
ಕಾರವಾರ: ಅರಣ್ಯ ಪ್ರದೇಶ ಹೆಚ್ಚಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಬಂತೆಂದರೆ ಕಾಳ್ಗಿಚ್ಚಿನ ಸಮಸ್ಯೆ ಅರಣ್ಯ ಇಲಾಖೆಯ ಜೊತೆಗೆ ಸಾರ್ವಜನಿಕರಿಗೂ ಆತಂಕ ಉಂಟುಮಾಡುತ್ತಿದೆ. ಸಮಸ್ಯೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದರೂ ಕೊರತೆಗಳ ದೂರು ಹೆಚ್ಚುತ್ತಿದೆ.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಕೃಷಿ ಭೂಮಿ ಹೆಚ್ಚಿರುವ ಪ್ರದೇಶಗಳಲ್ಲಿ ಬೆಂಕಿ ರೇಖೆ ನಿರ್ಮಿಸುವ, ಜಲಮೂಲಗಳಲ್ಲಿ ನೀರು ಸಂಗ್ರಹ ಇರುವಂತೆ ಎಚ್ಚರವಹಿಸುವಲ್ಲಿ ಅರಣ್ಯ ಇಲಾಖೆ ಎಡವಿದೆ. ಕಾಳ್ಗಿಚ್ಚು ಹಬ್ಬಿದಾಗ ಕೃಷಿ ಭೂಮಿಗೂ ಹಾನಿಯಾಗುತ್ತಿದೆ. ಇದಕ್ಕೆ ಪರಿಹಾರವೂ ಸಿಗುತ್ತಿಲ್ಲ ಎಂಬುದು ರೈತರ ಆರೋಪ.
ಪ್ರತಿ ವರ್ಷ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಳ್ಳುವ ನೂರಾರು ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ. ಸುಧಾರಿತ ತಂತ್ರಜ್ಞಾನದಿಂದ ಅರಣ್ಯ ಇಲಾಖೆ ಬೆಂಕಿ ಹರಡದಂತೆ ನಿಗಾ ಇರಿಸುವ ಕೆಲಸ ಮಾಡುತ್ತಿದ್ದರೂ, ಆಗೊಮ್ಮೆ ಈಗೊಮ್ಮೆ ಸಮಸ್ಯೆ ಗಂಭೀರ ರೂಪ ತಳೆಯುತ್ತದೆ. ಅಂತಹ ಸಂದರ್ಭದಲ್ಲಿ ವನ್ಯಜೀವಿಗಳ ಜೊತೆಗೆ, ಕೃಷಿ ಕ್ಷೇತ್ರಕ್ಕೂ ಹಾನಿ ಹೆಚ್ಚುತ್ತಿದೆ ಎಂಬುದು ಜನರ ದೂರು.
‘ಕಾರವಾರ ತಾಲ್ಲೂಕಿನಲ್ಲಿ 250 ಕಿ.ಮೀಗಿಂತ ಉದ್ದದ ಬೆಂಕಿ ರೇಖೆ ನಿರ್ಮಿಸುವ ಕೆಲಸ ನಡೆದಿದೆ. ಹೆದ್ದಾರಿಯ ಅಂಚಿನಲ್ಲೇ ಬೆಂಕಿ ಹೊತ್ತಿಕೊಳ್ಳುವ ಸಮಸ್ಯೆ ಹೆಚ್ಚು. ಹೀಗಾಗಿ, ಅಂತಹ ಸ್ಥಳದಲ್ಲಿ ರೇಖೆ ನಿರ್ಮಿಸಲು ಆದ್ಯತೆ ನೀಡಲಾಗಿದೆ. ಕಾಡಿನ ಮಧ್ಯೆ ಜಲಮೂಲಗಳ ಸಂಖ್ಯೆ ಕಡಿಮೆ. ಅವುಗಳಲ್ಲಿ ಬೇಸಿಗೆಯಲ್ಲಿ ನೀರು ನಿಲ್ಲುವುದೂ ಕಡಿಮೆ. ಆದರೂ, ಕೆಲವು ಕಡೆಗಳಲ್ಲಿ ನೀರಿನ ಸಂಗ್ರಹಕ್ಕೆ ವ್ಯವಸ್ಥೆ ಮಾಡಲು ಯೋಜನೆ ರೂಪಿಸಿದ್ದೇವೆ’ ಎನ್ನುತ್ತಾರೆ ಎಸಿಎಫ್ ಕೆ.ಡಿ.ನಾಯ್ಕ.
