ADVERTISEMENT

ಸೂಪಾ ಜಲಾಶಯದಲ್ಲಿ ಪತ್ತೆಯಾದ ವಿಗ್ರಹಗಳ ಸಂರಕ್ಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 16:06 IST
Last Updated 17 ಜೂನ್ 2022, 16:06 IST
ಹಳಿಯಾಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಆರ್.ವಿ.ದೇಶಪಾಂಡೆ, ‘ಡೆಕ್ಕನ್‌ ಹೆರಾಲ್ಡ್’ ಪತ್ರಿಕೆಯಲ್ಲಿ ಸೂಪಾ ಜಲಾಶಯದ ಬಗ್ಗೆ ಪ್ರಕಟವಾದ ವಿಶೇಷ ವರದಿಯನ್ನು ಉಲ್ಲೇಖಿಸಿದರು
ಹಳಿಯಾಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಆರ್.ವಿ.ದೇಶಪಾಂಡೆ, ‘ಡೆಕ್ಕನ್‌ ಹೆರಾಲ್ಡ್’ ಪತ್ರಿಕೆಯಲ್ಲಿ ಸೂಪಾ ಜಲಾಶಯದ ಬಗ್ಗೆ ಪ್ರಕಟವಾದ ವಿಶೇಷ ವರದಿಯನ್ನು ಉಲ್ಲೇಖಿಸಿದರು   

ಹಳಿಯಾಳ: ‘ಅನೇಕ ವರ್ಷಗಳ ನಂತರ ಬರಿದಾದ ಸೂಪಾ ಜಲಾಶಯದ ಹಿನ್ನೀರಿನಲ್ಲಿ ಈ ಹಿಂದೆ ಮುಳುಗಡೆಯಾದ ಗ್ರಾಮಗಳ ಕುರುಹುಗಳು ಗೋಚರಿಸುತ್ತಿವೆ. ದೇವಸ್ಥಾನ, ಬಾವಿ, ವಿಗ್ರಹಗಳು ಒಂದೊಂದಾಗಿ ಕಾಣುತ್ತಿವೆ. ಅವುಗಳನ್ನು ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಿ, ದಾಖಲಿಸಿ ಸುಪರ್ದಿಗೆ ಪಡೆದು ಸಂರಕ್ಷಿಸಬೇಕು’ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜೊಯಿಡಾದಲ್ಲಿ ಜಾನಪದ ವಿಶ್ವವಿದ್ಯಾಲಯ ವಿಸ್ತರಣಾ ಶಾಖೆಯಿದೆ. ಜಲಾಶಯದಲ್ಲಿ ಸಿಗುವ ಅವಶೇಷಗಳನ್ನು ಇಲ್ಲಿ ಸಂಗ್ರಹಿಸಿಡಬಹುದು. ಇದರಿಂದ ಇಂದಿನ ಹಾಗೂ ಮುಂದಿನ ಪೀಳಿಗೆಗೆ ಮಾಹಿತಿ ಒದಗಿಸಲು ಸಹಕಾರಿ ಆಗಬಹುದು’ ಎಂದರು.

‘ಪುರಾತತ್ವ ಇಲಾಖೆಯವರು ಮುಂಗಾರು ಮಳೆ ಜೋರಾಗುವ ಮುಂಚೆಯೇಅವಶೇಷಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮುಖ್ಯಮಂತ್ರಿ, ಕರ್ನಾಟಕ ವಿದ್ಯುತ್‌ ನಿಗಮ ಹಾಗೂ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆಯಲಾಗಿದೆ’ ಎಂದರು.

ADVERTISEMENT

ನೀರು ಹರಿಸಲು ಆಗ್ರಹ: ಮುಂಗಾರು ವಿಳಂಬದಿಂದ ಜಲಾಶಯದ ನೀರು ಬತ್ತುತ್ತಿದೆ. ಇದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ಇದೆ. ಇದರಿಂದ ಸ್ಥಳೀಯರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಇದೆ.

‘ಕಾಳಿನದಿಯಲ್ಲಿ ನೀರಿನ ಹರಿವು ಕಡಿಮೆ ಆಗಿದ್ದರಿಂದ ದಾಂಡೇಲಿಯ ಕಾಗದ ಕಾರ್ಖಾನೆಯ ಮೂರು ಘಟಕದ ಉತ್ಪಾದನೆ ಸ್ಥಗಿತಗೊಳಿಸಿವೆ. ಸ್ಥಳೀಯರಿಗೆ ನೀರಿನ ಸಮಸ್ಯೆ ಆಗದಂತೆ, ಮುಂಗಾರು ಪ್ರಾರಂಭವಾಗುವವರೆಗೂ ಕಾಳಿ ನದಿಯಲ್ಲಿ ಕನಿಷ್ಠ ನೀರಿನ ಮಟ್ಟವನ್ನು ಕಾಯ್ದಿರಿಸಬೇಕು. ಸ್ಥಳೀಯರ ಅಗತ್ಯ ಪೂರೈಸುವ ನಿಟ್ಟಿನಲ್ಲಿ ಸೂಪಾ ಜಲಾಶಯದಿಂದ ನೀರು ಬಿಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದೂ ಅವರು ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.