ADVERTISEMENT

ಮಳೆಯಲ್ಲೇ ಗ್ಯಾಸ್ ಕಿಟ್ ವಿತರಣೆ

80 ಫಲಾನುಭವಿಗಳ ಪೈಕಿ 10 ಮಂದಿಗೆ ಸಾಂಕೇತಿಕವಾಗಿ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 11:14 IST
Last Updated 16 ಅಕ್ಟೋಬರ್ 2018, 11:14 IST
ಸಚಿವ ಅನಂತಕುಮಾರ ಹೆಗಡೆ ಅವರು ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಗ್ಯಾಸ್ ಕಿಟ್ ಅನ್ನು ಮಳೆಯಲ್ಲೇ ವಿತರಣೆ ಮಾಡುತ್ತಿರುವುದು
ಸಚಿವ ಅನಂತಕುಮಾರ ಹೆಗಡೆ ಅವರು ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಗ್ಯಾಸ್ ಕಿಟ್ ಅನ್ನು ಮಳೆಯಲ್ಲೇ ವಿತರಣೆ ಮಾಡುತ್ತಿರುವುದು   

ಕಾರವಾರ: ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲ ಕಿಟ್ ವಿತರಿಸಲು ನಗರದ ಬಿಣಗಾ ಮೂಡಲಮಕ್ಕಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವು ಮಳೆಯಿಂದಾಗಿ ಅಸ್ತವ್ಯಸ್ತಗೊಂಡಿತು.

ನಗರದ ಸೋನಿ ಗ್ಯಾಸ್ ಏಜೆನ್ಸೀಸ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. 80 ಮಂದಿ ಫಲಾನುಭವಿಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿತ್ತು. ಉದ್ಘಾಟಕರು ಹಾಗೂ ಕಿಟ್ ವಿತರಕರಾಗಿ ಕೇಂದ್ರ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಖಾತೆ ಸಚಿವ ಅನಂತಕುಮಾರ ಹೆಗಡೆ ಭಾಗವಹಿಸಿದ್ದರ.

ಕಾರ್ಯಕ್ರಮಕ್ಕೆ ಅವರು ಬರುತ್ತಿದ್ದಂತೆ ಮಳೆ ಸುರಿಯಲಾರಂಭಿಸಿತು. ಇದರಿಂದಾಗಿ ಕುಳಿತಿದ್ದ ಜನರು ಚೆಲ್ಲಾಪಿಲ್ಲಿಯಾದರು. ಹೀಗಾಗಿ, ‘ಪ್ರಾರ್ಥನೆ, ಭಾಷಣಗಳು ಬೇಡ. ಫಲಾನುಭವಿಗಳಿಗೆ ಕಿಟ್ ವಿತರಣೆ ಮಾಡಿ ಬಿಡೋಣ’ ಎಂದು ಸಚಿವರು ಆಯೋಜಕರಿಗೆ ತಿಳಿಸಿದರು. ಅದರಂತೆ, ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಸುಮಾರು 10 ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಿಟ್ ವಿತರಣೆ ಮಾಡಿದರು. ಮಳೆ ಹೆಚ್ಚಾಗಿದ್ದರಿಂದ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ಅಲ್ಲಿಂದ ತೆರಳಿದರು.

ADVERTISEMENT

ಎಳೆದಾಟ: ‘ನಮಗೂ ಗ್ಯಾಸ್ ಕೊಡಿ’ ಎಂದು ಮದ್ಯ ಸೇವನೆ ಮಾಡಿದ್ದ ವ್ಯಕ್ತಿಯೊಬ್ಬ ಸಚಿವರು ಹೊರಡುವ ವೇಳೆ ಶಾಸಕಿ ರೂಪಾಲಿ ನಾಯ್ಕ ಅವರನ್ನು ಒತ್ತಾಯಿಸುತ್ತಿದ್ದ. ಆತನನ್ನು ಪಕ್ಷದ ಕಾರ್ಯಕರ್ತರು ಪಕ್ಕಕ್ಕೆ ಎಳೆದುಕೊಳ್ಳುತ್ತಿದ್ದಾಗ ಅಲ್ಲೇ ಸಮೀಪ ಇದ್ದ ವೃದ್ಧರೊಬ್ಬರು ಕೆಳಕ್ಕೆ ಬಿದ್ದರು. ಮದ್ಯ ಸೇವನೆ ಮಾಡಿದಾತನಿಗೆ ಜನರು ಹಾಗೂ ಕಾರ್ಯಕರ್ತರು ಬೈದು, ವೃದ್ಧರಿಗೆ ಕೂರಲು ಕುರ್ಚಿ ಕೊಟ್ಟು ಉಪಚರಿಸಿದರು. ಜನರಿಗೆ ಮಳೆಯಲ್ಲೇ ಚಹಾ ಹಾಗೂ ತಿಂಡಿಯನ್ನು ವಿತರಣೆ ಮಾಡಲಾಯಿತು.

ಬೇಕಾಬಿಟ್ಟಿ ಆಯೋಜನೆ?: ಕಾರ್ಯಕ್ರಮಕ್ಕೆ ಮೈಕ್ ಹಾಗೂ ಜನರೇಟರ್ ಅಳವಡಿಸಿರಲಿಲ್ಲ. ಶಾಮಿಯಾನವನ್ನು ಹಾಕಿ ಎರಡು ಕೂಲರ್‌ಗಳನ್ನು ಇಡಲಾಗಿತ್ತು.

ಒಂದೆಡೆ ಮಳೆ ಸುರಿಯುತ್ತಿದ್ದರಿಂದ ಫಲಾನುಭವಿಗಳ ಹೆಸರನ್ನು ಕೂಗಿದರೂ ಕೇಳುತ್ತಿರಲಿಲ್ಲ. ಹೀಗಾಗಿ ಸಿಡಿಮಿಡಿಗೊಂಡ ಸಚಿವ ಅನಂತಕುಮಾರ್ ಹೆಗಡೆ, ‘ಕಾರ್ಯಕ್ರಮವನ್ನು ಬೇಕಾಬಿಟ್ಟಿ ಆಯೋಜನೆ ಮಾಡಿದ್ದೀರಾ? ಮೈಕ್ ಹಾಗೂ ಜನರೇಟರ್ ಅಳವಡಿಸಬೇಕು ಎನ್ನುವುದು ಗೊತ್ತಿಲ್ಲವೇ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಶಾಮಿಯಾನದವರಿಗೆ ಹೇಳಿದ್ದೆವು. ಆದರೆ, ಅವರು ತಂದಿಲ್ಲ’ ಎಂದು ಆಯೋಜಕರು ಸ್ಪಷ್ಟನೆ ನೀಡಿದರು. ಕಾರ್ಯಕ್ರಮ ಮುಗಿದು ಸಚಿವರು ಹೊರಟ ಬಳಿಕ ಶಾಮಿಯಾನದವರು ಮೈಕ್ ಹಾಗೂ ಜನರೇಟರ್ ಅನ್ನು ತಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.