ಕುಮಟಾ ಅರಣ್ಯ ವಲಯ ವ್ಯಾಪ್ತಿಯ ತಾಲ್ಲೂಕಿನ ಬಂಗಣೆ, ಮೊರಸೆ, ಮೇದಿನಿ, ಕಡ್ನಿರು ಸೇರಿ ಹಲವೆಡೆ ಕಾಡಿನಲ್ಲಿ ಕೆರೆಗಳ ಹೂಳೆತ್ತಲಾಗಿದೆ. ಸುಮಾರು 12 ಕಿ.ಮೀ ವ್ಯಾಪ್ತಿಯಷ್ಟು ಬೆಂಕಿ ರೇಖೆ ನಿರ್ಮಾಣ ಮಾಡಲಾಗಿದೆ ಎಂದು ಕುಮಟಾ ಆರ್‌ಎಫ್‌ಒ ಪ್ರವೀಣ ನಾಯಕ ಹೇಳಿದರು.
ಯಲ್ಲಾಪುರ ತಾಲ್ಲೂಕಿನ ಅರಣ್ಯದಲ್ಲಿ ಬೆಂಕಿ ಬೀಳದಂತೆ ಪ್ರತಿದಿನ ಡ್ರೋಣ್ ಮೂಲಕ ಪರಿಶೀಲಿಸಲಾಗುತ್ತಿದ್ದು, ಹೊಗೆ ಕಂಡುಬಂದಲ್ಲಿ ತಕ್ಷಣ ಸಿಬ್ಬಂದಿ ಅಂತಹ ಪ್ರದೇಶಕ್ಕೆ ಹೋಗಿ ಬೆಂಕಿ ಹರಡದಂತೆ ಎಚ್ಚರವಹಿಸುತ್ತಿದ್ದಾರೆ. ಬ್ಲೋವರ್ ಮೂಲಕ ಬೆಂಕಿ ಬಿದ್ದರೂ ಹರಡದಂತೆ ಲೈನ್ ಎಳೆಯಲಾಗಿದೆ.
ಮುಂಡಗೋಡ ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಅರಣ್ಯದಲ್ಲಿ ಬೆಂಕಿ ಅವಘಡಗಳ ಪ್ರಕರಣದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಆದರೂ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಕಾರ್ಯಾಗಾರ, ಅಗ್ನಿಶಾಮಕ ಸಿಬ್ಬಂದಿಯಿಂದ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಅಪ್ಪಾರಾವ್ ಕಾಳಶೆಟ್ಟಿ ಹೇಳಿದರು.
‘ಅರಣ್ಯ ಪ್ರದೇಶದಲ್ಲಿರುವ ಕೆರೆಗಳ ನೀರಿನ ಮಟ್ಟ ಕಡಿಮೆಯಾಗುತ್ತಿದ್ದಂತೆ, ಕೃತಕ ನೀರಿನ ತೊಟ್ಟಿಗಳಿಗೆ ನೀರು ತುಂಬಿಸಲು ಪೂರ್ವಸಿದ್ಧತೆ ಮಾಡಲಾಗಿದೆ’ ಎಂದು ಕಾತೂರ ಆರ್‌ಎಫ್‌ಒ ವಿರೇಶ ಹೇಳಿದರು.
