
ಕಾರವಾರ: ನಗರವೂ ಸೇರಿದಂತೆ ತಾಲ್ಲೂಕಿನ ಬಹುಭಾಗ, ನೆರೆಯ ಅಂಕೋಲಾ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ ಬೇಸಿಗೆ ವೇಳೆ ನೀರು ಸಂಗ್ರಹಕ್ಕೆ ಮರಳಿನ ತಾತ್ಕಾಲಿಕ ಒಡ್ಡು ನಿರ್ಮಾಣಕ್ಕೆ ಮುಂದಾಗಲಾಗಿದೆ.
ಪ್ರತಿ ವರ್ಷ ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗುವ ಕಾರಣಕ್ಕೆ ಮರಳಿನ ಚೀಲಗಳನ್ನು ಬಳಸಿ ಒಡ್ಡು ನಿರ್ಮಿಸುವ ಕೆಲಸವನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಡುತ್ತಿದೆ. ಆದರೆ, ಈ ಬಾರಿ ಅವಧಿಗೆ ಮುನ್ನವೇ ಒಡ್ಡು ನಿರ್ಮಾಣದ ಕೆಲಸ ನಡೆದಿದೆ.
‘ನದಿಯಲ್ಲಿ ನೀರಿನ ಹರಿವು ಸದ್ಯಕ್ಕೆ ತಕ್ಕಮಟ್ಟಿಗೆ ಇದೆ. ಆದರೆ, ಮಳೆಗಾಲ ಆರಂಭ ವಿಳಂಬವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾಕಷ್ಟು ಮುಂಚಿನಿಂದಲೇ ನೀರು ಸಂಗ್ರಹಿಸಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು.
ಗಂಗಾವಳಿ ನದಿಗೆ ಅಂಕೋಲಾ ತಾಲ್ಲೂಕಿನ ಹೊನ್ನಾಳಿ ಬಳಿ ಪಂಪ್‌ಹೌಸ್ ನಿರ್ಮಿಸಿದ್ದು, ಅಲ್ಲಿ ಸದ್ಯ ನೆಲಮಟ್ಟದಿಂದ 1.6 ಮೀಟರ್ ಎತ್ತರದವರೆಗೆ ನೀರು ಹರಿಯುತ್ತಿದೆ. ಎರಡು ತಿಂಗಳ ಮುಂಚೆ ಇದೇ ಜಾಗದಲ್ಲಿ 2 ಮೀಟರ್‌ಗೂ ಹೆಚ್ಚು ನೀರು ಸಂಗ್ರಹವಿತ್ತು. ದಿನವೊಂದಕ್ಕೆ ನೀರು ಪೂರೈಸಲುಕನಿಷ್ಠ 1 ಮೀಟರ್ ಎತ್ತರದಷ್ಟು ನೀರು ಸಂಗ್ರಹ ಇರುವಂತೆ ನೋಡಿಕೊಳ್ಳಬೇಕು ಎಂಬುದಾಗಿ ಅಧಿಕಾರಿಯೊಬ್ಬರು ಹೇಳಿದರು.
ಹೊನ್ನಾಳಿಯಲ್ಲಿರುವ ಪಂಪ್‍ಹೌಸ್‍ನಿಂದ ನದಿಯ ನೀರನ್ನು ಎತ್ತಿ ಕಾರವಾರ ನಗರ, ಅಂಕೋಲಾ ಪಟ್ಟಣ, ಕದಂಬ ನೌಕಾನೆಲೆ, ಬಿಣಗಾದಲ್ಲಿರುವ ಗ್ರಾಸಿಮ್ ಇಂಡಸ್ಟ್ರೀಸ್, ಕಾರವಾರ ಮತ್ತು ಅಂಕೋಲಾದ 13 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಇಷ್ಟೂ ಪ್ರದೇಶಗಳಿಗೆ ಪ್ರತಿನಿತ್ಯ ಸರಾಸರಿ 21 ದಶಲಕ್ಷ ಲೀಟರ್ ನೀರು ಅಗತ್ಯವಿದೆ.
ಗಂಗಾವಳಿ ನದಿಯಲ್ಲಿ ಸದ್ಯಕ್ಕೆ ನೀರಿನ ಒಳಹರಿವು ಉತ್ತಮವಾಗಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಮರಳಿನ ಒಡ್ಡು ನಿರ್ಮಿಸಲಾಗುತ್ತಿದೆಶಿವರಾಮ ನಾಯ್ಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.