ADVERTISEMENT

ಗೋಕರ್ಣ: ಶಿಥಿಲಾವಸ್ಥೆಯಲ್ಲಿ ಮೀನುಗಾರಿಕಾ ಇಲಾಖೆ ಕಟ್ಟಡ

ಜೀವಭಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು * ಮನವಿಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು

ರವಿ ಸೂರಿ
Published 29 ಜುಲೈ 2025, 7:35 IST
Last Updated 29 ಜುಲೈ 2025, 7:35 IST
ಗೋಕರ್ಣ ಸಮೀಪದ ತದಡಿಯ ಬಂದರಿನಲ್ಲಿರುವ ಮೀನುಗಾರಿಕಾ ಇಲಾಖೆಯ ಕಟ್ಟಡ ಶಿಥಿಲಗೊಂಡಿರುವುದು.
ಗೋಕರ್ಣ ಸಮೀಪದ ತದಡಿಯ ಬಂದರಿನಲ್ಲಿರುವ ಮೀನುಗಾರಿಕಾ ಇಲಾಖೆಯ ಕಟ್ಟಡ ಶಿಥಿಲಗೊಂಡಿರುವುದು.   

ಗೋಕರ್ಣ: ಸಮೀಪದ ತದಡಿಯ ಮೀನುಗಾರಿಕಾ ಇಲಾಖೆಯ ಕಟ್ಟಡ ಹಳೆಯದಾಗಿದ್ದು, ಸಂಪೂರ್ಣ ಶಿಥಲಾವಸ್ಥೆಗೆ ತಲುಪಿದೆ. ತದಡಿಯ ಬಂದರಿನಲ್ಲಿಯೇ ಇರುವ ಈ ಕಟ್ಟಡ ತುಂಬಾ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಮೀನುಗಾರರು ದೂರಿದ್ದಾರೆ.

ನೂತನ ಕಟ್ಟಡ ನಿರ್ಮಾಣಕ್ಕೆ ಅನೇಕ ಸಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಕೆಲಸ ಮಾಡುವ ನೌಕರರಿಗೂ ಜೀವಭಯದಲ್ಲಿ ಕೆಲಸ ಮಾಡುವ ಸ್ಥಿತಿ ಇದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕಟ್ಟಡ ನಿರ್ಮಾಣವಾಗಿದ್ದು ಸುಮಾರು 1982 ನೇ ಇಸವಿಯಲ್ಲಿ. ಇಂಡೋ- ಡ್ಯಾನಿಶ್ ಯೋಜನೆಯಲ್ಲಿ ತದಡಿ ಬಂದರಿನಲ್ಲಿ ಈ ಕಟ್ಟಡ ನಿರ್ಮಿಸಲಾಗಿತ್ತು. ಆಗ ಅತ್ಯಂತ ಸುಸ್ಥಿತಿಯಲ್ಲಿ ಈ ಕಟ್ಟಡ ಇತ್ತು. ಒಳಗಿನ ಛಾವಣಿಯನ್ನೆಲ್ಲಾ ಕಟ್ಟಿಗೆಯಿಂದಲೇ ನಿರ್ಮಿಸಲಾಗಿತ್ತು. ಕಾಲಕ್ರಮೇಣ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಆದರೆ ಇದೇ ಕಟ್ಟಡದಲ್ಲಿ ಒಂದು ಬದಿಗೆ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಕಛೇರಿ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನೊಂದು ಬದಿಯಲ್ಲಿ ಮೀನುಗಾರಿಕಾ ಅಭಿವೃದ್ಧಿ ನಿಗಮದ ಕಛೇರಿ ಇದೆ. ಕೆಲಸದ ಸಮಯದಲ್ಲಿ ಕಟ್ಟಡ ಕುಸಿದು ಬಿದ್ದರೆ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಜೀವಕ್ಕೂ ಅಪಾಯವಾಗುವ ಸಂಭವವಿದೆ ಎಂಬುದು ನೌಕರರ ಆತಂಕವಾಗಿದೆ. ಕಚೇರಿಗೆ ಮೀನುಗಾರರೂ ಭಯದ ವಾತಾವರಣದಲ್ಲಿಯೇ ಬರಬೇಕಾಗಿದೆ ಎಂದು ಮೀನುಗಾರರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

