ADVERTISEMENT

ಸಿದ್ದಾಪುರ | ಅಡಿಕೆ ಮರಗಳ ಕಟಾವು: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 7:00 IST
Last Updated 26 ಡಿಸೆಂಬರ್ 2025, 7:00 IST
ಸಿದ್ದಾಪುರ ತಾಲ್ಲೂಕಿನ ಗೋಳಿಕೈನಲ್ಲಿ ಅರಣ್ಯ ಇಲಾಖೆ ಅತಿಕ್ರಮಣ ತೆರವಿಗೆ ಅಡಿಕೆ ಮರಗಳನ್ನು ಕಡಿದ ಸ್ಥಳಕ್ಕೆ ಭೇಟಿ ನೀಡಿದ ಅನಂತಮೂರ್ತಿ ಹೆಗಡೆ ಮಾತನಾಡಿದರು
ಸಿದ್ದಾಪುರ ತಾಲ್ಲೂಕಿನ ಗೋಳಿಕೈನಲ್ಲಿ ಅರಣ್ಯ ಇಲಾಖೆ ಅತಿಕ್ರಮಣ ತೆರವಿಗೆ ಅಡಿಕೆ ಮರಗಳನ್ನು ಕಡಿದ ಸ್ಥಳಕ್ಕೆ ಭೇಟಿ ನೀಡಿದ ಅನಂತಮೂರ್ತಿ ಹೆಗಡೆ ಮಾತನಾಡಿದರು   

ಸಿದ್ದಾಪುರ: ‘ತಾಲ್ಲೂಕಿನ ಕ್ಯಾದಗಿ ಅರಣ್ಯ ವಲಯದ ಗೋಳಿಕೈ ಗಣೇಶ ಹೆಗಡೆ ಎನ್ನುವವರ ಅತಿಕ್ರಮಣ ಜಮೀನಿನಲ್ಲಿದ್ದ 120ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿರುವ ಅರಣ್ಯ ಇಲಾಖೆಯ ಕೃತ್ಯವನ್ನು ಖಂಡಿಸುತ್ತೇವೆ’ ಎಂದು ಬಿಜೆಪಿ ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಶಿರಸಿ ಹೇಳಿದರು.

ತಾಲ್ಲೂಕಿನ ಗೋಳಿಕೈನಲ್ಲಿ ಅರಣ್ಯ ಇಲಾಖೆ ಅತಿಕ್ರಮಣ ಜಮೀನಿನಲ್ಲಿದ್ದ ಅಡಿಕೆ ಮರಗಳನ್ನು ಕಡಿದಿರುವ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಅವರು ಮಾತನಾಡಿದರು.

‘ಕಳೆದ 30– 35 ವರ್ಷಗಳಿಗೂ ಮೊದಲಿಂದ ಬೆಳೆದ ಅಡಿಕೆ ಮರಗಳನ್ನು ಕಡಿಯುವ ಮೂಲಕ ಅರಣ್ಯ ಇಲಾಖೆ ದಬ್ಬಾಳಿಕೆ ನಡೆಸಿದೆ. ಹೊರ ತಾಲ್ಲೂಕು, ಜಿಲ್ಲೆಗಳಲ್ಲಿ ಇಲ್ಲದ ಕಾನೂನು ಈ ತಾಲ್ಲೂಕಿನಲ್ಲಿ ಮಾತ್ರ ಯಾಕೆ? ಈ ಕೃತ್ಯ ಮಾಡಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಶಾಸಕ ಭೀಮಣ್ಣ ನಾಯ್ಕ ಈ ಸ್ಥಳಕ್ಕೆ ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕಿಸಬೇಕು. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ಕೊಡಬೇಕು. ಅರಣ್ಯ ಮಂತ್ರಿಗಳ ಬಳಿ ಇಂಥ ಕೃತ್ಯವನ್ನು ನಿಲ್ಲಿಸುವಂತೆ ಹೇಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ.ಮಾತನಾಡಿ, ‘ಇದು ದ್ವೇಷ ರಾಜಕಾರಣದ ಕೃತ್ಯ. ಅಧಿಕಾರಿಗಳ ದರ್ಪ, ದಬ್ಬಾಳಿಕೆ ಹೆಚ್ಚಾಗುತ್ತಿದೆ. ರೈತರೆಲ್ಲ ಒಗ್ಗಟ್ಟಾಗಿ ಪ್ರತಿಭಟಿಸಬೇಕಿದೆ. ಶಾಸಕರು ಕೂಡಲೇ ಕೆಡಿಪಿ ಸಭೆ ಕರೆದು ಅಧಿಕಾರಿಗಳನ್ನು ನಿರ್ಬಂಧಿಸಬೇಕು. ಜನರು ತಿರುಗಿ ಬೀಳುವ ಮುನ್ನ ಇಂಥ ಕೃತ್ಯಗಳನ್ನು ತಡೆಯಬೇಕು. ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟಕ್ಕೆ ಮುಂದಾಗಲಿದ್ದು ಅಸಹಾಯಕ ರೈತರಿಗೆ ಬೆಂಬಲಿಸುತ್ತೇವೆ’ ಎಂದರು.

ಕೆ.ಡಿ.ಸಿ.ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಮಾತನಾಡಿ, ‘ಸರ್ಕಾರದ ಸಮರ್ಪಕ ಆದೇಶವನ್ನು ಸಾರ್ವಜನಿಕವಾಗಿ ಒದಗಿಸಬೇಕು. ಅದರ ತಪ್ಪು ಕ್ರಮ ಆಗುತ್ತಿದೆ. ಖುಲ್ಲಾಗೊಳಿಸುವ ಶಬ್ದದ ಅರ್ಥ ದುರ್ಬಳಕೆಯಾಗುತ್ತಿದೆ’ ಎಂದರು.

ವಕೀಲ ಜಯರಾಮ ಹೆಗಡೆ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ ಮಾತನಾಡಿದರು. ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆರಿಯಪ್ಪ ನಾಯ್ಕ, ಅಣ್ಣಪ್ಪ ನಾಯ್ಕ ಕಡಕೇರಿ, ವಕೀಲರಾದ ಹೇಮಂತ ಹೆಗಡೆ, ಕೃಷ್ಣಮೂರ್ತಿ ಐಸೂರು, ನಾಗರಾಜ ಹೆಗಡೆ ಗೋಳೀಕೈ, ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.