ADVERTISEMENT

ಕಾರವಾರ | ಅರಣ್ಯವಾಸಿಗಳಿಂದ ಮೇಲ್ಮನವಿ; ರಾಜ್ಯವ್ಯಾಪಿ ಆಂದೋಲನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:34 IST
Last Updated 19 ಸೆಪ್ಟೆಂಬರ್ 2025, 6:34 IST
   

ಕಾರವಾರ: ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲಿಸದೆ ತಿರಸ್ಕರಿಸಿದ ಪ್ರಕ್ರಿಯೆ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಭಿಯಾನವನ್ನು ಅ.4 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಮುನ್ನ ಮುಖ್ಯ ಕಾರ್ಯದರ್ಶಿ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಬಂಧಿಸಿದ ಸಚಿವರ ಗಮನಕ್ಕೆ ತಂದಿಲ್ಲ ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ಅರಣ್ಯವಾಸಿಗಳು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮಟ್ಟದ ಅರಣ್ಯ ಹಕ್ಕು ಉಸ್ತುವಾರಿ ಸಮಿತಿಗೆ ಕಾನೂನಾತ್ಮಕ ಆಕ್ಷೇಪಣಾ ಪತ್ರದ ಮೇಲ್ಮನವಿಯನ್ನು ಸಲ್ಲಿಸುವ ಅಭಿಯಾನಕ್ಕೆ ಅಂದು ಶಿರಸಿಯ ವೇದಿಕೆ ಕಚೇರಿಯಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು‌.

ADVERTISEMENT

ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಆರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲಿಸಬೇಕೆಂಬ ನಿಯಮ ಅನುಸರಿಸಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಮತ್ತು ಕೇಂದ್ರ ಸರ್ಕಾರದ ಮಾರ್ಗದರ್ಶನ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ರಾಜ್ಯದಲ್ಲಿ 2,53,269 ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲಿಸದೇ ತಿರಸ್ಕರಿಸಿದೆ ಎಂದು ಉಲ್ಲೇಖಿಸಿದ್ದಾರೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ 73,206 ಅರ್ಜಿ ತಿರಸ್ಕರಿಸಿದ ಅಂಶ ಪ್ರಸ್ತಾಪಿಸಲಾಗಿದೆ. ಪುನರ್ ಪರಿಶೀಲಿಸದೆ, ಕಾನೂನು ಬಾಹಿರವಾಗಿ ಅರ್ಜಿ ತಿರಸ್ಕರಿಸಿರುವ ಹಿನ್ನಲೆಯಲ್ಲಿ ಆದೇಶಕ್ಕೆ ರಾಜ್ಯಾದ್ಯಂತ ಅರಣ್ಯವಾಸಿಗಳಿಂದ ರಾಜ್ಯ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.

ಆಕ್ಷೇಪಣಾ ಪತ್ರದಲ್ಲಿ ರಾಜ್ಯದಲ್ಲಿ ಒಟ್ಟು ಅರ್ಜಿಗಳಲ್ಲಿ ಶೇ 87.77 ಅರಣ್ಯವಾಸಿಗಳ ಅರ್ಜಿಗಳು ತಿರಸ್ಕೃತವಾಗಿವೆ. ಕೇವಲ ಶೇ 3.2 ರಷ್ಟು ಅರ್ಜಿಗಳಿಗೆ ಸಾಗುವಳಿ ಹಕ್ಕು ಸಿಕ್ಕಿದೆ ಎಂದರು.

ಅರಣ್ಯ ಭೂಮಿ ಹಕ್ಕಿಗಾಗಿ ಅರಣ್ಯವಾಸಿಗಳು ಸುಪ್ರಿಂ ಕೋರ್ಟ್ ನಲ್ಲಿ ಪುನರ್ ಪರಿಶೀಲಿಸದೇ, ತಿರಸ್ಕರಿಸಿರುವ ಕುರಿತು ನ್ಯಾಯಾಂಗ ನಿಂದನೆ ಅರ್ಜಿ ಮೂಲಕ ಕಾನೂನಾತ್ಮಕ ಹೋರಾಟವನ್ನ ಮುಂದುವರೆಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.