ADVERTISEMENT

ಕಾರವಾರ: ಎರಡೇ ವರ್ಷದಲ್ಲಿ ನೆರೆಯ ಮರು ಏಟು

ಕದ್ರಾ ಜಲಾಶಯದಿಂದ ಹರಿದ ನೀರಿನ ಹೊಡೆತಕ್ಕೆ ಕೊಚ್ಚಿಹೋದ ಬದುಕು

ಸದಾಶಿವ ಎಂ.ಎಸ್‌.
Published 25 ಜುಲೈ 2021, 19:30 IST
Last Updated 25 ಜುಲೈ 2021, 19:30 IST
ಕಾರವಾರ ತಾಲ್ಲೂಕಿನ ಕದ್ರಾದಲ್ಲಿ ಕಾಳಿ ನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದ ತಮ್ಮ ಮನೆಯ ಸಾಮಗ್ರಿಗಳನ್ನು ಗ್ರೇಸಿ ಮುತ್ತುಸ್ವಾಮಿ ಭಾನುವಾರ ಆರಿಸಿಕೊಂಡರು
ಕಾರವಾರ ತಾಲ್ಲೂಕಿನ ಕದ್ರಾದಲ್ಲಿ ಕಾಳಿ ನದಿಯ ಪ್ರವಾಹದಿಂದ ಮುಳುಗಡೆಯಾಗಿದ್ದ ತಮ್ಮ ಮನೆಯ ಸಾಮಗ್ರಿಗಳನ್ನು ಗ್ರೇಸಿ ಮುತ್ತುಸ್ವಾಮಿ ಭಾನುವಾರ ಆರಿಸಿಕೊಂಡರು   

ಕಾರವಾರ: ‘ಡ್ಯಾಂನಿಂದ ನೀರು ಬಿಡ್ತಾರೆ ಅಂತ ಹೇಳ್ಲೇ ಇಲ್ಲ. ನೋಡ ನೋಡ್ತಿದ್ದಂತೆ ಎದೆಮಟ್ಟ ನೀರು ಬಂತು. ಮನೆಯಲ್ಲಿದ್ದ ಯಾವುದನ್ನೂ ಹೊರಗೆ ತರಲಾಗ್ಲಿಲ್ಲ. ಜೀವ ಉಳಿಸ್ಕೊಂಡಿದ್ದೇ ದೊಡ್ಡದು. ಏನೂ ತಗೊಳ್ಳೋದಕ್ಕೆ ಆಗ್ಲಿಲ್ಲ. ಪಾತ್ರೆ ಸಾಮಾನು, ಟಿ.ವಿ ಎಲ್ಲ ಅಲ್ಲೇ ಬಿದ್ದಿವೆ..’

ಕದ್ರಾ ಜಲಾಶಯದ ಪ್ರವಾಹದಿಂದ ಸಂಪೂರ್ಣ ಕುಸಿದು ಹೋದ ತಮ್ಮ ಮನೆಯ ಮುಂದೆ ನಿಂತು ಲೇಬರ್ ಕಾಲೊನಿ ನಿವಾಸಿ ಗಣೇಶ ತುಂಬಿ ಬಂದಿದ್ದ ಕಣ್ಣೊರೆಸಿಕೊಂಡರು.ಕೂಲಿ ಕಾರ್ಮಿಕರಾಗಿರುವ ಅವರ ಮನೆ 2019ರ ಪ್ರವಾಹದಲ್ಲೂ ಕುಸಿದಿತ್ತು. ಬಳಿಕ ಅಲ್ಲೇ ಸಮೀಪದಲ್ಲಿ ಮತ್ತೊಂದು ಮನೆ ನಿರ್ಮಿಸಿಕೊಂಡಿದ್ದರು. ಈ ಬಾರಿ ಅದೂ ನೆರೆಯ ಪಾಲಾಗಿದೆ.

ಜಲಾಶಯದಿಂದ ಕಾಳಿ ನದಿಗೆ ಜುಲೈ 23ರಂದು ಸುಮಾರು 2 ಲಕ್ಷ ಕ್ಯುಸೆಕ್ ನೀರನ್ನು ಹರಿಸಲಾಗಿತ್ತು. ಅದರ ಪರಿಣಾಮ ಈ ಭಾಗದಲ್ಲಿ ನೂರಾರು ಮನೆಗಳು ನೆಲಸಮವಾಗಿವೆ. ಎರಡು ವರ್ಷಗಳ ಹಿಂದಿನ ಆಘಾತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಅದ‌ಕ್ಕಿಂತ ದೊಡ್ಡ ಪ್ರಮಾಣದಲ್ಲಿ ನೀರು ಸರ್ವಸ್ವವನ್ನೂ ಆಪೋಷನ ಪಡೆದಿದೆ.

ADVERTISEMENT

ಕದ್ರಾ, ಕೆ.ಪಿ.ಸಿ ಲೇಬರ್ ಕಾಲೊನಿ, ಗಾಂಧಿನಗರ, ಕುರ್ನಿಪೇಟೆ, ಮಲ್ಲಾಪುರ, ಕ್ರಿಶ್ಚಿಯನ್ ವಾಡ, ಬೊಳ್ವೆ –ಹೀಗೆ ಜಲಾಶಯದ ಕೆಳಭಾಗದಲ್ಲಿ ಎಲ್ಲೆಲ್ಲೂ ಕುಸಿದ ಮನೆಗಳು, ಮುರಿದ ಚಾವಣಿ, ಕೆಸರು ಮೆತ್ತಿದ ಮನೆಗಳ ಜಗುಲಿ, ವಾಹನಗಳೇ ಕಾಣಿಸುತ್ತವೆ.

