಯಾವುದೇ ಪಂಚಾಯಿತಿ ಮನೆಯನ್ನು ಬಿಡುಗಡೆ ಮಾಡಿಲ್ಲ’ ಎಂದ ಅವರು, ‘ ಗ್ರಾಮ ಪಂಚಾಯಿತಿಗಳ ಇ-ತಂತ್ರಾಂಶದಲ್ಲಿ 11(ಬಿ) ಪ್ರಕ್ರಿಯೆ ತೆರೆಯದಿರುವ ಕಾರಣ ಬಡ ಕುಟುಂಬಗಳಿಗೆ ಮನೆ ಸಂಖ್ಯೆ ನೀಡುವುದು ಕಷ್ಟವಾಗುತ್ತಿದೆ. ಸರ್ಕಾರವು ತಕ್ಷಣವೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ವಾಸವಾಗಿರುವ ಪ್ರತಿಯೊಬ್ಬರಿಗೂ ಮನೆ ಸಂಖ್ಯೆ ನೀಡುವ ಸೌಲಭ್ಯವನ್ನು ಒದಗಿಸಬೇಕು. ಜತೆಗೆ, ತಂತ್ರಾಂಶದಲ್ಲಿರುವ ಲೋಪದೋಷಗಳನ್ನು ತಿದ್ದಿ, ಪ್ರಕ್ರಿಯೆಯನ್ನು ಸರಳೀಕರಣಗೊಳಿಸಬೇಕು’ ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಪ್ರಕಾಶ ಹೆಗಡೆ, ನಾಗರಾಜ ಹೆಗಡೆ, ಗಜಾನನ ನಾಯ್ಕ, ನಾರಾಯಣ ಹೆಗಡೆ, ಸಂದೇಶ ಭಟ್, ದತ್ತಾತ್ರೇಯ ಮಡಿವಾಳ, ಶ್ರೀಕಲಾ ನಾಯ್ಕ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.