ಗೋಕರ್ಣ: ಏಳು ವರ್ಷದಿಂದ ಆಮೆಗತಿಯಲ್ಲಿ ಸಾಗಿದ್ದ, ಇಲ್ಲಿಯ ಗಂಗಾವಳಿ ನದಿಗೆ ಸೇತುವೆ ನಿರ್ಮಿಸುವ ಯೋಜನೆ ಮುಕ್ತಾಯಗೊಂಡಿದ್ದು, ಗಂಗಾವಳಿ–ಮಂಜಗುಣಿ ನಡುವೆ ವಾಹನ ಸಂಚಾರ ಆರಂಭಗೊಂಡಿದೆ.
2018ರಲ್ಲಿ ಸೇತುವೆ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿತ್ತು. ಕುಮಟಾ ತಾಲ್ಲೂಕಿನ ಗೋಕರ್ಣ ಮತ್ತು ಅಂಕೋಲಾ ತಾಲ್ಲೂಕನ್ನು ಸಂಪರ್ಕಿಸಲು ಸೇತುವೆ ನಿರ್ಮಿಸಬೇಕೆಂಬ ಬೇಡಿಕೆ ಇತ್ತು. ಆದರೆ, ಸರ್ಕಾರ ಬದಲಾದಂತೆ ಹಾಗೂ ಕೋವಿಡ್ ಕಾರಣದಿಂದ 18 ತಿಂಗಳವರೆಗೆ ಸೇತುವೆ ಕಾಮಗಾರಿ ಸ್ಥಗಿತವಾಗಿತ್ತು. ಏಳು ವರ್ಷಗಳ ಬಳಿಕ, ಕೆಲ ತಿಂಗಳ ಹಿಂದೆಯಷ್ಟೇ ಸೇತುವೆಯ ಸಂಪರ್ಕ ರಸ್ತೆ ನಿರ್ಮಿಸುವ ಕೆಲಸ ಆರಂಭಗೊಂಡಿತ್ತು.
315 ಮೀ. ಉದ್ದದ ಸೇತುವೆಯು 10 ಮೀ. ಅಗಲದ ರಸ್ತೆ ಹೊಂದಿದೆ. ಅಂದಾಜು ₹28.71 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಗಂಗಾವಳಿ ಗ್ರಾಮದ ಕಡೆಗೆ 148 ಮೀ. ಮತ್ತು ಮಂಜಗುಣಿಯ ಕಡೆಗೆ 149 ಮೀ. ಸಂಪರ್ಕ ರಸ್ತೆ ನಿರ್ಮಿಸಲಾಗಿದೆ. ಇದರಿಂದ ಗಂಗಾವಳಿ ಮತ್ತು ಅಂಕೋಲಾ ನಡುವೆ 10 ಕಿ.ಮೀ.ನಷ್ಟು ಅಂತರ ಕಡಿಮೆಯಾಗಲಿದೆ.
‘ಮಂಜಗುಣಿಯಿಂದ ಅಂಕೋಲಾವರೆಗಿನ ರಸ್ತೆ ಕಿರಿದಾಗಿದ್ದು, ಎರಡು ವಾಹನ ಸಂಚರಿಸಲು ಸ್ವಲ್ಪ ಅಡಚಣೆಯಾಗಲಿದೆ. ಈ ಸಮಸ್ಯೆಯನ್ನೂ ಪರಿಹರಿಸಿದರೆ ವಾಹನ ಸವಾರರಿಗೆ ಕಾರವಾರ, ಗೋವಾ ಸಮೀಪವಾಗಲಿದೆ’ ಎಂದೂ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಸಣ್ಣ ಪುಟ್ಟ ಕಾಮಗಾರಿ ಬಾಕಿ ಇದ್ದರೂ ಸೇತುವೆಯ ಮೇಲೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಂಜಗುಣಿ ಭಾಗದಲ್ಲಿ ರಸ್ತೆ ನಿರ್ಮಿಸಲು ಹೊಸದಾಗಿ ಅನುದಾನ ಬಿಡುಗಡೆಯಾಗಬೇಕಿದೆ. ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಕಿರಿಯ ಎಂಜಿನಿಯರ್ ಸುಧೀರ್ ಎಂ. ಪ್ರತಿಕ್ರಿಯಿಸಿದ್ದಾರೆ.
