ಕಾರವಾರ: ಹಾರುವ ಕಾಂಡೆ ಮೀನು ಚುಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ತಾಲ್ಲೂಕಿನ ಮಾಜಾಳಿ ಗ್ರಾಮದ ಅಕ್ಷಯ ಮಾಜಾಳಿಕರ (24) ಎಂಬುವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾರೆ.
ಎರಡು ದಿನಗಳ ಹಿಂದೆ ಮಾಜಾಳಿ ಗ್ರಾಮದ ಬಳಿ ಸಮುದ್ರದಲ್ಲಿ ಪಾತಿದೋಣಿ ಬಳಸಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಚೂಪಾದ ಮೀನು, ಅಕ್ಷಯ ಅವರ ಹೊಟ್ಟೆ ಭಾಗಕ್ಕೆ ಚುಚ್ಚಿತ್ತು. ಅವರಿಗೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) ಚಿಕಿತ್ಸೆ ನೀಡಲಾಗಿತ್ತು. ‘ಮೀನಿನ ಮುಳ್ಳು ಜೀರ್ಣಾಂಗವ್ಯೂಹಕ್ಕೆ ಬಲವಾಗಿ ಚುಚ್ಚಿಕೊಂಡಿತ್ತು. ಇದರಿಂದ ಉಂಟಾದ ನಂಜು ಸಾವಿಗೆ ಕಾರಣ’ ಎಂದು ವೈದ್ಯರು ತಿಳಿಸಿದ್ದಾರೆ.
‘ಯುವಕನ ಹೊಟ್ಟೆಭಾಗದಲ್ಲಿ ಮುಳ್ಳು ಸಿಲುಕಿದ್ದರೂ ಅದನ್ನು ಸ್ಕ್ಯಾನಿಂಗ್‌ನಲ್ಲಿ ಪತ್ತೆ ಮಾಡಿಲ್ಲ. ಸರಿಯಾದ ಚಿಕಿತ್ಸೆ ಸಿಗದೆ ಯುವಕ ಮೃತಪಟ್ಟಿದ್ದಾನೆ’ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಯುವಕನ ಮೃತದೇಹ ಒಯ್ಯಲು ನಿರಾಕರಿಸದ ಮೃತನ ಕುಟುಂಬಸ್ಥರು, ಸ್ನೇಹಿತರು ಕ್ರಿಮ್ಸ್ ಎದುರು ಪ್ರತಿಭಟನೆಗೆ ಮುಂದಾದರು. ಶಾಸಕ ಸತೀಶ ಸೈಲ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಮಧ್ಯಪ್ರವೇಶಿಸಿ ಜನರನ್ನು ಸಮಾಧಾನಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.