ADVERTISEMENT

ನೌಕಾಪಡೆಯ ಸಬ್ ಲೆಫ್ಟಿನೆಂಟ್ ಚೈತ್ರಾ ನಾಯ್ಕ

ದೇಶಸೇವೆಗೆ ಅಣಿಯಾದ ಅಂಕೋಲಾದ ಬೊಬ್ರುವಾಡಾದ ಯುವತಿ

ಮಂಜುನಾಥ ಇಟಗಿ
Published 12 ಡಿಸೆಂಬರ್ 2019, 16:30 IST
Last Updated 12 ಡಿಸೆಂಬರ್ 2019, 16:30 IST
ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಆಗಿ ತರಬೇತಿ ಪಡೆದ ನಂತರ ಪಾಲಕರೊಂದಿಗೆ ಚೈತ್ರಾ ನಾಯ್ಕ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು
ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಆಗಿ ತರಬೇತಿ ಪಡೆದ ನಂತರ ಪಾಲಕರೊಂದಿಗೆ ಚೈತ್ರಾ ನಾಯ್ಕ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು   

ಅಂಕೋಲಾ:ದೇಶ ಸೇವೆ ಮಾಡಬೇಕೆಂಬ ಕನಸನ್ನು ನನಸಾಗಿಸಿಕೊಂಡ ಬೊಬ್ರುವಾಡಾದ ಚೈತ್ರಾ ನಾಯ್ಕ, ತಮ್ಮ 24ನೇ ವಯಸ್ಸಿನಲ್ಲೇ ಭಾರತೀಯ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಕೇರಳದ ನೌಕಾದಳದ ಕೇಂದ್ರ ಕಚೇರಿ ಎ.ಜಿ.ಮಾಲಾದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಅವರು ದೇಶಸೇವೆಗೆ ಅಣಿಯಾದರು.

ಅವರ ಪಾಲಕರು ಕಾರವಾರದಲ್ಲಿ ನೆಲೆಸಿದ್ದಾರೆ. ತಂದೆ ನಾಗಪ್ಪ ನಾಯ್ಕಪೊಲೀಸ್ಇಲಾಖೆಯಲ್ಲಿ, ತಾಯಿ ಪುನೀತಿ ನಾಯ್ಕ ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ದಂಪತಿಗೆ ಪುತ್ರಮತ್ತು ಮೂವರು ಪುತ್ರಿಯರಿದ್ದಾರೆ.

ADVERTISEMENT

ಚೈತ್ರಾಪ್ರಾಥಮಿಕ ವಿದ್ಯಾಭ್ಯಾಸದಿಂದ ಪಿ.ಯು.ಸಿ.ಯವರೆಗೆ ಕಾರವಾರದಲ್ಲಿ ಅಧ್ಯಯನ ಮಾಡಿದರು. ನಂತರ ಧಾರವಾಡದ ಎಸ್‍.ಡಿ.ಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ನಂತರ ಬೆಂಗಳೂರಿನ ಇಂಟೆಲ್ ಟೆಕ್ನಾಲಜಿ ಕಂಪನಿಯಲ್ಲಿ ಫಿಸಿಕಲ್ ಡಿಸೈನಿಂಗ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ದೇಶ ಸೇವೆಯ ಹಂಬಲದಿಂದ ಉತ್ತಮ ವೇತನದ ಉದ್ಯೋಗವನ್ನು ಅವರು ತೊರೆದು ಬಂದು ನೌಕಾಪಡೆಯ ತರಬೇತಿಗೆ ಸೇರಿಕೊಂಡರು. ಎಲ್ಲ ಹಂತಗಳನ್ನು ಯಶಸ್ವಿಯಾಗಿ ದಾಟಿದ ಬಳಿಕ ಆಯ್ಕೆಯಾದರು. ಈ ಮೂಲಕ ನೌಕಾಪಡೆಯ ಸಬ್ ಲೆಫ್ಟಿನೆಂಟ್ ಆಗಿ ಆಯ್ಕೆಯಾದ ಜಿಲ್ಲೆಯ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾದರು.

‘ತುಂಬ ಸಂತಸವಾಗಿದೆ’:‘ನಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲೆಯೇ ದೇಶ ಸೇವೆಯ ಕುರಿತು ಆಗಾಗ ತಿಳಿಸುತ್ತಿದ್ದೆ. ಚೈತ್ರಾಶಾಲಾ, ಕಾಲೇಜಿನ ಓದಿನ ದಿನಗಳಲ್ಲೇ ನೌಕಾಪಡೆಗೆ ಸೇರುವ ಗುರಿ ಹೊಂದಿದ್ದಳು. ಅವಳು ಈಗ ಗುರಿ ತಲುಪಿದ್ದಾಳೆ. ಕಿರಿಯ ವಯಸ್ಸಿಗೇ ಜವಾಬ್ದಾರಿ ವಹಿಸಿಕೊಂಡಿರುವುದು ನಮ್ಮೆಲ್ಲರಿಗೂ ತುಂಬಾ ಸಂತೋಷವಾಗಿದೆ. ಇನ್ನೂ ಹೆಚ್ಚಿನ ದೇಶ ಸೇವೆ ಮಾಡುವ ಭಾಗ್ಯ ಅವಳಿಗೆ ದೊರೆಯಲಿ ಎನ್ನುವುದು ನಮ್ಮ ಆಶಯವಾಗಿದೆ’ ಎಂದು ಅವರ ತಂದೆ, ಕಾರವಾರದಲ್ಲಿಜಿಲ್ಲಾ ಸಶಸ್ತ್ರ ಮೀಸಲುಪಡೆಯ ಮುಖ್ಯ ಕಾನ್‌ಸ್ಟೆಬಲ್ ಆಗಿರುವ ನಾಗಪ್ಪ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.