ಜೊಯಿಡಾ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಏಳು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಬೇಸಿಗೆ ಅವಧಿಯಲ್ಲಿ ಬೆಂಕಿ ಅವಘಡ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಪ್ರತಿವರ್ಷ ಗುರುತಿಸಿರುವ ಅರಣ್ಯದಂಚಿನ ಪ್ರದೇಶದಲ್ಲಿ ಬೆಂಕಿ ರೇಖೆಗಳನ್ನು ಹಾಕಲಾಗಿದ್ದು. ದಟ್ಟ ಅರಣ್ಯದ ನಡುವೆ ಇರುವ ಹಳೆಯ ಕೆರೆಗಳ ಹೂಳೆತ್ತುವ ಕಾರ್ಯ ಅರಣ್ಯ ಇಲಾಖೆ ಕೈಗೊಂಡಿದ್ದು ಕುಂಬಾರವಾಡಾ, ಅಣಶಿ, ಗುಂದ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಈಗಾಗಲೇ ಹೊಸ ಕೆರೆಗಳ ನಿರ್ಮಾಣ ಕಾಮಗಾರಿ ಮುಗಿದಿದೆ. ಬಹುತೇಕ ಕಡೆಗಳಲ್ಲಿ ಬೆಂಕಿ ರೇಖೆ ಅಥವಾ ಕೆರೆ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ.
‘ಕಳೆದ ವರ್ಷ ಹಾಗೂ ಹಿಂದಿನ ಅವಧಿಯಲ್ಲಿ ನಿರ್ಮಿಸಲಾದ ಕೆರೆಗಳಲ್ಲಿ ನೀರಿನ ಸಂಗ್ರಹವಿದೆ,ಈ ಬಾರಿ ನಿರ್ಮಿಸಿರುವ ಕೆರೆಗಳಿಗೆ ಮಳೆಗಾಲದಲ್ಲಿ ನೀರು ಬಂದು ನಿಲ್ಲುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ಬೇಸಿಗೆಯಲ್ಲಿ ಅದು ಉಪಯೋಗಕ್ಕೆ ಬರುತ್ತದೆ’ ಎನ್ನುತ್ತಾರೆ ಕುಂಬಾರವಾಡಾ ಉಪ ವಿಭಾಗದ ಎಸಿಎಫ್ ಗಿರೀಶ ಸಂಕರಿ.
ಭಟ್ಕಳ ತಾಲ್ಲೂಕಿನಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಾಗ ಅದನ್ನು ಹತ್ತಿಕ್ಕುವ ಬಗೆಯ ಬಗ್ಗೆಯೂ ಗ್ರಾಮ ಅರಣ್ಯ ಸಮಿತಿಯವರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಬೆಂಕಿ ನಂದಿಸುವ ಬಗ್ಗೆ ಅಗ್ನಿಶಾಮಕ ದಳದೊಂದಿಗೆ ಪ್ರಾತ್ಯಕ್ಷತೆ ತೋರಿಸಿ ಸಾರ್ವಜನಿಕರಿಗೆ ವಿಚಲಿತರಾಗದಂತೆ ಅರಿವೂ ಮೂಡಿಸಲಾಗುತ್ತದೆ ಎಂದು ಭಟ್ಕಳ ಆರ್‌ಎಫ್‌ಒ ವಿಶ್ವನಾಥ ಮಾಹಿತಿ ನೀಡಿದ್ದಾರೆ.
