ADVERTISEMENT

ಕಾಲುಬಾಯಿ ಜ್ವರ: ನಾಲ್ಕು ದಿನದಲ್ಲಿ 32 ಸಾವಿರ ಲಸಿಕೆ ವಿತರಣೆ

ತಪ್ಪು ಕಲ್ಪನೆ ಹೋಗಲಾಡಿಸುವ ಸವಾಲು: ಬಿಸಿಲ ಝಳಕ್ಕೆ ಸುಸ್ತು

ಗಣಪತಿ ಹೆಗಡೆ
Published 5 ಏಪ್ರಿಲ್ 2024, 5:57 IST
Last Updated 5 ಏಪ್ರಿಲ್ 2024, 5:57 IST
ಕಾರವಾರ ತಾಲ್ಲೂಕಿನ ಆರವ ಗ್ರಾಮದಲ್ಲಿ ಹಸುವಿಗೆ ಕಾಲುಬಾಯಿ ಜ್ವರ ಲಸಿಕೆ ನೀಡುತ್ತಿರುವ ಪಶು ಸಂಗೋಪನೆ ಇಲಾಖೆ ಸಿಬ್ಬಂದಿ
ಕಾರವಾರ ತಾಲ್ಲೂಕಿನ ಆರವ ಗ್ರಾಮದಲ್ಲಿ ಹಸುವಿಗೆ ಕಾಲುಬಾಯಿ ಜ್ವರ ಲಸಿಕೆ ನೀಡುತ್ತಿರುವ ಪಶು ಸಂಗೋಪನೆ ಇಲಾಖೆ ಸಿಬ್ಬಂದಿ   

ಕಾರವಾರ: ಜಿಲ್ಲೆಯಲ್ಲಿ ಹಸುಗಳಿಗೆ ಕಾಲುಬಾಯಿ ಜ್ವರ ಲಸಿಕೆ ನೀಡುವ ಅಭಿಯಾನ ಆರಂಭಗೊಂಡ ನಾಲ್ಕು ದಿನದಲ್ಲಿ 32 ಸಾವಿರಕ್ಕೂ ಹೆಚ್ಚು ಲಸಿಕೆ ಒದಗಿಸಲಾಗಿದೆ. ಹೈನುಗಾರರಲ್ಲಿನ ತಪ್ಪು ಹೋಗಲಾಡಿಸುವ ಜತೆಗೆ ಪ್ರಖರ ಬಿಸಿಲಿನ ನಡುವೆಯೂ ಲಸಿಕೆ ವಿತರಣೆಯ ಸವಾಲನ್ನು ಲಸಿಕೆದಾರರು ನಿಭಾಯಿಸಬೇಕಾಗಿದೆ.

ಏ.1 ರಿಂದ ಆರಂಭಗೊಂಡಿರುವ ಕಾಲುಬಾಯಿ ಜ್ವರ ಲಸಿಕೆ ಅಭಿಯಾನವು ಏ.30ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿದೆ. 233 ಲಸಿಕೆದಾರರನ್ನು ಲಸಿಕೆ ವಿತರಣೆಗೆ ನೇಮಿಸಲಾಗಿದ್ದು, 4,957 ಬ್ಲಾಕ್ ರಚಿಸಿಕೊಳ್ಳಲಾಗಿದೆ. 30 ದಿನದ ಅವಧಿಯಲ್ಲಿ 4.10 ಲಕ್ಷ ಜಾನುವಾರುಗಳಿಗೆ ಲಸಿಕೆ ವಿತರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಪಶು ಸಂಗೋಪನೆ ಇಲಾಖೆಯ ವೈದ್ಯಾಧಿಕಾರಿಗಳು, ಲಸಿಕೆ ವಿತರಣೆಗೆ ನೇಮಿಸಿದ ಲಸಿಕೆದಾರರು ಪ್ರತಿ ಮನೆಗೆ ಭೇಟಿ ನೀಡಿ ಲಸಿಕೆ ವಿತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

‘ನಾಲ್ಕು ವರ್ಷಗಳಿಂದ ಈಚೆಗೆ ಲಸಿಕೆ ವಿತರಣೆ ಮೂಲಕ ರೋಗ ನಿಯಂತ್ರಿಸಲು ಅಭಿಯಾನ ರೂಪಿಸಲಾಗಿದೆ. ಇದು ಐದನೇ ಹಂತದ ಅಭಿಯಾನವಾಗಿದ್ದು ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ವಿತರಿಸಲಾಗುತ್ತಿದೆ. ಅಭಿಯಾನದ ಆರಂಭದಲ್ಲೇ ಜಿಲ್ಲೆಯಲ್ಲಿ ಸಿಬ್ಬಂದಿ ಉತ್ತಮ ಪ್ರಗತಿ ಸಾಧನೆ ಮಾಡಿದ್ದಾರೆ. ಪ್ರತಿನಿತ್ಯ ಸರಾಸರಿ 9 ರಿಂದ 10 ಸಾವಿರ ಹಸು, ಎಮ್ಮೆಗಳಿಗೆ ಲಸಿಕೆ ವಿತರಣೆ ನಡೆಯುತ್ತಿದೆ’ ಎಂದು ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಕೆ.ಎಂ.ಮೋಹನಕುಮಾರ ತಿಳಿಸಿದರು.

