ಕಾರವಾರ: ದಾಂಡೇಲಿಯ ಫಣಸೋಲಿ ವನ್ಯಜೀವಿ ವಲಯದ ಆನೆ ಶಿಬಿರದಲ್ಲಿದ್ದ ‘ಗೌರಿ’ ಹೆಸರಿನ ಹೆಣ್ಣು ಮರಿ ಆನೆ ಅನಾರೋಗ್ಯದಿಂದ ಗುರುವಾರ ಸಾವನ್ನಪ್ಪಿದೆ.
‘2 ವರ್ಷ 9 ತಿಂಗಳ ವಯಸ್ಸಿನ ಆನೆಮರಿಯು ಒಂದು ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿತ್ತು. ತಜ್ಞವೈದ್ಯರು ಚಿಕಿತ್ಸೆ ನೀಡಿದ್ದರು. ರಕ್ತ ಪರೀಕ್ಷೆ ನಡೆಸಿದಾಗ ಆನೆ ಸಹಜ ಸ್ಥಿತಿಯಲ್ಲಿದೆ ಎಂಬ ವರದಿ ಬಂದಿತ್ತು. ಆದರೆ, ಕೆಲದಿನಗಳಿಂದ ಗೌರಿ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೆ ಗೌರಿ ಮೃತಪಟ್ಟಿದೆ’ ಎಂದು ಫಣಸೋಲಿ ವನ್ಯಜೀವಿ ವಲಯದ ಎಸಿಎಫ್ ಮಂಜುನಾಥ ಕಳ್ಳಿಮಠ ತಿಳಿಸಿದರು.
ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಆನೆ ಜನ್ಮತಳೆದ ಅರಣ್ಯ ಪ್ರದೇಶದಲ್ಲಿಯೇ ಅದನ್ನು ಹೂಳಲಾಯಿತು. ಡಿಸಿಎಫ್ ಕೆ.ಸಿ.ಪ್ರಶಾಂತಕುಮಾರ್ ಈ ಸಂದರ್ಭದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.