ADVERTISEMENT

ಭಟ್ಕಳ | ವಂಚನೆ ಆರೋಪ: ಜನರಿಂದ ಹಣ ಪಡೆದು ಪರಾರಿಯಾಗಿದ್ದ ಮೂವರ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 23:30 IST
Last Updated 12 ನವೆಂಬರ್ 2025, 23:30 IST
ಬಾಲಾಜಿ ಯಾನೆ ಗಣೇಶನ್
ಬಾಲಾಜಿ ಯಾನೆ ಗಣೇಶನ್   

ಭಟ್ಕಳ: ಗೃಹೋಪಯೋಗಿ ವಸ್ತುಗಳನ್ನು ಅರ್ಧ ಬೆಲೆಗೆ ನೀಡುತ್ತೇವೆ ಎಂದು ನಂಬಿಸಿ ಜನರಿಂದ ಹಣ ಪಡೆದು ಪರಾರಿಯಾಗಿದ್ದ ಆರೋಪಿಗಳ ಜಾಡು ಹಿಡಿದ ಭಟ್ಕಳ ಪೊಲೀಸರು ಮೂವರು ಆರೋಪಿಗಳನ್ನು ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಬಾಲಾಜಿ ಯಾನೆ ಗಣೇಶನ್, ತ್ಯಾಗರಾಜನ್, ಮಿಯಾನಾಥನ ಯಾನೆ ರಾಜೇಶ ಬಂಧಿತ ಆರೋಪಿಗಳು. ಮೂಲ ಆರೋಪಿ ಉದಯಕುಮಾರ್ ರೇಂಗರಾಜು ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಟ್ಟಣದ ರಥಬೀದಿಯ ಯೂನಿಯನ್ ಬ್ಯಾಂಕ್ ಎದುರಿನ ವಾಣಿಜ್ಯ ಮಳಿಗೆಯಲ್ಲಿ ಗ್ಲೋಬಲ್ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಗೃಹೋಪಯೋಗಿ ಮಳಿಗೆ ಆರಂಭಿಸಿದ್ದ ಆರೋಪಿಗಳು ಅರ್ಧ ಬೆಲೆಗೆ ಗೃಹೋಪಯೋಗಿ ಸಾಮಗ್ರಿ ನೀಡುವುದಾಗಿ ನಂಬಿಸಿ ಲಕ್ಷಾಂತರ ಮೊತ್ತ ಸಂಗ್ರಹಿಸಿ, ಬಳಿಕ ಪರಾರಿಯಾಗಿದ್ದರು. ನ. 5ರಂದು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

‘ವಂಚನೆ ನಡೆದಿದೆ ಎಂದು ತಿಳಿಯುತ್ತಿದ್ದಂತೆ ಹಣ ಹೂಡಿಕೆ ಮಾಡಿದ್ದ ಹಲವರು ಮಳಿಗೆಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಹೊತ್ತುಕೊಂಡು ಹೋಗಿದ್ದರು. ಹೊತ್ತುಕೊಂಡು ಹೋದ ವಸ್ತುಗಳನ್ನು ಮರಳಿಸುವಂತೆ ಸಿಪಿಐ ದಿವಾಕರ ಜನರಿಗೆ ಮನವಿ ಮಾಡಿದ್ದಾರೆ.

‘ಆರೋಪಿಗಳು ಸಂಗ್ರಹಿಸಿಟ್ಟಿದ್ದ ಅಂದಾಜು ₹6ರಿಂದ ₹7 ಲಕ್ಷ ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆದಿದ್ದೇವೆ. ಉಳಿದ ವಸ್ತುಗಳು ದೊರೆತ ಬಳಿಕ ಭಟ್ಕಳ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಹರಾಜು ಹಾಕಿ ಜನರಿಗೆ ಹಣ ಮರಳಿಸಲಾಗುವುದು’ ಎಂದು ಅವರು ಭರವಸೆ ನೀಡಿದ್ದಾರೆ.

ಮಿಯಾನಾಥನ್‌ ಯಾನೆ ರಾಜೇಶ
ತ್ಯಾಗರಾಜನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.