ADVERTISEMENT

ಗೋಕರ್ಣ: ಪ್ರವಾಸಿಗಳಿಗೆ ಮಾಹಿತಿ ಮತ್ತು ಸಂಚಾರಿ ಸುವ್ಯವಸ್ಥೆಗಾಗಿ ಫಲಕ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 4:46 IST
Last Updated 28 ಅಕ್ಟೋಬರ್ 2025, 4:46 IST
ಗೋಕರ್ಣದಲ್ಲಿ ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್ ನೇತೃತ್ವದಲ್ಲಿ ಸಂಚಾರಿ ಚಿಹ್ನೆಯ ಫಲಕಗಳನ್ನು ಅಳವಡಿಸಲಾಯಿತು
ಗೋಕರ್ಣದಲ್ಲಿ ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್ ನೇತೃತ್ವದಲ್ಲಿ ಸಂಚಾರಿ ಚಿಹ್ನೆಯ ಫಲಕಗಳನ್ನು ಅಳವಡಿಸಲಾಯಿತು   

ಗೋಕರ್ಣ: ಗೋಕರ್ಣದಲ್ಲಿ ಬರುವ ಪ್ರವಾಸಿಗರ ಮಾಹಿತಿಗಾಗಿ ಮತ್ತು ಸಂಚಾರಿ ಸುವ್ಯವಸ್ಥೆ ಪಾಲನೆಗಾಗಿ ಗೋಕರ್ಣ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಪ್ರಮುಖ ಸ್ಥಳಗಳಲ್ಲಿ ಸೋಮವಾರ ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ನೇತೃತ್ವದಲ್ಲಿ ಸಂಚಾರಿ ಚಿಹ್ನೆಯ ಫಲಕಗಳನ್ನು ಅಳವಡಿಸಲಾಯಿತು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಭಟ್ ಉಪಸ್ಥಿತಿಯಲ್ಲಿ ನಾಡು ಮಾಸ್ಕೇರಿ ಗ್ರಾಮ ಪಂಚಾಯಿತಿಯಲ್ಲಿ ಪೊಲೀಸ್ ಜನಸಂಪರ್ಕ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಗೋಕರ್ಣ ಪೊಲೀಸ್ ಠಾಣಾ ನಿರೀಕ್ಷಕ ಶ್ರೀಧರ ಎಸ್.ಆರ್., ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ತಿಳಿವಳಿಕೆ ನೀಡಿದರು. ಮಾದಕ ದ್ರವ್ಯಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ, ಮಾದಕ ದ್ರವ್ಯಗಳ ಸೇವನೆ, ಮಾರಾಟದ ಬಗ್ಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದರು.

ADVERTISEMENT

ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಬೇಕು. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಿ, ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ ಹಾಗೂ ಸಂಬಂಧಿಸಿದ ಕಾಯ್ದೆಗಳ ಕುರಿತು ಜಾಗೃತಿ ಮೂಡಿಸಿದರು. ಮನೆ ಮನೆಗೆ ಪೊಲೀಸ್ ಭೇಟಿ ಪರಿಕಲ್ಪನೆಯ ಬಗ್ಗೆ ವಿವರಿಸಿ ಕುಂದು, ಕೊರತೆಗಳನ್ನು ಆಲಿಸಿ ಹಲವರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಸಂಬಂಧಿಸಿದ ಇಲಾಖೆಗಳ ಸಹಕಾರದೊಂದಿಗೆ ಪರಿಹರಿಸಲಾಯಿತು.

ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿಗೆ ಕಾಯಂ ಆಗಿ ಗ್ರೇಡ್ -1 ಕಾರ್ಯದರ್ಶಿ ಹಾಗೂ ಪಿ.ಡಿ.ಒ ಅವರ ಅವಶ್ಯಕತೆ ಇದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ ಕಾಲೇಜುಗಳಿಗೆ ಸುರಕ್ಷಿತವಾಗಿ ಹೋಗಿ ಬರಲು ಅನುವಾಗುವಂತೆ ಬಸ್ ಸೌಲಭ್ಯಕ್ಕಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಗ್ರಾಮಸ್ಥರು ಮನವಿ ನೀಡಿದರು.

ಇದಕ್ಕೆ ಉತ್ತರಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಭಟ್, ನಿಮ್ಮ ಬೇಡಿಕೆಗಳನ್ನು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತರಲಾಗುವುದು. ಬಸ್ ಸೌಲಭ್ಯಕ್ಕಾಗಿ ಅಂಕೋಲಾ ಹಾಗೂ ಕುಮಟಾ ಸಾರಿಗೆ ಘಟಕಗಳ ವ್ಯವಸ್ಥಾಪಕರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು. ಪಿ.ಎಸ್.ಐ ಖಾದರ ಭಾಷಾ ಇದ್ದರು.

ಸಭೆಯಲ್ಲಿ ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವತಿಯಿಂದ 4 ಸಿ.ಸಿ ಟಿವಿ ಕ್ಯಾಮೇರಾಗಳನ್ನು ಮತ್ತು ಸಂಚಾರಿ ಫಲಕಗಳನ್ನು ಪಂಚಾಯಿತಿ ಅನುದಾನದಲ್ಲಿ ನೀಡಲು ಒಪ್ಪಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.