ADVERTISEMENT

‘ಹಡಪದ ಅಪ್ಪಣ್ಣರ ವಚನ ಪ್ರಸ್ತುತ’

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 13:24 IST
Last Updated 16 ಜುಲೈ 2019, 13:24 IST
ಶಿರಸಿಯಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ದೀಪ ಬೆಳಗಿದರು
ಶಿರಸಿಯಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ದೀಪ ಬೆಳಗಿದರು   

ಶಿರಸಿ: ವಚನ ಸಾಹಿತ್ಯದ ಮೂಲಕ ಸಮಾಜದ ದಾರಿದ್ರ್ಯ ತೊಡೆದು ಹಾಕಲು ಪ್ರಯತ್ನಿಸಿದ್ದ ಹಡಪದ ಅಪ್ಪಣ್ಣರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ ಹೇಳಿದರು. ‌

ಮಂಗಳವಾರ ಇಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಅವರು ಮಾತನಾಡಿದರು. ಜಗತ್ತಿನ ಪ್ರಥಮ ಸಂಸತ್ ಖ್ಯಾತಿಯ ಅನುಭವ ಮಂಟಪದ ದಿಗ್ಗಜರಲ್ಲಿ ಹಡಪದ ಅಪ್ಪಣ್ಣ ಕೂಡ ಒಬ್ಬರಾಗಿದ್ದರು. 12ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಮೂಢನಂಬಿಕೆ, ಶೋಷಣೆ ವಿರುದ್ಧ ಧ್ವನಿ ಎತ್ತಿದವರು ಅವರು. ಪ್ರತಿ ಜೀವಿ ಲೌಕಿಕಕ್ಕೆ ಏನನ್ನೂ ತರುವುದಿಲ್ಲ. ಎಲ್ಲವೂ ಭ್ರಮೆ. ಅಂಥ ಭ್ರಮೆ ಕಳಚಿ ಮುಕ್ತಿಯೆಡೆ ಸಾಗುವುದು ಪ್ರತಿಯೊಬ್ಬರ ಗುರಿಯಾಗಬೇಕು ಎಂದು ತಿಳಸಿದ್ದ ಅಪ್ಪಣ್ಣನವರು, ಸಾಮಾಜಿಕ ಬದಲಾವಣೆಗೆ ಕಾರಣರಾಗಿದ್ದರು ಎಂದರು.

ಮಾನವನು ಅಹಂಕಾರ ಬಿಟ್ಟರೆ ಮಾತ್ರ ಪರಿವರ್ತನೆ ಆಗಬಲ್ಲ ಎಂಬುದನ್ನು ವಚನಗಳ ಮೂಲಕವೇ ನಯವಾಗಿ ತಿವಿದಿರುವ ಅಪ್ಪಣ್ಣ ಅವರ ವಚನಗಳ ನಿರಂತರ ಓದು ಆಗಬೇಕು ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎನ್.ಹೆಗಡೆ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿಜ ದೃಷ್ಟಿಯಲ್ಲಿ ಅನುಷ್ಠಾನಕ್ಕೆ ತಂದವರಲ್ಲಿ ಅಪ್ಪಣ್ಣ ಕೂಡ ಒಬ್ಬರಾಗಿದ್ದರು. ವಚನಗಳ ಸರಳ ಸಾಹಿತ್ಯದ ಮೂಲಕ ಜೀವನ ದರ್ಶನ ನೀಡಿದವರು ಅವರು. ಜ್ಞಾನ ಮಾರ್ಗದಲ್ಲಿ ಸಾಗಲು ವಚನಗಳ ಓದು, ಅರ್ಥೈಸುವಿಕೆ ಹೆಚ್ಚಬೇಕು ಎಂದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಇದ್ದರು. ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಸ್ವಾಗತಿಸಿದರು. ಶ್ರೀಧರ ಹೆಗಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.