ADVERTISEMENT

ಉತ್ತರ ಕನ್ನಡ | ಕನ್ನಡ ಸಾಹಿತ್ಯ ಪರಿಷತ್ತು: ಸ್ಪರ್ಧೆಯ ಕಣದಲ್ಲಿ ಐವರು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 15:11 IST
Last Updated 20 ನವೆಂಬರ್ 2021, 15:11 IST
ಕನ್ನಡ ಸಾಹಿತ್ಯ ಪರಿಷತ್ತಿನ ಲಾಂಛನ
ಕನ್ನಡ ಸಾಹಿತ್ಯ ಪರಿಷತ್ತಿನ ಲಾಂಛನ   

ಕಾರವಾರ: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯು ನ.21ರಂದು ನಡೆಯಲಿದ್ದು, ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಐವರು ಆಕಾಂಕ್ಷಿಗಳು ಕಣದಲ್ಲಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶವಿದೆ.

ಉತ್ತರ ಕನ್ನಡದಲ್ಲಿ ಒಟ್ಟು 4,734 ಮತದಾರರು ಈ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಿದ್ದಾರೆ. ಒಟ್ಟು 13 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಎಲ್ಲ ತಹಶೀಲ್ದಾರರ ಕಚೇರಿಗಳಲ್ಲಿ ತಲಾ ಒಂದು ಹಾಗೂ ಭಟ್ಕಳ ತಾಲ್ಲೂಕಿನ ಮಾವಳ್ಳಿಯಲ್ಲಿ ಒಂದು ಮತಗಟ್ಟೆ ಇದರಲ್ಲಿ ಒಳಗೊಂಡಿವೆ.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ದಾಂಡೇಲಿಯ ಪತ್ರಕರ್ತ ಬಿ.ಎನ್.ವಾಸರೆ, ದಾಂಡೇಲಿಯ ವಕೀಲ ರಾಘವೇಂದ್ರ ಗಡ್ಡೆಪ್ಪನವರ್, ಪರಿಷತ್ತಿನ ಯಲ್ಲಾಪುರ ತಾಲ್ಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಹೊನ್ನಾವರದ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ, ಪರಿಷತ್ತಿನ ಹಿರಿಯ ಸದಸ್ಯೆ ಹೊನ್ನಾವರದ ಶಾರದಾ ಭಟ್ ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ ವಾಸರೆ ಅವರು ಕಳೆದ ಬಾರಿಯೂ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ADVERTISEMENT

ಅಭ್ಯರ್ಥಿಗಳು ಶನಿವಾರವೂ ಮತದಾರರ ಮನವೊಲಿಕೆಯಲ್ಲಿ ತೊಡಗಿದ್ದರು. ತಮಗೆ ಮತ ಯಾಕೆ ನೀಡಬೇಕು ಎಂಬುದನ್ನು ಮತದಾರರಿಗೆ ಮನದಟ್ಟು ಮಾಡಲು ಯತ್ನಿಸಿದರು. ಚುನಾವಣೆಯ ದಿನಾಂಕ ಪ್ರಕಟವಾಗುತ್ತಿದ್ದಂತೆ ಎಲ್ಲ ಅಭ್ಯರ್ಥಿಗಳೂ ತಾಲ್ಲೂಕುಗಳಿಗೆ ಭೇಟಿ ನೀಡಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ತಾವು ಆಯ್ಕೆಯಾದರೆ ಹಮ್ಮಿಕೊಳ್ಳುವ ಕಾರ್ಯಗಳ ಬಗ್ಗೆ ಪ್ರಣಾಳಿಕೆಯಲ್ಲಿ ಮುದ್ರಿಸಿ ಮತದಾರರಿಗೆ ನೀಡಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳನ್ನೂ ಸಕ್ರಿಯವಾಗಿ ಬಳಸಿಕೊಂಡಿರುವುದು ಈ ಬಾರಿಯ ವಿಶೇಷವಾಗಿದೆ.

ಮತದಾನ ಹೀಗಿರಲಿದೆ:

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರ ಸ್ಥಾನದೊಂದಿಗೇ ರಾಜ್ಯಾಧ್ಯಕ್ಷರ ಸ್ಥಾನಕ್ಕೂ ಮತದಾನ ನಡೆಯಲಿದೆ. ಆದ್ದರಿಂದ ಮತದಾರರಾಗಿರುವ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ತಲಾ ಎರಡು ಮತಪತ್ರಗಳನ್ನು ನೀಡಲಾಗುತ್ತದೆ. ಅದರಲ್ಲಿ ಜಿಲ್ಲಾ ಘಟಕದ ಮತ್ತು ರಾಜ್ಯ ಘಟಕದ ಅಭ್ಯರ್ಥಿಗಳಲ್ಲಿ ತಮ್ಮ ಆಯ್ಕೆಯನ್ನು ನಮೂದಿಸಿ ಮತಪೆಟ್ಟಿಗೆಗೆ ಹಾಕಬೇಕು.

ಮತ ಎಣಿಕಯು ನ.21ರಂದೇ ರಾತ್ರಿ ನಡೆಯಲಿದ್ದು, ಕಾರವಾರದ ತಹಶೀಲ್ದಾರ್ ಕಚೇರಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ಪ್ರಕಟವಾಗಲಿದೆ. ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಯು ಪರಿಷತ್ತಿನ ಕೇಂದ್ರ ಕಚೇರಿಯಿಂದ ನ.22ರಂದು ಘೋಷಣೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.