ADVERTISEMENT

‘ಕಾಲುಬಾಯಿ ಜ್ವರ ಲಸಿಕೆ ವಿತರಣೆಯಿಂದ ಹಸುವಿನ ಹಾಲು ಉತ್ಪಾದನೆ ಶಕ್ತಿ ಕುಸಿತವಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಇದೇ ಕಾರಣಕ್ಕೆ ಹಲವರು ಲಸಿಕೆ ಕೊಡಿಸಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಮನವರಿಕೆ ಮಾಡಿ ಲಸಿಕೆ ವಿತರಿಸುವ ಕಾರ್ಯ ನಡೆದಿದೆ. ನಾಲ್ಕು ತಿಂಗಳು ಒಳಗಿನ ಕರುಗಳ ಹೊರತಾಗಿ ಉಳಿದೆಲ್ಲ ಹಸು, ಎಮ್ಮೆಗೆ ಲಸಿಕೆ ಕೊಡಿಸಬೇಕು. ಇದರಿಂದ ಜ್ವರ ಬರದಂತೆ ನಿಯಂತ್ರಿಸಲು ಸಾಧ್ಯವಿದೆ’ ಎಂದರು.

‘ಗುಡ್ಡಗಾಡು ಜಿಲ್ಲೆಯಾಗಿರುವುದರಿಂದ ದಿನವೊಂದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ವಿತರಿಸಲು ಸಮಸ್ಯೆಯಾಗಿದೆ. ಅಲ್ಲದೇ ಬಿರು ಬಿಸಿಲಿನ ಕಾರಣದಿಂದ ಲಸಿಕೆದಾರರು ಹೆಚ್ಚು ತಿರುಗಾಡಲೂ ಕಷ್ಟವಾಗುತ್ತಿದೆ. ಆದರೂ ನಿರೀಕ್ಷೆಗಿಂತ ಉತ್ತಮ ಸ್ಪಂದನೆ ಇದೆ’ ಎಂದೂ ಹೇಳಿದರು.

ಅಲ್ಪ ಗೌರವಧನಕ್ಕೆ ಬೇಸರ

ಕಾಲುಬಾಯಿ ಜ್ವರ ಲಸಿಕೆ ವಿತರಿಸಲು ಗ್ರಾಮೀಣ ಭಾಗದಲ್ಲಿ ಲಸಿಕಾದಾರರನ್ನು ನೇಮಿಸಿ ಅವರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಪ್ರತಿ ಲಸಿಕಾದಾರರಿಗೆ ನಿರ್ದಿಷ್ಟ ಬ್ಲಾಕ್ ಜವಾಬ್ದಾರಿ ವಹಿಸಲಾಗಿದ್ದು ಆ ವ್ಯಾಪ್ತಿಯಲ್ಲಿರುವ ಜಾನುವಾರುಗಳಿಗೆ ಲಸಿಕೆ ವಿತರಿಸುವ ಜವಾಬ್ದಾರಿ ನೀಡಲಾಗಿದೆ. ‘ಜಾನುವಾರುವಿಗೆ ನೀಡುವ ಪ್ರತಿ ಲಸಿಕೆಗೆ ತಲಾ ₹5 ಗೌರವಧನ ನೀಡಲಾಗುತ್ತಿದೆ. ಬಿಸಿಲ ಝಳ ಗುಡ್ಡಗಾಡು ಪ್ರದೇಶವಾಗಿದ್ದರಿಂದ ನಿತ್ಯ ಸರಾಸರಿ 50 ರಿಂದ 60 ಲಸಿಕೆ ನೀಡಲು ಮಾತ್ರ ಸಾಧ್ಯವಾಗುತ್ತಿದೆ. ಜನರಿಗೆ ಲಸಿಕೆ ಮಹತ್ವ ತಿಳಿಸಿ ಒದಗಿಸುವುದರ ಜತೆಗೆ ಲಸಿಕೆ ನೀಡಿದ ಮಾಹಿತಿಯನ್ನು ‘ಸ್ವದೇಶ ಪಶು ಧನ್’ ಆ್ಯಪ್‍ನಲ್ಲಿ ದಾಖಲಿಸಬೇಕಾಗುತ್ತದೆ. ಲಸಿಕೆಯನ್ನು ಪಶು ಆಸ್ಪತ್ರೆಯಿಂದ ನಿತ್ಯ ತರಲು ಓಡಾಟ ನಡೆಸಬೇಕಾಗುತ್ತದೆ. ಇಷ್ಟೆಲ್ಲ ಕೆಲಸವಿದ್ದರೂ ಅಲ್ಪ ಗೌರವಧನ ನೀಡಲಾಗುತ್ತಿದೆ. ಹಿಂದೆ ಲಸಿಕೆ ನೀಡಿದ ಗೌರವಧನ ಕೆಲವರಿಗೆ ಪಾವತಿಯಾಗಿರಲಿಲ್ಲ’ ಎಂದು ಲಸಿಕೆದಾರರೊಬ್ಬರು ಬೇಸರ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.