15 ಮೀಟರ್ ಉದ್ದದ ಸೇತುವೆ ₹28.71 ಕೋಟಿ ವೆಚ್ಚದ ಕಾಮಗಾರಿ 2018ರ ಮಾರ್ಚ್‌ನಲ್ಲಿ ಆರಂಭಗೊಂಡಿದ್ದ ಕಾಮಗಾರಿ
ಕೆಲವು ಕಾರಣದಿಂದ ಸೇತುವೆ ಕಾಮಗಾರಿ ನಿಧಾನವಾಗಿತ್ತು. ಈ ಬಗ್ಗೆ ವಿಧಾನಸಭೆಯಲ್ಲೂ ಪ್ರಸ್ತಾಪಿಸಿದ್ದೆ. ಅಡೆ ತಡೆ ನಿವಾರಣೆಯಾಗಿ ಸಂಚಾರಕ್ಕೆ ಮುಕ್ತವಾಗಿದೆ
–ದಿನಕರ ಶೆಟ್ಟಿ ಕುಮಟಾ ಶಾಸಕ
ಸೇತುವೆ ಮಂಜೂರು ಮಾಡಿಸಿದ್ದರೂ ಕೆಲಸ ಪೂರ್ಣಗೊಳ್ಳದ ಬೇಸರವಿತ್ತು. ಆದ್ಯತೆ ಮೇರೆಗೆ ಕಾಮಗಾರಿ ಮುಗಿಸಲು ಮುತುವರ್ಜಿ ವಹಿಸಿದೆ
–ಸತೀಶ ಸೈಲ್ ಕಾರವಾರ ಶಾಸಕ
ರಸ್ತೆ ಕಾಮಗಾರಿಯಿಂದ ವಿಳಂಬ
‘ಸೇತುವೆ ಕಾಮಗಾರಿಯು ಪ್ರಸಕ್ತ ವರ್ಷದ ಆರಂಭದಲ್ಲೆ ಪೂರ್ಣಗೊಂಡಿತ್ತು. ಆದರೆ ಅದಕ್ಕೆ ಸಂಪರ್ಕಿಸುವ ಎರಡೂ ಬದಿಯ ಕೂಡು ರಸ್ತೆಯ ಕಾಮಗಾರಿ ಅಪೂರ್ಣವಾಗಿತ್ತು. ಈ ರಸ್ತೆಗಳನ್ನು ಮಾಡದೇ ಹಾಗೇ ಬಿಡಲಾಗಿತ್ತು. ಅನೇಕ ಬಾರಿ ಪ್ರತಿಭಟನೆ ಮಾಡಲಾಗಿತ್ತು. ಕಳೆದ ವರ್ಷ ಎರಡೂ ಬದಿಯಲ್ಲಿ ಮಣ್ಣನ್ನು ತುಂಬಿ ದ್ವಿಚಕ್ರ ವಾಹನ ಸಂಚರಿಸಲು ತಾತ್ಕಾಲಿಕವಾಗಿ ಅನುಕೂಲ ಮಾಡಿಕೊಟ್ಟಿದ್ದರು. ಶಾಸಕರಾದ ದಿನಕರ ಶೆಟ್ಟಿ ಮತ್ತು ಸತೀಶ ಸೈಲ್ ಅವರ ಸತತ ಪ್ರಯತ್ನದಿಂದ ಇದೀಗ ವಾಹನಗಳ ಸಂಚಾರ ಸುಗಮವಾಗಿದೆ’ ಎಂದು ಸ್ಥಳೀಯರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.