ಹೊನ್ನಾವರ ತಾಲ್ಲೂಕಿನ ಸಾಲ್ಕೋಡ ಸೇರಿದಂತೆ ಕೆಲವೆಡೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಹೆಚ್ಚಿನ ಹಾನಿಯಾಗಿಲ್ಲ. ಹೆರಾವಲಿ ಮತ್ತಿತರ ಕೆಲವೆಡೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಬ್ಬುವುದನ್ನು ತಡೆಯಲು ಬೆಂಕಿ ರೇಖೆ ನಿರ್ಮಾಣ ಕಾರ್ಯ ನಡೆದಿದೆ. ಅರಣ್ಯ ಭೂಮಿ ವ್ಯಾಪ್ತಿಯ ಕೆಲವು ಕೆರೆಗಳು ಅತಿಕ್ರಮಣಗೊಂಡಿವೆ. ಗೇರುಸೊಪ್ಪ ಅರಣ್ಯ ವಲಯದಲ್ಲಿ 5 ಹಾಗೂ ಹೊನ್ನಾವರ ವಲಯದಲ್ಲಿ 2 ಕೆರೆಗಳ ಹೂಳೆತ್ತುವ ಕಾಮಗಾರಿ ನಡೆಸಲಾಗಿದ್ದು ಅರಣ್ಯಕ್ಕೆ ಬೆಂಕಿ ಬಿದ್ದರೆ ಇವು ಅನುಕೂಲವಾಗಲಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ವಾಟ್ಸಾಪ್ ಗ್ರುಪ್ ರಚನೆ
ಶಿರಸಿ ತಾಲ್ಲೂಕಿನ ಹಲವೆಡೆ ಅರಣ್ಯದ ಗಡಿ ಭಾಗಗಳಲ್ಲಿ ಬೆಂಕಿ ರೇಖೆ ರಚಿಸುವ ಕೆಲಸ ಇನ್ನೂ ಸರಿಯಾಗಿ ನಡೆದಿಲ್ಲ ಎಂಬುದು ಗ್ರಾಮಸ್ಥರ ಆಕ್ಷೇಪವಾಗಿದೆ. ಪ್ರಮುಖ ರಸ್ತೆಗಳ ಅಂಚುಗಳಲ್ಲಿ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ಉಳಿದೆಡೆ ಯಾವುದೇ ಕಾರ್ಯ ನಡೆದಿಲ್ಲ. ಒಂದಿಷ್ಟು ದಿನಗೂಲಿ ಕಾರ್ಮಿಕರನ್ನು ಬಳಸಿಕೊಂಡು ಕಾಟಾಚಾರಕ್ಕೆ ಎಂಬಂತೆ ತರಗಲೆಗಳನ್ನು ಸುಡಲಾಗುತ್ತಿದೆ ಎಂಬುದು ಜನರ ಆರೋಪ.
‘ಈಚೆಗಷ್ಟೆ ಹುತ್ಗಾರ ಬಳಿ ಬೆಂಕಿರೇಖೆ ನಿರ್ಮಿಸಿದ ನಂತರವೂ ಆ ಪ್ರದೇಶದ ಸುತ್ತಮುತ್ತ ಬೆಂಕಿ ಅವಘಡ ನಡೆದು ಮರಗಳಿಗೆ ಸಾಕಷ್ಟು ಹಾನಿಯಾಗಿದೆ’ ಎನ್ನುತ್ತಾರೆ ಸ್ಥಳೀ ಶ್ರೀಲಕ್ಷ್ಮೀ ಪಂಡಿತ. ‘ಹೆಚ್ಚಿನ ನಿಗಾ ಹಾಗೂ ಕ್ಷಿಪ್ರ ಮಾಹಿತಿ ವಿನಿಮಯಕ್ಕೆ ವಾಟ್ಸಾಪ್ ಗ್ರೂಪ್‌ಗಳನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂಬುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಕಬ್ಬಿನ ಗದ್ದೆಯಿಂದ ಬೆಂಕಿ!
ಹಳಿಯಾಳ ತಾಲ್ಲೂಕಿನಲ್ಲಿ ಅರಣ್ಯ ಅಂಚಿನ ಚೆಕ್‍ಪೋಸ್ಟ್‌ಗಳಲ್ಲಿ ಬೆಂಕಿ ನಂದಿಸುವ ಬ್ಲೋವರ್ ಯಂತ್ರಗಳನ್ನು ಇರಿಸಲಾಗಿದೆ. ಕಾವಲವಾಡ ಬೆಳವಟಗಿ ಸೇರಿ ಹಲವೆಡೆ ಕಾಡಿನಲ್ಲಿನ ಕೆರೆಗಳನ್ನು ಹೂಳೆತ್ತಲಾಗಿದ್ದು ನೀರು ಸಂಗ್ರಹ ಇರುವಂತೆ ಎಚ್ಚರವಹಿಸಲಾಗುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.
