ADVERTISEMENT

ಶಿರಸಿ|ಸ್ವದೇಶಿ ಚಿಂತನೆ ಅನುಷ್ಠಾನಕ್ಕೆ ಅನುಕೂಲ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 4:10 IST
Last Updated 14 ಅಕ್ಟೋಬರ್ 2025, 4:10 IST
ಶಿರಸಿಯ ಪೂಗ ಭವನದಲ್ಲಿ ಬಿಜೆಪಿ ವತಿಯಿಂದ ನಡೆದ ಜಿಎಸ್‍ಟಿ ಉಳಿತಾಯ ಉತ್ಸವ ವಿಚಾರ ಸಂಕಿರಣದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು
ಶಿರಸಿಯ ಪೂಗ ಭವನದಲ್ಲಿ ಬಿಜೆಪಿ ವತಿಯಿಂದ ನಡೆದ ಜಿಎಸ್‍ಟಿ ಉಳಿತಾಯ ಉತ್ಸವ ವಿಚಾರ ಸಂಕಿರಣದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು   

ಶಿರಸಿ: ‘ಗ್ರಾಮೀಣ ಜೀವನವೇ ಮುಖ್ಯವಾಗಿರುವ ಈ ದೇಶದಲ್ಲಿ ಅಲ್ಲಿಂದಲೇ ಕೌಶಲದ ಪುನರುಜ್ಜೀವನ ಪ್ರಾರಂಭವಾಗಬೇಕಿದೆ. ಸ್ವದೇಶಿ ಚಿಂತನೆ ಜಾಗೃತಗೊಳ್ಳುವ ಜತೆ ಎಲ್ಲವೂ ಸ್ವದೇಶಿಮಯವಾಗುವಂತೆ ನೋಡಬೇಕಿದೆ. ಇದಕ್ಕೆ ಜಿಎಸ್‍ಟಿ ಉಳಿತಾಯ ಪೂರಕವಾಗಲಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ಪೂಗ ಭವನದಲ್ಲಿ ಸೋಮವಾರ ನಡೆದ ‘ಜಿಎಸ್‍ಟಿ ಉಳಿತಾಯ ಉತ್ಸವ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಎಸ್‍ಟಿ ಅನುಷ್ಠಾನ ಯಾವುದೇ ಸರ್ಕಾರಗಳಿಗೆ ಸಾಧ್ಯವಾಗಿರಲಿಲ್ಲ. ಆದರೆ ಬಿಜೆಪಿ ಇದನ್ನು ಜಾರಿಗೆ ತಂದಿತು. ಪಾರದರ್ಶಕವಾಗಿ ಜಿಎಸ್‍ಟಿ ಸುಧಾರಣೆಯ ಅಗತ್ಯ ಬಂದಾಗ ಇದನ್ನು ಮಾಡುವುದು ಅವಶ್ಯಕ. ಇದರಿಂದ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಅನುಕೂಲವಾಗಿದೆ. ಜಿಎಸ್‍ಟಿ ಬದಲಾವಣೆಯಿಂದ ತುಂಬಾ ಉಳಿತಾಯವಾಗುತ್ತದೆ. ಇದರ ಅನುಕೂಲವನ್ನು ಜನರಿಗೆ ತಿಳಿಸುವುದು ನಮ್ಮ ಕರ್ತವ್ಯ. ಆದ್ದರಿಂದ ಇಂತಹ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ’ ಎಂದರು.

ADVERTISEMENT

ಬಿಜೆಪಿ ಆರ್ಥಿಕ ಪ್ರಕೋಷ್ಠದ ಮಾಜಿ ರಾಜ್ಯ ಸಂಚಾಲಕ ವಿಶ್ವನಾಥ ಭಟ್ ಮಾತನಾಡಿ, ‘ಜಿಎಸ್‍ಟಿ 2.0 ಇದ್ದಕ್ಕಿದ್ದಂತೆ ಆದ ಸುಧಾರಣೆಯಲ್ಲ, ಸರ್ವಾನುಮತದಿಂದ ಅಂಗೀಕರಿಸಲಾದ ಸುಧಾರಣೆ. ಎಲ್ಲ ರಾಜ್ಯಗಳ ಸಮ್ಮತಿ ದೊರೆತಿದ್ದು, ಭಾರತದ ಒಕ್ಕೂಟ ವ್ಯವಸ್ಥೆಗೆ ಸಂದ ಜಯ. ತೆರಿಗೆ ಕಡಿತದಿಂದ ಬಳಸಬಹುದಾದ ಆದಾಯ ಹೆಚ್ಚಾಗುತ್ತದೆ. ಗ್ರಾಹಕರ ಕೊಳ್ಳುವ ಶಕ್ತಿ ಖಂಡಿತವಾಗಿ ಹೆಚ್ಚಾಗಲಿದೆ, ಉತ್ಪಾದನೆ ಹಾಗೂ ಪೂರೈಕೆ ಹೆಚ್ಚಳ ಆಗಲಿದೆ. ಹಾಗಾಗಿ ಉದ್ಯೋಗ ಸೃಷ್ಟಿ ಆಗಲಿದೆ. ತೆರಿಗೆ ಸಂಗ್ರಹದಲ್ಲಿ ಈ ಕ್ಷಣದಲ್ಲಿ ಆಗುವ ಕೊರತೆ ಈ ಎಲ್ಲ ಚಟುವಟಿಕೆಯಿಂದ ನೀಗಲಿದೆ. ಅತ್ಯಗತ್ಯ ಹಾಗೂ ಅಗತ್ಯ ವಸ್ತುಗಳ ಮೇಲೆ ಗಣನೀಯವಾಗಿ ತೆರಿಗೆ ಕಡಿತವಾಗಿದೆ. ಇದರ ನೇರ ಪರಿಣಾಮ ಜನಸಾಮಾನ್ಯರಿಗೆ ಮತ್ತು ಮಧ್ಯಮ ವರ್ಗಕ್ಕೆ ಈಗಾಗಲೇ ಸಿಗಲು ಆರಂಭವಾಗಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ನಾಯ್ಕ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಇದ್ದರು.

ದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಎಲ್ಲ ಯೋಜನೆಗಳನ್ನು ತಲುಪಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಇವೆಲ್ಲವೂ ಸಾಮಾನ್ಯರಿಗೆ ಅನುಕೂಲವಾಗುತ್ತಿವೆ
ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.