2022 ರಲ್ಲಿ ಆಗಿನ ರಾಜ್ಯ ಸರ್ಕಾರದ ಮೀನುಗಾರಿಕಾ ಸಚಿವ ಎಸ್. ಅಂಗಾರ ಎಸ್. ಅಂಗಾರ ಅವರು, ‘ತದಡಿ ಮೀನುಗಾರಿಕಾ ಬಂದರಿನ 225 ಕೋಟಿ ವೆಚ್ಚದ ಎರಡನೇ ಹಂತದ ಅಭಿವೃದ್ಧಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ. ಮೀನುಗಾರರಿಗೆ ಅತಿ ಅವಶ್ಯವಿರುವ ಬಂದರಿನ ಅನುಕೂಲ ಕಲ್ಪಿಸೋಣ’ ಎಂದು ಮೀನುಗಾರಿಕಾ ಅಧಿಕಾರಿಗಳಿಗೆ ಸೂಚಿಸಿದ್ದರು. ಎರಡನೇ ಹಂತದ ಬಂದರು ಅಭಿವೃದ್ಧಿ ಯೋಜನೆಯನ್ನು ಸಮಗ್ರವಾಗಿ ಪರಿಶೀಲಿಸಿ ಕಾರ್ಯಗತಗೊಳಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಆಮೇಲೆ ಆ ಯೋಜನೆ ಇವತ್ತಿನ ವರೆಗೂ ಕಾರ್ಯಗತಗೊಳ್ಳಲೇ ಇಲ್ಲ ಎಂದು ಮೀನುಗಾರರ ಮುಖಂಡ ಉಮಾಕಾಂತ ಹೊಸ್ಕಟ್ಟಾ ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಸರ್ಕಾರ ಮೊದಲಿನಿಂದಲೂ ತದಡಿ ಬಂದರನ್ನು ನಿರ್ಲಕ್ಷಿಸುತ್ತಾ ಬಂದಿದೆ. ಇಲ್ಲಿಯ ಮೀನುಗಾರರರಿಗೆ ಅವಶ್ಯವಿರುವ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ದಕ್ಷಿಣಕನ್ನಡಕ್ಕೆ ಹೋಲಿಸಿದರೆ ಉತ್ತರಕನ್ನಡದ ಮೀನುಗಾರರಿಗೆ ಯಾವುದೇ ಅನುಕೂಲ ಕಲ್ಪಿಸಿಕೊಟ್ಟಿಲ್ಲ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಸೂಚಿಸಿದ್ದಾರೆ.

ಈ ಜಾಗವು ಮೀನುಗಾರಿಕಾ ಇಲಾಖೆಗೆ ಸೇರಿದ್ದು. ಬಂದರಿನಲ್ಲಿ ಇಲಾಖೆಗೆ ಕಾರ್ಯನಿರ್ವಹಿಸಲು ಈ ಕಟ್ಟಡ ಬಿಟ್ಟರೆ ಬೇರೆ ಕಟ್ಟಡವಿಲ್ಲ. ಶಿಥಿಲಗೊಂಡ ಕಟ್ಟಡದಲ್ಲಿಯೇ ಕೆಲಸ ನಿರ್ವಹಿಸುವುದು ಅನಿವಾರ್ಯವಾಗಿದೆ. ಕಟ್ಟಡ ಬೀಳುವ ಮೊದಲೇ ಬೇರೆ ವ್ಯವಸ್ಥೆ ಕಲ್ಪಿಸಿ, ನೂತನ ಕಟ್ಟಡ ಕಟ್ಟಲು ಸರ್ಕಾರ ಕಾರ್ಯಕೈಗೊಳ್ಳಬೇಕು ಎಂದು ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ.

ಗೋಕರ್ಣ ಸಮೀಪದ ತದಡಿಯ ಬಂದರಿನಲ್ಲಿರುವ ಮೀನುಗಾರಿಕಾ ಇಲಾಖೆಯ ಕಟ್ಟಡ ಶಿಥಿಲಗೊಂಡಿರುವುದು.

ವರದಿ ನೀಡಲು ಸೂಚನೆ

‘ಕಟ್ಟಡ ಶಿಥಿಲಗೊಂಡಿರುವುದು ಹೌದು. ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇವೆ. ಈಗ ಇದ್ದ ಸ್ಥಿತಿಯ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪರಿಶೀಲಿಸಿ ವರದಿ ನೀಡಲು ಕೇಳಿಕೊಂಡಿದ್ದೇವೆ. ಉಪಯೋಗಿಸಲು ಯೋಗ್ಯ ಇಲ್ಲ ಎಂದು ವರದಿ ಬಂದರೆ ಬೇರೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತೇವೆ’ ಎಂದು ತದಡಿಯ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ರವೀಂದ್ರ ತಳ್ಳೇಕರ್ ಭರವಸೆ ನೀಡಿದ್ದಾರೆ.

ತದಡಿ ಬಂದರು ಸಂಪೂರ್ಣ ನಿರ್ಲಕ್ಷ್ಯಿಸಲ್ಪಟ್ಟಿದೆ. ಇಲ್ಲಿಯ ಮೀನುಗಾರರಿಗೆ ಉಪಯೋಗವಾಗುವ ಯಾವುದೇ ಯೋಜನೆಯನ್ನೂ ಸರ್ಕಾರ ಮಾಡುತ್ತಿಲ್ಲ. ಯಾವುದೇ ಸರ್ಕಾರ ಬಂದರೂ ಇಲ್ಲಿಯ ಬಂದರಿಗೆ ಮೀನುಗಾರರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ.
-ಉಮಾಕಾಂತ ಹೊಸ್ಕಟ್ಟಾ ಮೀನುಗಾರರ ಮುಖಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.