
ಶಿರಸಿ: 2011 ರಿಂದ 2023 ಮಾರ್ಚ್‌ವರೆಗೆ ನಿವೃತ್ತಿಯಾದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ 1972ರ ಗ್ರಾಚ್ಯುಟಿ ಮೊತ್ತ ಕೊಡುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಶಿರಸಿ ಶಾಖೆ ವತಿಯಿಂದ ಸಿಡಿಪಿಒ ಕಚೇರಿ ಮೂಲಕ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಭಿವೃದ್ಧಿಗೆ ₹75ರಿಂದ ₹150ರವರೆಗೆ ಸಾವಿರಾರು ಜನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ದುಡಿದಿದ್ದಾರೆ. 2022 ಏಪ್ರಿಲ್‍ನಲ್ಲಿ ಸುಪ್ರೀಂ ಕೋರ್ಟ್, ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಎಲ್ಲ ಕಾರ್ಯಕರ್ತರು ಮತ್ತು ಸಹಾಯಕರಿಗೆ ಕಾಯಿದೆ 1972 ನಿರ್ಬಂಧನೆಗಳು ಅನ್ವಯವಾಗುತ್ತದೆ ಎನ್ನುವ ತೀರ್ಪು ನೀಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2023 ಏಪ್ರಿಲ್‌ನಿಂದ ಗ್ರಾಚ್ಯುಟಿ ಜಾರಿ ಮಾಡಿದೆ. ಈ ಆದೇಶ 2011 ರಿಂದ 2023 ಮಾರ್ಚ್ ತನಕ ನಿವೃತ್ತಿಯಾದ 10,311 ಅಂಗನವಾಡಿ ಕಾರ್ಯಕರ್ತೆಯರು, 11,980 ಅಂಗನವಾಡಿ ಸಹಾಯಕಿಯರಿಗೂ ಅನ್ವಯಿಸಬೇಕು. ಸತತ ಒತ್ತಾಯಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸುಮಾರು ₹183 ಕೋಟಿ ಅನುದಾನ ಬಿಡುಗಡೆಗಾಗಿ ಹಣಕಾಸು ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ಆದರೆ ಹಣಕಾಸು ಇಲಾಖೆ ಈ ಅನುದಾನ ಬಿಡುಗಡೆ ಮಾಡದೇ ಸತಾಯಿಸುತ್ತಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮನವಿ ಮೂಲಕ ಒತ್ತಾಯಿಸಲಾಯಿತು.
ಸಿಡಿಪಿಒ ಕಚೇರಿಯ ವೀಣಾ ಶಿರ್ಸಿಕರ ಮನವಿ ಸ್ವೀಕರಿಸಿದರು. ಪ್ರಮುಖರಾದ ಲಲಿತಾ ಭಟ್, ನಾಗವೇಣಿ ನಾಯ್ಕ, ನಾಗವೇಣಿ ಧರ್ಮ ನಾಯ್ಕ, ಭಾರತಿ ಹೆಗಡೆ, ಯಂಕಿ ಮರಾಠಿ, ಲಕ್ಷ್ಮಿ ಭಂಡಾರಿ, ವನಿತಾ ಹೆಗಡೆ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.