ADVERTISEMENT

ಕಡಿದಾದ ರಸ್ತೆಗೆ ಮಣ್ಣು ಸುರಿವುದೇ ಕೆಲಸ: ಗುಡ್ಡೆಹಳ್ಳಿ ಗ್ರಾಮಸ್ಥರ ಗೋಳು

ಗಣಪತಿ ಹೆಗಡೆ
Published 11 ನವೆಂಬರ್ 2025, 3:54 IST
Last Updated 11 ನವೆಂಬರ್ 2025, 3:54 IST
ಕಾರವಾರ ನಗರಸಭೆ ವ್ಯಾಪ್ತಿಗೆ ಒಳಪಡುವ ಗುಡ್ಡೆಹಳ್ಳಿ ಗ್ರಾಮಕ್ಕೆ ಸಾಗಲು ಇರುವ ಏಕೈಕ ಕಚ್ಚಾ ರಸ್ತೆಗೆ ಗ್ರಾಮಸ್ಥರು ಈಚೆಗೆ ದ್ವಿಚಕ್ರ ವಾಹನ ಸಾಗಲು ಅನುಕೂಲವಾಗುವಂತೆ ಮಣ್ಣು ಸುರಿದಿರುವುದು
ಕಾರವಾರ ನಗರಸಭೆ ವ್ಯಾಪ್ತಿಗೆ ಒಳಪಡುವ ಗುಡ್ಡೆಹಳ್ಳಿ ಗ್ರಾಮಕ್ಕೆ ಸಾಗಲು ಇರುವ ಏಕೈಕ ಕಚ್ಚಾ ರಸ್ತೆಗೆ ಗ್ರಾಮಸ್ಥರು ಈಚೆಗೆ ದ್ವಿಚಕ್ರ ವಾಹನ ಸಾಗಲು ಅನುಕೂಲವಾಗುವಂತೆ ಮಣ್ಣು ಸುರಿದಿರುವುದು    

ಕಾರವಾರ: ‘ಗ್ರಾಮಕ್ಕೆ ರಸ್ತೆ ನಿರ್ಮಿಸಲು ಅನುದಾನ ಮಂಜೂರಾಯಿತು. ರಸ್ತೆ ಕೆಲಸ ಆರಂಭಗೊಂಡಾಗ ಇಷ್ಟು ವರ್ಷ ಕಡಿದಾದ ಗುಡ್ಡವನ್ನು ಕಾಲ್ನಡಿಗೆಯಲ್ಲೇ ಏರುತ್ತಿದ್ದ ಶಾಪ ವಿಮೋಚನೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಮಳೆಗಾಲ ಮುಗಿಯುತ್ತಿದ್ದಂತೆಯೇ ಹತ್ತಾರು ಬುಟ್ಟಿ ಮಣ್ಣು ರಸ್ತೆಗೆ ಸುರಿದು ದ್ವಿಚಕ್ರ ವಾಹನ ಸಂಚರಿಸಲು ವ್ಯವಸ್ಥೆ ಮಾಡಲು ಯತ್ನಿಸಿ ಸೋತಿದ್ದೇವೆ’

ಹೀಗೆ ಬಿಸಿಲಲ್ಲಿ ಏದುಸಿರು ಬಿಡುತ್ತ ಗುಡ್ಡದ ದಾರಿಯಲ್ಲಿ ನಡೆದು ಸಾಗುತ್ತಿದ್ದ ಗುಡ್ಡೆಹಳ್ಳಿಯ ವಿಶ್ರಾಮ ಗೌಡ ಹೇಳಿದರು.

ಅವರು ಐದಾರು ದಶಕದಿಂದ ಇದೇ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿದ್ದಾರೆ. ತಮ್ಮ ಊರಿಗೆ ದೊಡ್ಡ ವಾಹನ ಓಡಾಡುವ ವ್ಯವಸ್ಥೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕಾದುಕುಳಿತು ಹಲವು ವರ್ಷ ಕಳೆದಿದೆ. ಈ ಬಾರಿಯಾದರೂ ರಸ್ತೆ ಆಗುತ್ತದೆ ಎಂಬ ಅವರ ಕನಸು ಕಮರಿದೆ. ಅವರೊಬ್ಬರೇ ಅಲ್ಲ, ಗುಡ್ಡೆಹಳ್ಳಿ ಗ್ರಾಮದ ಹತ್ತಾರು ಜನರು ರಸ್ತೆ ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT
ಗುಡ್ಡೆಹಳ್ಳಿ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆಯನ್ನೇ ನಿರ್ಮಿಸಬೇಕು ಎಂಬುದು ಜನರ ಬೇಡಿಕೆ. ಇದಕ್ಕಾಗಿ ಕೈಗಾದ ಅಣು ವಿದ್ಯುತ್ ನಿಗಮದ ಸಿಎಸ್‌ಆರ್ ನಿಧಿಯಡಿ ಅನುದಾನ ಕೇಳಲಾಗಿದೆ
ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾಧಿಕಾರಿ

