ಹೊನ್ನಾವರ: ಗೇರುಸೊಪ್ಪ ಜಲಾಶಯದಿಂದ ಶರಾವತಿ ನದಿಗೆ ಆ.1ರಂದು ನೀರು ಬಿಡುವ ಮುನ್ಸೂಚನೆ ನೀಡಲಾಗಿದೆ.
ಜಲಾಶಯದಿಂದ ಆ. 1ರಂದು 50 ಸಾವಿರ ಕ್ಯುಸೆಕ್ ನೀರು ಹೊರಬಿಡುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ನದಿ ದಂಡೆಯ ಜನರು ತಮ್ಮ ಜಾನವಾರು ಹಾಗೂ ಅಗತ್ಯ ವಸ್ತುಗಳೊಂದಿಗೆ ಕಾಳಜಿ ಕೇಂದ್ರ ಅಥವಾ ಸುರಕ್ಷಿತ ಜಾಗಕ್ಕೆ ಸ್ಥಳಾಂತಗೊಳ್ಳಬೇಕು ಎಂದು ತಹಶೀಲ್ದಾರ್ ರವಿರಾಜ ದೀಕ್ಷಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಮಂಗಗಳಿಂದ ಬೆಳೆ ರಕ್ಷಿಸಿ’
ಮಂಗಗಳು ಅಡಿಕೆ ತೋಟ ಭತ್ತದ ಗದ್ದೆ ಹಾಗೂ ಇನ್ನಿತರ ಬೆಳೆಗಳನ್ನು ನಿತ್ಯ ತಿಂದು ಹಾಳು ಮಾಡುತ್ತಿದ್ದು ಶೀಘ್ರವೇ ಮಂಗಗಳ ನಿಯಂತ್ರಣಕ್ಕೆ ಕ್ರಮವಹಿಸುವಂತೆ ತಾಲ್ಲೂಕಿನ ಇಟಗಿಯ ಶ್ರೀರಾಮೇಶ್ವರ ಕೃಷಿ ಪರಿವಾರ ಹೋರಾಟ ಸಮಿತಿ ವತಿಯಿಂದ ವಾಜುಗೋಡು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಯಿತು. ‘ಮಂಗಗಳು ಬೆಳೆಗಳನ್ನು ತಿಂದು ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡುತ್ತಿವೆ. ಇದರಿಂದ ರೈತರ ಆದಾಯಕ್ಕೆ ಕುತ್ತು ಬರುತ್ತಿದ್ದು ರೈತಾಪಿ ಕೆಲಸಗಳನ್ನು ನಿಲ್ಲಿಸುವಂತಾಗಿದೆ. ಮಂಗಗಳಿಂದ ಆದ ನಷ್ಟಕ್ಕೆ ಯಾವುದೇ ಪಲಹಾರ ಸಿಗುತ್ತಿಲ್ಲ. ಇದರ ಜೊತೆ ಇತರ ಕಾಡುಪ್ರಾಣಿಗಳ ಹಾವಳಿ ಮಿತಿ ಮೀರಿದ್ದು ಈ ಕುರಿತು ಪರಿಹಾರ ನೀಡುತ್ತಿದ್ದರೂ ಸರಿಯಾಗಿ ದಾಖಲೆಗಳ ನಿರ್ವಹಣೆಗೂ ಸಾಕಾಗುತ್ತಿಲ್ಲ. ಮಂಗಗಳನ್ನು ಕೂಡಲೇ ನಿಯಂತ್ರಿಸಲು ಶಿಘ್ರ ಕ್ರಮ ಕೈಗೊಂಡು ಬೆಳೆಗಳನ್ನು ಉಳಿಸಿ ಕೊಡಬೇಕು’ ಎಂದು ರೈತರು ಆಗ್ರಹಿಸಿದರು. ‘ಈ ಕುರಿತು ಗ್ರಾಮ ಪಂಚಾಯಿತಿಯಿಂದ ಶಿಘ್ರವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಆ.8ರ ಬೆಳಿಗ್ಗೆ ಕ್ರಮದ ಕುರಿತು ನಮ್ಮ ಸಮಿತಿಗೆ ಹಾಗೂ ರೈತರಿಗೆ ಉತ್ತರ ನೀಡಬೇಕು. ಇಲ್ಲದಿದ್ದಲ್ಲಿ ಆ. 9ರ ನಂತರ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು. ಪ್ರಮುಖರಾದ ಎಂ.ಎನ್ ಹೆಗಡೆ ತಲೆಕೇರಿ ಕೃಷ್ಣಮೂರ್ತಿ ಐಸೂರ್ ರಾಮಚಂದ್ರ ನಾಯ್ಕ ಅಣ್ಣಪ್ಪ ಹೆಗಡೆ ಜಯಂತ ಹೆಗಡೆ ಆರ್.ಎನ್ ಹೆಗಡೆ ಮುಸೇಗಾರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.