ADVERTISEMENT

‘ಅಜಿನೊಮೋಟೊ’ ಅತಿಯಾದ ಬಳಕೆ ಪತ್ತೆ

ಅಧಿಕಾರಿಗಳಿಂದ ಹೋಟೆಲ್‌ಗಳಲ್ಲಿ ದಿಢೀರ್ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 14:44 IST
Last Updated 27 ಜನವರಿ 2021, 14:44 IST
ಆಹಾರ ಸುರಕ್ಷತೆಯ ನಿಯಮ ಮೀರಿದ ಕಾರವಾರದ ಹೋಟೆಲೊಂದಕ್ಕೆ ಅಧಿಕಾರಿಗಳು ಬುಧವಾರ ನೋಟಿಸ್ ನೀಡಿದರು
ಆಹಾರ ಸುರಕ್ಷತೆಯ ನಿಯಮ ಮೀರಿದ ಕಾರವಾರದ ಹೋಟೆಲೊಂದಕ್ಕೆ ಅಧಿಕಾರಿಗಳು ಬುಧವಾರ ನೋಟಿಸ್ ನೀಡಿದರು   

ಕಾರವಾರ: ನಗರದ 15 ಹೋಟೆಲ್‌ಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿದ ಜಿಲ್ಲಾ ಅಂಕಿತ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು, ಆಹಾರದ ಗುಣಮಟ್ಟ, ಸ್ವಚ್ಛತೆಯನ್ನು ಪರಿಶೀಲಿಸಿದರು. ನಿಯಮ ಮೀರಿದ ಹಲವು ಹೋಟೆಲ್‌ಗಳಿಗೆ ನೋಟಿಸ್ ನೀಡಿದರು.

ಬೀದಿಬದಿಯ ಗೂಡಂಗಡಿಗಳಲ್ಲಿ ಮಾತ್ರ ಪರಿಶೀಲನೆ ಮಾಡಲಾಗುತ್ತದೆ, ದೊಡ್ಡ ಹೋಟೆಲ್‌ಗಳತ್ತ ಅಧಿಕಾರಿಗಳು ಗಮನ ಹರಿಸುವುದಿಲ್ಲ ಎಂದು ಸಾರ್ವಜನಿಕರಲ್ಲಿ ಅಸಮಾಧಾನವಿತ್ತು. ಆದರೆ, ಬುಧವಾರ ಅಧಿಕಾರಿಗಳು ದೊಡ್ಡ ಹೋಟೆಲ್‌ಗಳಲ್ಲೂ ಪರಿಶೀಲನೆ ನಡೆಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಅಂಕಿತ ಅಧಿಕಾರಿ ಡಾ.ರಾಜಶೇಖರ್, ‘ಕೆಲವು ಪ್ರಸಿದ್ಧ ಹೋಟೆಲ್‌ಗಳಲ್ಲಿ ಕೂಡ ಆಹಾರದ ಗುಣಮಟ್ಟ, ಸ್ವಚ್ಛತೆಯ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ದಿಢೀರ್ ಭೇಟಿ ನೀಡಿದ್ದೇವೆ. ಕೆಲವೆಡೆ ಕಳಪೆ ಗುಣಮಟ್ಟದ ಬಣ್ಣಗಳು (ಫುಡ್ ಕಲರ್), ರುಚಿವರ್ಧಕ ಟೇಸ್ಟಿಂಗ್ ಪೌಡರನ್ನು (ಅಜಿನೊಮೋಟೊ‌‌) ಅತಿಯಾಗಿ ಬಳಕೆ ಮಾಡುತ್ತಿರುವುದೂ ಕಂಡು ಬಂದಿದೆ. ಅವುಗಳನ್ನು ಜಪ್ತಿ ಮಾಡಿ, ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಹೋಟೆಲ್‌ಗಳ ಅಡುಗೆ ಕೋಣೆಯ ವಾತಾವರಣ, ಸ್ವಚ್ಛತೆ, ಆಹಾರ ಸಿದ್ಧಪಡಿಸುವ ಸ್ಥಳ, ಬಳಸುವ ಪದಾರ್ಥಗಳು, ಕಚ್ಛಾ ವಸ್ತುಗಳನ್ನು ಸಂಗ್ರಹಿಸುವ ವಿಧಾನ, ಪಾತ್ರೆಗಳನ್ನು ತೊಳೆಯುವ ರೀತಿ, ಕಾರ್ಮಿಕರ ವೈಯಕ್ತಿಕ ಸ್ವಚ್ಛತೆ, ಹೋಟೆಲ್ ಪರವಾನಗಿ ಮುಂತಾದವುಗಳನ್ನು ಕೂಲಂಕಷವಾಗಿ ಪರಿಶೀಲನೆ ಮಾಡಲಾಗಿದೆ’ ಎಂದು ಹೇಳಿದರು.

ಆಹಾರ ಸುರಕ್ಷತಾ ನಿರೀಕ್ಷಕ ಅರುಣ್ ಕಾಶಿ ಭಟ್ ಜೊತೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.