‘ಗ್ರಾಮಕ್ಕೆ ಇರುವ ಏಕೈಕ ರಸ್ತೆ ಕಡಿದಾದ ಕಲ್ಲು, ಮಣ್ಣುಗಳಿಂದ ತುಂಬಿದೆ. ಚರಂಡಿಯೂ ಇಲ್ಲದ ಮಾರ್ಗದಲ್ಲಿ ಮಳೆಗಾಲದಲ್ಲಿ ಹರಿಯುವ ನೀರು ಕಲ್ಲುಗಳನ್ನು ಕೊಚ್ಚಿ ಸಾಗುತ್ತದೆ. ಕೆಸರು ಮಾತ್ರವೇ ಉಳಿದಿರುತ್ತವೆ. ಆಗ ಕಾಲ್ನಡಿಗೆಯಲ್ಲಿ ಸಾಗುವುದೂ ಕಷ್ಟ ಎನಿಸುತ್ತದೆ’ ಎನ್ನುತ್ತಾರೆ ಪ್ರಭಾಕರ ಗೌಡ.

‘ಮಳೆಗಾಲ ಮುಗಿಯುತ್ತಿದ್ದಂತೆಯೇ ರಸ್ತೆಗೆ ಮಣ್ಣು ಸುರಿದೆವು. ಕೊರಕಲು ಬಿದ್ದಿದ್ದ ರಸ್ತೆ ಸರಿಪಡಿಸಿಕೊಂಡೆವು. ಆದರೆ, ಮತ್ತೆ ಮಳೆ ಆರಂಭಗೊಂಡು ರಸ್ತೆಯುದ್ದಕ್ಕೂ ಕೊರಕಲು ಉಂಟಾಯಿತು. ಅವುಗಳನ್ನು ಸರಿಪಡಿಸುವುದರಲ್ಲೇ ದಿನ ಕಳೆಯುತ್ತಿದೆ. ಗ್ರಾಮದ ಹಲವರು ದ್ವಿಚಕ್ರ ವಾಹನ ಬಳಸಿ ಓಡಾಟ ನಡೆಸುತ್ತಿದ್ದಾರೆ. ಅವು ಸಾಗಲು ಸಾಲುವಷ್ಟು ರಸ್ತೆ ಸರಿಪಡಿಸಿಕೊಳ್ಳುವುದೇ ನಿತ್ಯದ ಕೆಲಸವಾಗಿದೆ’ ಎಂದು ಸಮಸ್ಯೆ ಹೇಳಿಕೊಂಡರು.

ಗುಡ್ಡೆಹಳ್ಳಿ ನಗರಸಭೆ ವ್ಯಾಪ್ತಿಯಲ್ಲೇ ಇದ್ದು, ಸುಮಾರು 25 ಮನೆಗಳಿವೆ. 120ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ₹50 ಲಕ್ಷ ವೆಚ್ಚದಲ್ಲಿ 1.2 ಕಿ.ಮೀ ಉದ್ದದ ಕಚ್ಚಾ ರಸ್ತೆ ಸರಿಪಡಿಸುವ ಕಾಮಗಾರಿ ವರ್ಷದ ಹಿಂದೆ ನಡೆದಿತ್ತು. ಆದರೆ, ಮಳೆಯ ರಭಸಕ್ಕೆ ಸಮತಟ್ಟು ಮಾಡಿ, ಜಲ್ಲಿ ಹಾಸಿದ್ದ ರಸ್ತೆಯು ಕೊಚ್ಚಿಹೋಗಿದೆ.

‘ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡಿ’

‘ಗುಡ್ಡೆಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯು ಗುಡ್ಡದ ಅಂಚಿನಲ್ಲಿ ಹಾದುಹೋಗಿದೆ. ಮಳೆಗಾಲದಲ್ಲಿ ಗುಡ್ಡದಿಂದ ಇಳಿದು ಬರುವ ಭಾರಿ ಪ್ರಮಾಣದ ನೀರು ರಸ್ತೆ ಕೊರಕಲು ಒಡೆಯುವಂತೆ ಮಾಡುತ್ತದೆ. ರಸ್ತೆ ಸುಧಾರಣೆ ಕೆಲಸ ನಡೆಸಿದರೆ ಸಾಲದು. ನಗರದಿಂದ ಗ್ರಾಮಕ್ಕೆ ಸಂಪರ್ಕಿಸಲು ಐದರಿಂದ ಐದೂವರೆ ಕಿ.ಮೀ ಉದ್ದದವರೆಗೆ ಕಾಂಕ್ರೀಟ್ ರಸ್ತೆಯನ್ನೇ ನಿರ್ಮಿಸಿಕೊಡಬೇಕು’ ಎಂಬುದು ಗ್ರಾಮಸ್ಥರ ಬೇಡಿಕೆ. ‘ಈ ಹಿಂದೆ ಮಂಜೂರಾಗಿದ್ದ ₹50 ಲಕ್ಷ ವಿಶೇಷ ಅನುದಾನದಲ್ಲಿ ರಸ್ತೆಯ ಕೆಲಭಾಗವನ್ನು ಸಮತಟ್ಟುಗೊಳಿಸಿ ಜಲ್ಲಿ ಹಾಸಿಕೊಡುವ ಕೆಲಸ ನಡೆಯಿತು. ಕ್ರಿಯಾಯೋಜನೆಯಲ್ಲಿ ಇಷ್ಟೇ ಕೆಲಸ ಇತ್ತು’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸಂತೋಷ ಡಿಸೋಜಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.