ಶಿರಸಿ: ‘ಡಿಆರ್‌ಎಫ್‌ಒ, ಆರ್‌ಎಫ್‌ಒ, ಎಸಿಎಫ್ ಹುದ್ದೆಗಳ ನೇರ ನೇಮಕಾತಿಗೆ ಕನಿಷ್ಠ ವಿದ್ಯಾರ್ಹತೆ
ಯಾಗಿ ಬಿ.ಎಸ್ಸಿ ಅರಣ್ಯ ವಿಜ್ಞಾನ ಪದವಿ ಪರಿಗಣಿಸಲು ಒತ್ತಾಯಿಸಿ ಅರಣ್ಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಶುಕ್ರವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಕರ್ನಾಟಕ ಅರಣ್ಯ ವಿದ್ಯಾರ್ಥಿಗಳು ಮತ್ತು ಪದವೀಧರರ ಸಂಘದ ನೇತೃತ್ವದಲ್ಲಿ ಧರಣಿ ನಡೆಸಿದ ವಿದ್ಯಾರ್ಥಿಗಳು, ‘ಅರಣ್ಯ ವಿಜ್ಞಾನ ಪದವೀಧರರ ಸಾಮರ್ಥ್ಯ ಮತ್ತು ಅಗತ್ಯ ಅರಿತ ಕರ್ನಾಟಕ ಸರ್ಕಾರ 2003ರಲ್ಲಿ ಎಸಿಎಫ್ ಮತ್ತು ಆರ್‌ಎಫ್‌ಒ ಹುದ್ದೆಗೆ ಶೇಕಡ 50ರಷ್ಟು ಮೀಸಲಾತಿ ಒದಗಿಸಿತ್ತು. ಪ್ರತಿಭಟನೆ ನಂತರ 2012ರಲ್ಲಿ ಆರ್‌ಎಫ್‌ಒ ಹುದ್ದೆಗೆ ಶೇಕಡ 75ಕ್ಕೆ ಹೆಚ್ಚಿಸಿತ್ತು’ ಎಂದರು.
‘2018ರಲ್ಲಿ ಮತ್ತೆ ನೇರ ನೇಮಕಾತಿಗೆ ಮೊದಲಿದ್ದ ಶೇ 50ಕ್ಕೆ
ಕಡಿಮೆಗೊಳಿಸಿತ್ತು. ಬೇಡಿಕೆ ಪರಿಶೀಲಿಸಲು ವಿಶೇಷ ಸಮಿತಿ ರಚಿಸುವ ಆಶ್ವಾಸನೆಯೂ ಈವರೆಗೆ ಈಡೇರಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕೇರಳ, ಒಡಿಶಾ, ಜಾರ್ಖಂಡ್‍ನಲ್ಲಿ ಮೀಸಲಾತಿ ಒದಗಿಸಿವೆ. ಅಂತೆಯೇ ರಾಜ್ಯದಲ್ಲೂ ಬಿ.ಎಸ್ಸಿ ಪದವಿಯನ್ನು (ಅರಣ್ಯ ಶಾಸ್ತ್ರ) ಕನಿಷ್ಠ ವಿದ್ಯಾರ್ಹತೆ ಯಾಗಿಸಿ ಅಧಿಸೂಚನೆ ಹೊರಡಿಸಬೇಕು’ ಎಂದು ಸಂಘಟನೆ ಅಧ್ಯಕ್ಷ ಅಕ್ಷಯಕುಮಾರ, ಕಾರ್ಯದರ್ಶಿ ವಿಕಾಸ ಎ.ಜಿ. ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.