ADVERTISEMENT

ಕಲ್ಲು ಬಂಡೆಯ ಮೇಲೆ ‘ಕಾಂಪಾ’ ಕಾಡು!

10 ವರ್ಷಗಳ ಹಿಂದೆ ವ್ಯರ್ಥವಾಗಿದ್ದ 50 ಎಕರೆಯಲ್ಲಿ ಈಗ ಅಚ್ಚಹಸಿರಿನ ಹೊದಿಕೆ

ಎಂ.ಜಿ.ನಾಯ್ಕ
Published 12 ಅಕ್ಟೋಬರ್ 2019, 19:45 IST
Last Updated 12 ಅಕ್ಟೋಬರ್ 2019, 19:45 IST
ಕುಮಟಾ ತಾಲ್ಲೂಕಿನ ಮುರೂರು ರಸ್ತೆಯ ಬದಿಯಲ್ಲಿ ಅರಣ್ಯ ಇಲಾಖೆಯ ಪರಿಹಾರಾತ್ಮಕ ನೆಡುತೋಪು (ಕಾಂಪಾ) ರಕ್ಷಣೆಗೆ  ಚಿರೆಕಲ್ಲು ಕಾಂಪೌಂಡ್ ಮೇಲೆ ಗೊಬ್ಬರದ ಗಿಡಗಳನ್ನು ಬೆಳೆಸಿರುವುದು.
ಕುಮಟಾ ತಾಲ್ಲೂಕಿನ ಮುರೂರು ರಸ್ತೆಯ ಬದಿಯಲ್ಲಿ ಅರಣ್ಯ ಇಲಾಖೆಯ ಪರಿಹಾರಾತ್ಮಕ ನೆಡುತೋಪು (ಕಾಂಪಾ) ರಕ್ಷಣೆಗೆ  ಚಿರೆಕಲ್ಲು ಕಾಂಪೌಂಡ್ ಮೇಲೆ ಗೊಬ್ಬರದ ಗಿಡಗಳನ್ನು ಬೆಳೆಸಿರುವುದು.   

ಕುಮಟಾ: ಅಲ್ಲಿ 10 ವರ್ಷಗಳ ಹಿಂದೆ ಕೇವಲ ಕಲ್ಲು ಬಂಡೆಗಳಿದ್ದವು.ಅದುವ್ಯರ್ಥ ಜಾಗ ಎಂದುಕೊಂಡವರೇ ಅಧಿಕ. ಆದರೆ, ಇಂದು ಅಲ್ಲಿ ವಿವಿಧ ಜಾತಿಯ ಸಸಿಗಳು ಹಸಿರು ಹೊತ್ತು ನಿಂತಿವೆ.

ಸಮೀಪದ ಮೂರೂರು ರಸ್ತೆಯ ತನ್ನ ಜಮೀನಿನಲ್ಲಿ ಅರಣ್ಯ ಇಲಾಖೆ ಬೆಳೆಸಿದ ‘ಪರಿಹಾರಾತ್ಮಕ ನೆಡುತೋಪು’ ಅಥವಾ ‘ಕಾಂಪಾ’ (ಕಾಂಪನ್ಸೇಟರಿ ಅಫಾರೆಸ್ಟೇಶನ್ಆ್ಯಂಡ್ ಫಂಡ್ ಮ್ಯಾನೇಜ್‌ಮೆಂಟ್ ಪ್ಲಾನಿಂಗ್ ಆಥಾರಿಟಿ) ಈಗ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.

ಸಂಪೂರ್ಣ ಕಲ್ಲು ಬಂಡೆಗಳಿಂದ ಕೂಡಿದ್ದ ಸುಮಾರು 50 ಎಕರೆ ಜಾಗದಲ್ಲಿ ಆಲ, ಅರಳಿ, ಅತ್ತಿ, ಗೋಣಿ, ಬಸರಿ ಮುಂತಾದ ಹಾಲು ಸೂಸುವ ಜಾತಿಯ (ಫೈಕಸ್ ಸ್ಸೀಸ್)ಸಸಿಗಳನ್ನುಬೆಳೆಸಲಾಗಿದೆ. ಮಣ್ಣು ಜಾಸ್ತಿ ಇರುವ ಅಷ್ಟಿಷ್ಟು ಜಾಗದಲ್ಲಿ ಬೀಟೆ, ಮತ್ತಿ, ನೆಲ್ಲಿ, ನೇರಳೆ, ಹೊನಗಲು, ಹಲಸು ಮುಂತಾದ ಸುಮಾರು ಒಂದು ಸಾವಿರ ಗಿಡಗಳು 20– 30 ಅಡಿ ಎತ್ತರಕ್ಕೆ ಬೆಳೆದು ನಿಂತಿವೆ.

