ADVERTISEMENT

ವಿದ್ಯುತ್ ಶಾರ್ಟ್ ಸರ್ಕೀಟ್: ಜಿ.ಪಂ ಅಭಿಲೇಖಾಲಯ ಕಟ್ಟಡದಲ್ಲಿ ಬೆಂಕಿ

ವಿದ್ಯುತ್ ಶಾರ್ಟ್ ಸರ್ಕೀಟ್: ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು ಭಸ್ಮ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 4:13 IST
Last Updated 6 ಜೂನ್ 2021, 4:13 IST
ಕಾರವಾರದ ಜಿಲ್ಲಾ ಪಂಚಾಯಿತಿ ಅಭಿಲೇಖಾಲಯ ಕಟ್ಟಡದಲ್ಲಿ ಶನಿವಾರ ಬೆಂಕಿ ಅವಘಡದಿಂದ ‍ಪೀಠೋಪಕರಣಗಳು ಸುಟ್ಟು ಕರಕಲಾಗಿರುವುದು
ಕಾರವಾರದ ಜಿಲ್ಲಾ ಪಂಚಾಯಿತಿ ಅಭಿಲೇಖಾಲಯ ಕಟ್ಟಡದಲ್ಲಿ ಶನಿವಾರ ಬೆಂಕಿ ಅವಘಡದಿಂದ ‍ಪೀಠೋಪಕರಣಗಳು ಸುಟ್ಟು ಕರಕಲಾಗಿರುವುದು   

ಕಾರವಾರ: ನಗರದ ಜಿಲ್ಲಾ ಪಂಚಾಯಿತಿ ಮಹಾ ಅಭಿಲೇಖಾಲಯ ಕಟ್ಟಡದ ನೆಲ ಅಂತಸ್ತಿನಲ್ಲಿ ಶನಿವಾರ ಬೆಳಿಗ್ಗೆ ಅಗ್ನಿ ಅವಘಡ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ‘ಕೆ–ಸ್ವಾನ್’ ಕಚೇರಿಯ ಪೀಠೋಪಕರಣಗಳು, ಟಿ.ವಿ ಹಾಗೂ ಸಿಸಿಟಿವಿ ಕ್ಯಾಮೆರಾ ಉಪಕರಣಗಳು ಭಸ್ಮವಾಗಿವೆ.

ವಿದ್ಯುತ್ ಶಾರ್ಟ್ ಸರ್ಕೀಟ್ ಆಗಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ‘ಬೆಳಿಗ್ಗೆ 8.45ರ ಸುಮಾರಿಗೆ ಅವಘಡ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ನೆಲ ಅಂತಸ್ತಿನಲ್ಲಿ ಕೆ–ಸ್ವಾನ್ ಕಚೇರಿ, ನರೇಗಾ ಒಂಬುಡ್ಸ್‌ಮನ್ ಕಚೇರಿಗಳಿವೆ. ಅಲ್ಲಿದ್ದ ಮರದ ಪೀಠೋಪಕರಣಗಳು ಸುಟ್ಟು ಹೋಗಿವೆ’ ಎಂದರು.

‘ಎರಡನೇ ಮಹಡಿಯಲ್ಲಿ ಅಕ್ಷರ ದಾಸೋಹ ಯೋಜನೆಯ ಕಾರ್ಯ ನಿರ್ವಾಹಕ ಅಧಿಕಾರಿ ಕಚೇರಿಯಿದೆ. ಮೂರನೇ ಮಹಡಿಯಲ್ಲಿ ದಾಖಲೆಗಳು, ಕಂಪ್ಯೂಟರ್‌ಗಳು ಇವೆ. ಅವುಗಳನ್ನು ಪರಿಶೀಲಿಸಿದ್ದು, ಹಾನಿಯಾಗಿಲ್ಲ. ಯಾವುದೇ ದಾಖಲೆಗಳೂ ಸುಟ್ಟು ಹೋಗಿಲ್ಲ. ಮುಂದೆ ಈ ರೀತಿ ಆಗದಂತೆ ಜಿಲ್ಲಾ ಪಂಚಾಯಿತಿಯ ಕಚೇರಿಯ ಇಡೀ ಸಮುಚ್ಛಯದಲ್ಲಿ ತಜ್ಞರಿಂದ ಪರಿಶೀಲನೆ ನಡೆಸಲಾಗುವುದು. ಅಗತ್ಯ ದುರಸ್ತಿ ಕಾರ್ಯ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಭೇಟಿ ನೀಡಿ, ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಮರದ ಮತ್ತು ಪ್ಲೈವುಡ್ ಪೀಠೋಪಕರಣಗಳು ಇದ್ದ ಕಾರಣ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.