ADVERTISEMENT

ಕಾಡಾನೆ ಓಡಿಸುವವರು ಅಗಳದಲ್ಲಿ ಅಡಗಿ ಜೀವ ಉಳಿಸಿಕೊಂಡರು!

ಗಾಯಗೊಂಡ ಮುಂಡಗೋಡದ ಅರಣ್ಯಾಧಿಕಾರಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 14:36 IST
Last Updated 6 ಡಿಸೆಂಬರ್ 2019, 14:36 IST
ಕಾಡಾನೆ ಓಡಿಸುವಾಗ ಕಾಲಿಗೆ ಗಾಯವಾಗಿರುವ ಉಪವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರಿ ಶಿರಸಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಕಾಡಾನೆ ಓಡಿಸುವಾಗ ಕಾಲಿಗೆ ಗಾಯವಾಗಿರುವ ಉಪವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರಿ ಶಿರಸಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ   

ಮುಂಡಗೋಡ (ಉತ್ತರ ಕನ್ನಡ): ಗದ್ದೆಗಳಿಗೆ ನುಗ್ಗಿದ್ದ ಕಾಡಾನೆ ಓಡಿಸಲು ಹೋದವರೇ ಜೀವ ರಕ್ಷಣೆಗಾಗಿ ‘ಆನೆ ಅಗಳ’ದಲ್ಲಿ (ಆನೆಗಳು ದಾಟಿ ಬಾರದಂತೆ ನಿರ್ಮಿಸಲಾದ ಕಂದಕ) ಮಲಗಿ ಬದುಕಿ ಬಂದಿದ್ದಾರೆ. ಗಂಡಾನೆಯ ದಾಳಿಯಿಂದ ತಪ್ಪಿಸಿಕೊಂಡಉಪವಲಯ ಅರಣ್ಯಾಧಿಕಾರಿ, ಕಾಲಿಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಲ್ಲಿನ ಉಪವಲಯ ಅರಣ್ಯಾಧಿಕಾರಿಗಳಾದ ಬಸವರಾಜ ಪೂಜಾರಿ ಹಾಗೂ ಫಕ್ಕೀರೇಶ ಸುಣಗಾರ ಕಾಡಾನೆಯಿಂದ ತಪ್ಪಿಸಿಕೊಂಡವರು. ಆದರೆ, ಈ ಪ್ರಯತ್ನದಲ್ಲಿ ಇಬ್ಬರೂ ಗಾಯಗೊಂಡಿದ್ದಾರೆ.

‘ಡಿ.4ರಂದು ರಾತ್ರಿ ಚವಡಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳು ಕಾಣಿಸಿಕೊಂಡಿದ್ದವು. ಅವುಗಳನ್ನು ಕಾಡಿಗೆ ಓಡಿಸಲು ಅರಣ್ಯ ಸಿಬ್ಬಂದಿ ಮೂರು ತಂಡಗಳಲ್ಲಿಪ್ರತ್ಯೇಕ ಕಾರ್ಯಾಚರಣೆಗೆ ಮುಂದಾಗಿದ್ದರು. ಆಗ 10ಕ್ಕಿಂತ ಹೆಚ್ಚು ಇದ್ದ ಕಾಡಾನೆಗಳು ಚದುರಿ, ಪ್ರತ್ಯೇಕ ತಂಡಗಳಾಗಿ ಸಂಚರಿಸಿದವು’ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

‘ಅರಣ್ಯಾಧಿಕಾರಿ ಬಸವರಾಜ ಪೂಜಾರಿ ನೇತೃತ್ವದ ತಂಡವು, ಆನೆಗಳಒಂದು ಗುಂಪನ್ನು ಕಾಡಿಗೆ ಕಳಿಸುವಲ್ಲಿ ಯಶಸ್ವಿಯಾಯಿತು. ಮತ್ತೊಂದು ಭಾಗದಲ್ಲಿ ಕಾರ್ಯಾಚರಣೆಗೆ ಇಳಿದಿದ್ದ, ಎರಡನೇ ತಂಡವನ್ನು ಸೇರಿಕೊಳ್ಳಲು ಮೂವರು ಅರಣ್ಯಾಧಿಕಾರಿಗಳು ಕಾಡಿನಂಚಿನ ರಸ್ತೆಯಲ್ಲಿ ಸಾಗುತ್ತಿದ್ದರು. ಆಗಗಂಡಾನೆ ಓಡಿಸಿಕೊಂಡು ಬಂತು’ ಎಂದುಮಾಹಿತಿ ನೀಡಿದರು.

‘ರಾತ್ರಿ 12 ಗಂಟೆಯ ಸುಮಾರಿಗೆ ಎದುರಿಗೆ ಒಂದು ಗಂಡಾನೆ ಬಂಡೆಯಂತೆ ನಿಂತುಬಿಟ್ಟಿತ್ತು. ಜೀವ ಉಳಿಸಿಕೊಳ್ಳಲು ಮೂವರೂ ಓಡಿದೆವು. ಆದರೆ, ಗಂಡಾನೆ ರೊಚ್ಚಿಗೆದ್ದು ಬೆನ್ನತ್ತಿತು. ಕೊನೆಗೆ ನಾವಿಬ್ಬರು ಆನೆ ಅಗಳದಲ್ಲಿ ಜಾರಿ ಮಲಗಿದೆವು. ಮತ್ತೊಬ್ಬ ಸಿಬ್ಬಂದಿಯನ್ನು ಗಂಡಾನೆ ಓಡಿಸಿಕೊಂಡು ಹೋಯಿತು. ಅವರೂತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು’ ಎಂದು ನೆನಪಿಸಿಕೊಂಡರು.

‘ಸ್ವಲ್ಪ ಸಮಯದ ನಂತರ ಅದೇ ದಾರಿಯಲ್ಲಿ ಗಂಡಾನೆ ಮರಳಿ ಬಂದು ನಿಂತಿತ್ತು. ಎದ್ದು ಓಡಲೂ ಆಗದಂತಹ ಪರಿಸ್ಥಿತಿಯಲ್ಲಿ ನಾವಿದ್ದೆವು.ಸಣ್ಣ ಶಬ್ದ ಮಾಡಿದರೂ ಆನೆ ತುಳಿದೀತು ಎಂಬ ಭಯದಲ್ಲಿ ಉಸಿರು ಬಿಗಿಹಿಡಿದಿದ್ದೆವು. ನಂತರ ತಂಡದ ಇನ್ನಿತರ ಸಿಬ್ಬಂದಿಬೇರೆಬೇರೆ ಸಾಧನಗಳಿಂದಸದ್ದು ಮಾಡುತ್ತ, ಗಂಡಾನೆ, ಮರಿ ಆನೆಹಾಗೂಹೆಣ್ಣಾನೆಯನ್ನು ಕಾಡಿಗೆ ಅಟ್ಟಿದರು’ ಎಂದು ಗಾಯಗೊಂಡಿರುವ ಉಪವಲಯ ಅರಣ್ಯಾಧಿಕಾರಿ ಬಸವರಾಜ ಪೂಜಾರಿ ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.