ಕಾರವಾರ: ಮಳೆಗಾಲದ ಅವಧಿಯಲ್ಲಿ ಇಲ್ಲಿನ ಅಲಿಗದ್ದಾ ಕಡಲತೀರದಲ್ಲಿ ನಡೆಸಲಾಗುತ್ತಿದ್ದ ಸಾಂಪ್ರದಾಯಿಕ ಏಂಡಿ ಬಲೆ ಮೀನುಗಾರಿಕೆಗೆ ‘ಕಸದ ರಾಶಿ’ ಅಡ್ಡಿಯುಂಟು ಮಾಡುತ್ತಿದೆ.
ಮುಂಗಾರು ಮಳೆ ಸುರಿಯುವ ಜೂನ್ ಮತ್ತು ಜುಲೈ ತಿಂಗಳ ಅವಧಿಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಮಾಡಲಾಗುತ್ತದೆ. ಇದೇ ಅವಧಿಯಲ್ಲಿ ಕಡಲತೀರದಲ್ಲಿ ನಿಂತು ಏಂಡಿ ಬಲೆ ಬಳಸಿ ಮೀನುಗಾರಿಕೆ ನಡೆಸುವುದು ಸಾಂಪ್ರದಾಯಿಕ ಮೀನುಗಾರರಿಗೆ ಜೀವನೋಪಾಯವಾಗಿದೆ. ದೋಣಿಗಳ ಮೂಲಕ ಮೀನು ಬೇಟೆ ನಿಂತ ಅವಧಿಯಲ್ಲಿ ತೀರ ಪ್ರದೇಶದಲ್ಲಿ ಹೆಚ್ಚು ಮೀನು ಸಿಗುವ ಕಾರಣ ಎರಡು ತಿಂಗಳು ಅವರಿಗೆ ಸುಗ್ಗಿ ಕಾಲವಾಗಿತ್ತು.
ಆದರೆ, ಏಂಡಿ ಬಲೆ ಮೀನುಗಾರಿಕೆಗೆ ಪ್ರಸಿದ್ಧಿ ಪಡೆದಿರುವ ಇಲ್ಲಿನ ಅಲಿಗದ್ದಾ ಕಡಲತೀರದಲ್ಲಿ ಸಮುದ್ರದ ಅಲೆಗಳೊಂದಿಗೆ ವ್ಯಾಪಕ ಪ್ರಮಾಣದಲ್ಲಿ ಕಸದ ರಾಶಿ ದಡಕ್ಕೆ ಬಂದು ಬೀಳುತ್ತಿರುವುದು ಏಂಡಿ ಮೀನುಗಾರಿಕೆ ನಡೆಸಲು ಸಮಸ್ಯೆ ಸೃಷ್ಟಿಸಿದೆ. 13ಕ್ಕೂ ಹೆಚ್ಚು ಏಂಡಿ ಬಲೆಗಳನ್ನು ಪ್ರತಿನಿತ್ಯ ಪಾಳಿ ಪ್ರಕಾರ ಬಿಸಲಾಗುತ್ತಿದ್ದರೂ ಸದ್ಯ ಒಂದೆರಡು ಬಲೆಗಳ ಮೂಲಕ ಮೀನುಗಾರಿಕೆ ನಡೆಸುವ ಪ್ರಯತ್ನ ನಡೆಯುತ್ತಿದೆ.
‘ಏಂಡಿ ಬಲೆ ಬೀಸಿದರೂ ಕಸದ ರಾಶಿ ಬಲೆಗೆ ಸಿಲುಕುತ್ತಿದೆ. ಕಸದ ರಾಶಿ ಹೆಚ್ಚಿರುವುದರಿಂದ ಮೀನುಗಳ ಲಭ್ಯತೆಯೂ ಇಲ್ಲದಂತಾಗಿದೆ. ಶ್ರಮ ಹಾಕಿ ಬಲೆ ಬೀಸಿದರೆ ಕೆಜಿಗಟ್ಟಲೆ ಕಸವೇ ಸಿಗುತ್ತಿದೆಯೇ ಹೊರತು ಬೆರಳೆಣಿಕೆಯಷ್ಟು ಮೀನು ಸಿಗುವುದೂ ಅಪರೂಪವಾಗಿದೆ’ ಎಂದು ಮೀನುಗಾರ ಜಗದೀಶ ಬಾನಾವಳಿಕರ ಸಮಸ್ಯೆ ಹೇಳಿಕೊಂಡರು.
‘ಯಾಂತ್ರೀಕೃತ ಮೀನುಗಾರಿಕೆ ನಿಷೇಧವಾದ ಎರಡು ತಿಂಗಳ ಅವಧಿಯಲ್ಲೇ ಸಾಂಪ್ರದಾಯಿಕ ಮೀನುಗಾರರಿಗೆ ಉತ್ತಮ ಪ್ರಮಾಣದಲ್ಲಿ ಮೀನು ಲಭಿಸುವ ಕಾಲವಾಗಿತ್ತು. ಅಲಿಗದ್ದಾ ತೀರಕ್ಕೆ ಕಸ ಬಂದು ಬೀಳುವ ಕಾರಣಕ್ಕೆ ಏಂಡಿ ಬಲೆ ಬೀಸಲಾಗುತ್ತಿಲ್ಲ. ದೋಣಿ ಮೂಲಕ ಮೀನುಗಾರಿಕೆ ನಡೆಸಲು ಅಬ್ಬರದ ಅಲೆಗಳು ಅಡ್ಡಿಯುಂಟು ಮಾಡುತ್ತಿವೆ. ಜೀವನೋಪಾಯವಿಲ್ಲದ ಮೀನುಗಾರರಿಗೆ ಪರಿಹಾರ ಒದಗಿಸುವ ಕೆಲಸ ಆಗಬೇಕಿದೆ’ ಎಂದು ಮೀನುಗಾರ ಮುಖಂಡ ಚೇತನ ಹರಿಕಂತ್ರ ಹೇಳಿದರು.
ಏನಿದು ಏಂಡಿ ಮೀನುಗಾರಿಕೆ?
ಕಡಲತೀರದ ಸಮೀಪದಲ್ಲಿಯೇ ದೊಡ್ಡ ಗಾತ್ರದ ಬಲೆಯನ್ನು ಸಮುದ್ರಕ್ಕೆ ದೋಣಿಯಲ್ಲಿ ತೆರಳಿ ಇಳಿಸಲಾಗುತ್ತದೆ. ಸುತ್ತುವರಿದು ಬಲೆ ಅಳವಡಿಸಿದ ಬಳಿಕ ದಡದಲ್ಲಿ ನಿಂತು ಎರಡೂ ಬದಿಯಿಂದಲೂ ತಲಾ 15 ರಿಂದ 20 ಮಂದಿ ಸೇರಿ ಎಳೆಯುತ್ತಾರೆ. ತೀರದ ಸಮೀಪದಲ್ಲಿರುವ ಬಣಗು ತೋರಿ ಸೇರಿದಂತೆ ವಿವಿಧ ಬಗೆಯ ಮೀನುಗಳು ಬಲೆಗೆ ಸಿಲುಕುತ್ತವೆ. ಒಂದು ಏಂಡಿ ಬಲೆ ಆಧರಿಸಿ ಕನಿಷ್ಠ 35 ರಿಂದ 40 ಮಂದಿ ಜೀವನ ಸಾಗಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.