ADVERTISEMENT

ಮರಗಳ ಕೆಳಗೆ ನೆಲದಲ್ಲಿ ಸೊಗಸಾಗಿನೈಸರ್ಗಿಕವಾದ ಹುಲ್ಲುಹಾಸು ಬೆಳೆದಿದೆ. ನೆಡುತೋಪು ರಕ್ಷಣೆಗೆ ಸುತ್ತಲೂ ಮೂರು ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗಿದೆ. ಸುಮಾರು ಎರಡು ಅಡಿ ದಪ್ಪದ ಚಿರೆಕಲ್ಲು ತುಂಡು ಹಾಗೂ ಮಣ್ಣು ಸೇರಿಸಿ ಈ ಗೋಡೆಯನ್ನು ಕಟ್ಟಲಾಗಿದೆ. ಅದರ ಮೇಲೆ ಗೊಬ್ಬರದ ಗಿಡಗಳನ್ನು ಬೆಳೆಸಿರುವುದು ವಿಶೇಷ.

ಪರಿಹಾರ ಹಣದ ಸದುಪಯೋಗ:ಕುಮಟಾ ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ‘ಪ್ರಜಾವಾಣಿ’ಜೊತೆ ಮಾತನಾಡಿ, ‘ಬಸ್ ನಿಲ್ದಾಣ, ರಸ್ತೆ, ಸೇತುವೆ ನಿರ್ಮಾಣಕ್ಕೆ ಬೇರೆಬೇರೆ ಇಲಾಖೆಗಳಿಗೆ ಭೋಗ್ಯದ ಮೇಲೆ ಅರಣ್ಯ ಜಮೀನನ್ನು ನೀಡಲಾಗಿದೆ. ಅದಕ್ಕೆ ಪ್ರತಿಯಾಗಿ ಪರಿಹಾರ ಮೊತ್ತವನ್ನು ಪಡೆದುಕೊಳ್ಳಲಾಗುತ್ತದೆ. ಆ ಹಣವನ್ನು ಬೇರೆಡೆ ಅರಣ್ಯ ಬೆಳೆಸಲು ಹೀಗೆ ಬಳಸಬಹುದು ಎಂಬುದನ್ನು, ಆಗ ಹೊನ್ನಾವರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕೃಷ್ಣ ಉದಪುಡಿ ತೋರಿಸಿಕೊಟ್ಟಿದ್ದಾರೆ’ ಎಂದು ಸಂತಸದಿಂದ ಹೇಳಿದರು.

‘ಅವರ ಮಾರ್ಗದರ್ಶನದಲ್ಲಿ ಕುಮಟಾದಲ್ಲಿ ಆಗಿನ ವಲಯ ಅರಣ್ಯಾಧಿಕಾರಿ ವೀರಪ್ಪ ಗೌಡ ಅವರು ಈ ಅರಣ್ಯ ಅಭಿವೃದ್ಧಿ ಕಾರ್ಯವನ್ನು ಕೈಗೊಂಡಿದ್ದರು. ಹಾಲು ಸೂಸುವ ಮರಗಳು ಆಮ್ಲಜನಕವನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಹೊರಸೂಸುತ್ತವೆ. ಮಳೆಯಿಂದ ಉಂಟಾಗುವ ಮಣ್ಣು ಸವಕಳಿ ತಡೆದುಕಾಡುರಕ್ಷಿಸುವ ಕೆಲಸವನ್ನೂ ಸಮರ್ಪಕವಾಗಿ ಮಾಡುತ್ತವೆ’ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.