
ಗೋಕರ್ಣ: ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರನ ವಾರ್ಷಿಕ ಮಹಾಶಿವರಾತ್ರಿ ಉತ್ಸವ ಫೇಬ್ರುವರಿ 11 ರಿಂದ ಪ್ರಾರಂಭವಾಗಿ 18 ವರೆಗೆ ನಡೆಯುವ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಕುಮಟಾ ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ್ ಇವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.
ಸ್ವಚ್ಛತೆಗೆ ಹೆಚ್ಚಿನ ಸಿಬ್ಬಂದಿ ನೇಮಿಸಿ, ಊರಿನ ಸ್ವಚ್ಛತೆಗೆ ಆದ್ಯತೆ ನೀಡಿ ಪಂಚಾಯ್ತಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆದೇಶಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಫಿನಾಯಿಲ್ ಸಿಂಪಡಿಸಿ, ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.
ಗೋಕರ್ಣ ಪುರಾಣ ಪ್ರಸಿದ್ಧ ಜಾತ್ರೆ. ಮೂಲಭೂತ ಸೌಕರ್ಯಕ್ಕಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿದ್ದ ಗ್ರಾಮ ಪಂಚಾಯ್ತಿ ಸದಸ್ಯ ಗಣಪತಿ ನಾಯ್ಕ ಆಗ್ರಹಿಸಿದರು.
ವಾಹನಗಳಿಗೆ ಸೂಕ್ತ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ, ಭಕ್ತರಿಗೆ ಸಹಾಯವಾಗಲು ಹೆಚ್ಚಿನ ಸಾರಿಗೆ ವ್ಯವಸ್ಥೆಯನ್ನು ಮಾಡುವುದು, ಹೆಚ್ಚುವರಿ ವಿದ್ಯುತ್, ರಸ್ತೆ ದೀಪ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಆರೋಗ್ಯ ನಿರ್ವಹಣೆ ಇತರ ಹೊಣೆಯನ್ನು ವಿವಿಧ ಇಲಾಖೆಗಳಿಗೆ ಸೂಕ್ತವಾಗಿ ನಿರ್ವಹಿಸುವಂತೆ ಆದೇಶಿಸಲಾಯಿತು.
ಗೋಕರ್ಣದ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ಯಾವುದೇ ಚಿಕಿತ್ಸೆ ನೀಡದೇ ಮುಚ್ಚಲಾಗುತ್ತದೆ. ಇದರಿಂದ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ತುಂಬಾ ತೊಂದರೆಯಾಗುತ್ತಿದೆ ಎಂಬ ಮಾತು ಸಭೆಯಲ್ಲಿ ಕೇಳಿಬಂತು.
ವಿ.ಐ.ಪಿ.ಗಳ ಪೂಜೆಯ ಸಂದರ್ಭದಲ್ಲಿ ದೇವಸ್ಥಾನ ಇತರ ಸಾಮಾನ್ಯ ಭಕ್ತರಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಇದರಿಂದ ಸರತಿ ಸಾಲಿನಲ್ಲಿ ಇದ್ದ ಭಕ್ತರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉದ್ಭವಿಸುತ್ತದೆ. ಸಾಮಾನ್ಯ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅನುಕೂಲ ಕಲ್ಪಿಸುವಂತೆ ಹಾಗೂ ಸ್ಥಳೀಯರಿಗೆ ಪೂಜೆಗೆ ಆದ್ಯತೆ ನೀಡುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು. ಅದಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ದೇವಸ್ಥಾನ ಸಮಿತಿಯವರು ಈಗಾಗಲೇ ಸ್ಥಳೀಯರಿಗೆ ಪೂಜೆಗೆ ತೊಂದರೆಯಾಗದಂತೆ ನೊಡಿಕೊಳ್ಳುವ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಜಾತ್ರೆಯ ಪ್ರಮುಖ ದಿನಗಳಲ್ಲಿ ಇಲ್ಲಿನ ಮೇಲಿನಕೇರಿಯಿಂದ ಸಮುದ್ರ ತೀರದವರೆಗೆ ವಾಹನ ಸಂಚಾರ ನಿರ್ಬಂಧ ಮತ್ತು ವಾಹನಗಳಿಗೆ ಅಲ್ಲಲ್ಲಿ ಪಾರ್ಕಿಂಗ್ ಏರ್ಪಾಡು ಮಾಡಲು ತೀರ್ಮಾನಿಸಲಾಯಿತು. ಉತ್ಸವದ ವೇಳೆ ಸಂಚಾರಕ್ಕೆ ತೊಂದರೆ ಆಗದ ರೀತಿಯಲ್ಲಿ ರಥಬೀದಿ, ಏಕಮುಖ ಸಂಚಾರ ರಸ್ತೆ ಮುಂತಾದೆಡೆ ಹಂಗಾಮಿ ಅಂಗಡಿಗಳಿಗೆ ಅವಕಾಶ ಒದಗಿಸಲು ಸಭೆ ಒಪ್ಪಿಗೆ ಸೂಚಿಸಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮನಾ ಗೌಡ, ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ, ತಾಲ್ಲೂಕಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ರಾಜೇಂದ್ರ ಭಟ್ ವೇದಿಕೆ ಮೇಲಿದ್ದರು. ದೇವಸ್ಥಾನದ ಮೇಲುಸ್ತುವಾರಿ ಸಮಿತಿಯ ಸದಸ್ಯರು, ವೈದ್ಯಾಧಿಕಾರಿ ಜಗದೀಶ ನಾಯ್ಕ, ಪೊಲೀಸ್ ಉಪ ನಿರೀಕ್ಷಕ ಶಶಿಧರ ಕೆ. ಎಚ್. ಅನೀಲ ಬಿ.ಎಮ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು. ಪಿ.ಡಿ.ಓ. ವೆಂಕಟ್ರಮಣ ಪಟಗಾರ ನಿರ್ವಹಣೆ ಗೈದರು. ಕಾರ್ಯದರ್ಶಿ ಮಂಜುನಾಥ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.