‘ಕಾಡಂಚಿನ ಭಾಗದಲ್ಲಿ ಕಬ್ಬಿನ ಗದ್ದೆಗಳು ಹೆಚ್ಚಿವೆ. ಕಬ್ಬು ಕಟಾವು ಮುಗಿದ ಬಳಿಕ ರೈತರು ಗದ್ದೆ ಹದಗೊಳಿಸಲು ಬೆಂಕಿ ಹಾಕುತ್ತಾರೆ. ಅವು ಕಾಡಿಗೆ ವ್ಯಾಪಿಸುವ ಸಾಧ್ಯತೆ ಹೆಚ್ಚಿದೆ. ಅಂತಹ ಹತ್ತಾರು ಘಟನೆ ಈ ಹಿಂದೆ ನಡೆದಿದೆ’ ಎನ್ನುತ್ತಾರೆ ಬೆಳವಟಗಿ ಗ್ರಾಮಸ್ಥರೊಬ್ಬರು.
‘ಬೆಂಕಿ ಹರಡಿಕೊಳ್ಳದಂತೆ ನಿಗಾ ಇರಿಸಲು ಅರಣ್ಯದಲ್ಲಿ ಅಲ್ಲಲ್ಲಿ ವೀಕ್ಷಣಾ ಗೋಪುರ ಅಳವಡಿಸಲಾಗಿದೆ. ಬೈನಾಕ್ಯುಲರ್ ಇಟ್ಟುಕೊಂಡು ಸಿಬ್ಬಂದಿ ನಿಗಾ ಇರಿಸುತ್ತಿದ್ದಾರೆ’ ಎಂದು ಆರ್‌ಎಫ್‌ಒ ಬಸವರಾಜ ಎಂ. ಮಾಹಿತಿ ನೀಡಿದರು.
ದೇಹಳ್ಳಿ ಹಾಗೂ ಸಾತೊಡ್ಡಿ ಜಲಪಾತದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಬ್ಬಂದಿ ಕ್ಯಾಂಪ್ ಹೂಡಿದ್ದಾರೆಹರ್ಷಬಾನು, ಯಲ್ಲಾಪುರ ಡಿಸಿಎಫ್
ಬೇಸಿಗೆಯಲ್ಲಿ ದೊಡ್ಡ ಗೇರು ತೋಟಗಳಿಗೆ ಕಾಳ್ಗಿಚ್ಚು ಅವಘಡ ಸಂಭವಿಸುವುದು ಹೆಚ್ಚಾಗಿದೆ. ಅರಣ್ಯದಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಗಳಾಗಿಲ್ಲ. ಇದರಿಂದ ಕೆಲವೊಮ್ಮೆ ಕಾಳ್ಗಿಚ್ಚು ಅವಘಡ ಸಂಭವಿಸಿದ ಸಂದರ್ಭದಲ್ಲಿ ಅರಣ್ಯ ನಾಶವಾಗುವುದಲ್ಲದೇ ಅಂಚಿನಲ್ಲಿರುವ ಸಣ್ಣ ರೈತರ ಕೃಷಿ ಚಟುವಟಿಕೆಗಳಿಗೂ ಪೆಟ್ಟು ಬೀಳುತ್ತಿದೆಸುರೇಶ್ ಮೊರಳ್ಳಿ, ರೈತ
ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ಮೋಹನ ನಾಯ್ಕ, ಜ್ಞಾನೇಶ್ವರ ದೇಸಾಯಿ, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.