ಭಾನುವಾರ ನೆರೆ ಸಂಪೂರ್ಣ ಇಳಿದಿದೆ. ಸ್ಥಳಕ್ಕೆ ‘ಪ್ರಜಾವಾಣಿ’ ತೆರಳಿದಾಗ ಸಂತ್ರಸ್ತರು, ಅಳಿದುಳಿದ ವಸ್ತುಗಳಲ್ಲೇ ಬಳಕೆಗೆ ಸಾಧ್ಯವಿರುವುದನ್ನು ಆರಿಸಿ ತೆಗೆಯುತ್ತಿದ್ದುದು, ಸ್ವಚ್ಛಗೊಳಿಸುತ್ತಿದ್ದುದು ಕಂಡುಬಂತು. ಹಾಸಿಗೆ, ಬಟ್ಟೆ, ಮಕ್ಕಳ ಶಾಲಾ ಪುಸ್ತಕಗಳು, ಆಹಾರ ಧಾನ್ಯ ಎಲ್ಲವೂ ನೀರಿನಲ್ಲಿ ನೆನೆದು ವ್ಯರ್ಥವಾಗಿವೆ. ಅವುಗಳನ್ನು ಬಿಸಿಲಿನಲ್ಲಿ ಒಣಗಿಸುವ ಯತ್ನವೂ ಕಾಣಿಸಿತು. ಸಂಪೂರ್ಣ ಮುಳುಗಡೆಯಾಗಿದ್ದ ಮಲ್ಲಾಪುರದ ಪೊಲೀಸ್ ಠಾಣೆಯಲ್ಲೂ ಇದೇ ರೀತಿಯ ಸನ್ನಿವೇಶವಿತ್ತು.

‘ನದಿಯಿಂದ ನೀರು ಮೇಲೆ ಬಂದಿದ್ದೇ ಗೊತ್ತಾಗ್ಲಿಲ್ಲ. ಉಟ್ಟ ಬಟ್ಟೆಯಲ್ಲೇ ಹೊರಗೆ ಬಂದು ಜೀವ ಉಳಿಸಿಕೊಂಡಿದ್ದೇವೆ’ ಎಂದು ನಡುಗುವ ಧ್ವನಿಯಲ್ಲಿ ಹೇಳಿದವರು ಕದ್ರಾದ ಗ್ರೇಸಿ ಮುತ್ತುಸ್ವಾಮಿ. ಕಳೆದ ವರ್ಷವಷ್ಟೇ ಹೊಸದಾಗಿ ಸಿಮೆಂಟ್ ಶೀಟ್‌ಗಳ ಚಾವಣಿಯಿಂದ ನಿರ್ಮಿಸಿದ್ದ ಅವರ ಮನೆ ಕುಸಿದಿದೆ. ಅದನ್ನು ತೋರಿಸುತ್ತ, ‘ಮತ್ತೆ ಮಳೆಯಾಗದಿದ್ದರೆ ಸಾಕು’ ಎಂದು ಆತಂಕದಿಂದಲೇ ಹೇಳಿದರು.

ಈ ಪ್ರದೇಶದಲ್ಲಿ ವ್ಯಾಪಾರ, ಕಿರಾಣಿ ಅಂಗಡಿ, ಕೂಲಿ, ಗುತ್ತಿಗೆ ಕೆಲಸ ಮುಂತಾದವುಗಳಿಗಾಗಿ ಬಂದವರಿದ್ದಾರೆ. ಅವರಲ್ಲಿ ಹಲವರು, ನೆರೆ ಇಳಿಯುತ್ತಿದ್ದಂತೆ ಮನೆ ಖಾಲಿ ಮಾಡಿದ್ದಾರೆ. ಸ್ಟೀಲ್, ಪ್ಲಾಸ್ಟಿಕ್, ಮರ ಮುಂತಾದ ಸ್ವಚ್ಛಗೊಳಿಸಿದ ಬಳಿಕ ಬಳಕೆಗೆ ಸಾಧ್ಯವಾಗುವ ವಸ್ತುಗಳನ್ನು ಹೇರಿಕೊಂಡು ಬೇರೆ ಬೇರೆ ಕಡೆಗಳಿಗೆ ತೆರಳಿದ್ದಾರೆ. ಪ್ರವಾಹದಿಂದ ಅಸ್ತವ್ಯಸ್ತವಾಗಿರುವ ಜೀವನ ಮತ್ತೆ ಸಹಜವಾಗಲು ಅದೆಷ್ಟೋ ತಿಂಗಳೇ ಬೇಕಾಗಬಹುದು.

ಕೃಷಿಗೂ ಭಾರಿ ಹಾನಿ:ಕದ್ರಾ ಜಲಾಶಯದಿಂದ ಕೆಳಭಾಗದಲ್ಲಿರುವ ಕೃಷಿ ಜಮೀನುಗಳು, ವಿವಿಧ ರಸ್ತೆಗಳಿಗೆ ಭಾರಿ ಹಾನಿಯಾಗಿದೆ. ಹಣಕೋಣ ಜೂಗ ಪ್ರದೇಶದಲ್ಲಿ ಕೆಲವೇ ದಿನಗಳ ಹಿಂದೆ ನಾಟಿ ಮಾಡಲಾಗಿದ್ದ ಭತ್ತದ ಪೈರು ನೀರುಪಾಲಾಗಿದೆ. ಕಾಳಿ ನದಿಯ ನೀರು ಇಳಿದ ಬಳಿಕ ಗದ್ದೆಗಳಲ್ಲಿ ಪುನಃ ಬೇಸಾಯ ಮಾಡಲು ಸಿದ್ಧತೆಯ ಪ್ರಯತ್ನಗಳೂ ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.