ADVERTISEMENT

ಶಿರಸಿ | ವ್ಯವಸ್ಥಾಪನಾ ಸಮಿತಿ ನೇಮಕಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 11:46 IST
Last Updated 12 ನವೆಂಬರ್ 2023, 11:46 IST
ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ   

ಶಿರಸಿ: ಮುಜರಾಯಿ ಇಲಾಖೆಗೆ ಸೇರದ ದೇವಸ್ಥಾನಗಳಿಗೂ ಸರ್ಕಾರ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಲು ಮುಂದಾಗಿರುವುದನ್ನು ಹಿಂದೂ‌ ಧಾರ್ಮಿಕ ದೇವಾಲಯಗಳ ಮಹಾ ಮಂಡಳದ ಗೌರವಾಧ್ಯಕ್ಷ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಖಂಡಿಸಿದ್ದಾರೆ.

ಈ ಕುರಿತು ಭಾನುವಾರ ಹೇಳಿಕೆ ನೀಡಿರುವ ಅವರು, ಈಗಾಗಲೇ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾರಿತ ಸಂಸ್ಥೆಗಳ ತಿದ್ದುಪಡಿ ಅಧಿನಿಯಮ 2011ರ ಕುರಿತು ಸುಪ್ರಿಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆಯ ಹಂತದಲ್ಲಿ ಇರಬೇಕಾದರೆ ಯಾವುದೋ ಒಂದು ಸೆಕ್ಷನ್‍ಗೆ ಮಾತ್ರ ವಿನಾಯಿತಿ ತೆಗೆದುಕೊಂಡು ಈ ರೀತಿಯ ಪ್ರಕ್ರಿಯೆಗೆ ಮುಂದಾಗುವುದು ನ್ಯಾಯವಲ್ಲ ಎಂದು ತಿಳಿಸಿದ್ದಾರೆ.

22 ವರ್ಷಗಳಿಂದ ಈ ಕಾನೂನಿನ ಬಗ್ಗೆ ನಮ್ಮ ಆಗ್ರಹವನ್ನು ಸಲ್ಲಿಸುತ್ತಲೇ ಇದ್ದೇವೆ. ಈಗಾಗಲೇ 2 ಬಾರಿ ಹೈಕೋರ್ಟ್ ಈ ಕಾನೂನನ್ನು ಅಸಾಂವಿಧಾನಿಕ ಎಂದು ತಿರಸ್ಕರಿಸಿದೆ. ಇಂಥ ಕಾನೂನಿನ ಬಗ್ಗೆಯೇ ಮತ್ತೆ ಜಾರಿಗೆ ಪ್ರಯತ್ನಿಸುವುದು ಸರಿಯಲ್ಲ. ಸರ್ವಸಮ್ಮತವಾದ ಹೊಸ ಕಾನೂನನ್ನು ಜಾರಿಗೆ ತರಲು ಅವಕಾಶವಿದೆ. ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದಿದ್ದಾರೆ. 

ADVERTISEMENT

ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಿಗೆ, ಅದರಲ್ಲೂ ವಿಶೇಷವಾಗಿ ಮೈಸೂರು ಮಹಾರಾಜರ ಆಳ್ವಿಕೆಯಲ್ಲಿದ್ದು ಬಳಿಕ ಕರ್ನಾಟಕ ರಾಜ್ಯ ಸರ್ಕಾರದ ಆಡಳಿತಕ್ಕೆ ಹಸ್ತಾಂತರವಾದ ದೇವಸ್ಥಾನಗಳಿಗೆ ಆಡಳಿತ ವ್ಯವಸ್ಥೆ ನೇಮಕ ಮಾಡಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಮೊದಲಿಂದಲೂ ಜನಗಳೇ ನಡೆಸಿಕೊಂಡು ಬಂದಿರುವ ದೇವಸ್ಥಾನಗಳಿಗೆ ಈ ರೀತಿ ವ್ಯವಸ್ಥಾಪನಾ ಸಮಿತಿ ನೇಮಕದ ಪ್ರಯತ್ನವನ್ನು ಮಾಡಬಾರದು ಎಂದರು.

ಒಂದೊಮ್ಮೆ ವ್ಯವಸ್ಥಾಪನಾ ಸಮಿತಿ ರಚನೆಯ ಅಗತ್ಯ ಸರ್ಕಾರಕ್ಕೆ ಕಂಡುಬಂದರೂ  ಅವುಗಳ ಖಾಸಗಿ ಮಾಲೀಕತ್ವವನ್ನು ಉಳಿಸಿಕೊಂಡೇ ವ್ಯವಸ್ಥಾಪನಾ ಸಮಿತಿ ರಚನೆ ಸಾಧ್ಯವಿದೆ. ಇಂಥ ದೇವಸ್ಥಾನಗಳಲ್ಲಿ ಹಾಲಿ ಇರುವ ಆಡಳಿತ ಮಂಡಳಿಗೇ ವ್ಯವಸ್ಥಾಪನಾ ಸಮಿತಿ ರಚಿಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಬಹುದು ಎಂದು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.