ADVERTISEMENT

ಹಾಲಕ್ಕಿ ಒಕ್ಕಲಿಗರ ವಿಶಿಷ್ಟ ದೀಪಾವಳಿ ಆಚರಣೆ: ಬಲೀಂದ್ರ, ಗೃಹದೇವಿ ವಿವಾಹ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 10:40 IST
Last Updated 9 ನವೆಂಬರ್ 2018, 10:40 IST
ಕಾರವಾರದ ಬೈತಖೋಲ್‌ನ ಹಾಲಕ್ಕಿ ಒಕ್ಕಲಿಗರ ಮನೆಯೊಂದರಲ್ಲಿ ದೀಪಾವಳಿ ಆಚರಣೆಯ ಅಂಗವಾಗಿ ಗುರುವಾರ ರಾತ್ರಿ ನಡೆದ ಮದುವೆ ಸಮಾರಂಭದಲ್ಲಿ ವಧು– ವರರಾದ ಯುವಕರು.
ಕಾರವಾರದ ಬೈತಖೋಲ್‌ನ ಹಾಲಕ್ಕಿ ಒಕ್ಕಲಿಗರ ಮನೆಯೊಂದರಲ್ಲಿ ದೀಪಾವಳಿ ಆಚರಣೆಯ ಅಂಗವಾಗಿ ಗುರುವಾರ ರಾತ್ರಿ ನಡೆದ ಮದುವೆ ಸಮಾರಂಭದಲ್ಲಿ ವಧು– ವರರಾದ ಯುವಕರು.   

ಕಾರವಾರ:ದೀಪಾವಳಿ ಹಬ್ಬದ ಅಂಗವಾಗಿ ನಗರದ ಬೈತಖೋಲ್‌ನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಇಬ್ಬರು ಯುವಕರಿಗೇ ಮದುವೆ ಮಾಡುವ ಸಂಪ್ರದಾಯವನ್ನು ಗುರುವಾರ ತಡರಾತ್ರಿ ಆಚರಿಸಲಾಯಿತು.

ಬಲಿಪಾಡ್ಯಮಿ ದಿನದಂದು ಆಚರಿಸಲಾಗುವ ಈ ಆಚರಣೆಯಲ್ಲಿ ಒಬ್ಬ ಯುವಕ ಬಲೀಂದ್ರನಂತೆ ಹಾಗೂ ಮತ್ತೊಬ್ಬ ಭೂದೇವಿಯೆಂದು ವೇಷಭೂಷಣ ಧರಿಸಿದ್ದರು. ಸಾಮಾನ್ಯ ಮದುವೆಯಲ್ಲಿ ಮಾಡುವ ಎಲ್ಲ ಸಂಪ್ರದಾಯಗಳನ್ನೂ ಪಾಲಿಸಿದ ಬಳಿಕ ಸೂರ್ಯೋದಯಕ್ಕೂ ಮೊದಲು ಮದುವೆ ಶಾಸ್ತ್ರ ಪೂರೈಸಲಾಯಿತು.

ಎರಡು ವಿಭಿನ್ನ ಗೋತ್ರಗಳಇಬ್ಬರು ಯುವಕರನ್ನು ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ಹೆಣ್ಣು ಕೇಳುವ ಶಾಸ್ತ್ರದಿಂದ ಮೊದಲಾಗಿ ಮದುವೆ ಶಾಸ್ತ್ರದವರೆಗೂ ಜಾನಪದ ಹಾಡುಗಳನ್ನು ಹಿರಿಯ ಮಹಿಳೆಯರು ಹಾಡುವುದು ಗಮನಾರ್ಹ. ಗ್ರಾಮದೇವತೆ ಎದುರು ಈ ಎಲ್ಲ ಶಾಸ್ತ್ರಗಳನ್ನು ನೆರವೇರಿಸಿದ ನಂತರ ಅವಲಕ್ಕಿ ಮತ್ತು ಬೆಲ್ಲವನ್ನು ಎಲ್ಲರೂ ಸೇವಿಸಿದರು. ಈ ವಿವಾಹ ಕೇವಲ ಆಚರಣೆಗೆ ಸೀಮಿತವಾಗಿರುತ್ತದೆ.

ADVERTISEMENT

ಸಮುದಾಯದ ಹಿರಿಯ ಮಹಿಳೆ ಲಕ್ಷ್ಮಿ ಮಾತನಾಡಿ, ‘ಈ ಸಂಪ್ರದಾಯ ಹೇಗೆ ಶುರುವಾಯಿತು ಎಂದು ಗೊತ್ತಿಲ್ಲ. ಆದರೆ, ತಲೆಮಾರುಗಳಿಂದ ನಡೆದು ಬಂದಿದೆ. ಆದ್ದರಿಂದ ನಾವೂ ಅದನ್ನು ಮುಂದುವರಿಸಿದ್ದೇವೆ. ದೀಪಾವಳಿ ಮತ್ತಷ್ಟು ಸಂಭ್ರಮ ಮೂಡಿಸಿದೆ’ ಎಂದರು.

‘ಈ ಆಚರಣೆಯನ್ನು ನೋಡಲು ಎಲ್ಲ ಸಮುದಾಯಗಳ ಜನರೂ ಬರುತ್ತಾರೆ. ಒಂದು ರೀತಿಯಲ್ಲಿ ಸಮಾಜದ ಸಾಮರಸ್ಯ ಬೆಸೆಯಲು ಇದು ಸಹಕಾರಿಯಾಗಿದೆ. ಸಾಮಾನ್ಯವಾಗಿ ಮೂರು, ಐದು ದಿನಗಳ ಆಚರಣೆ ಮಾಡುತ್ತಾರೆ. ಕೆಲವರು ಒಂಬತ್ತು ದಿನಗಳವರೆಗೂ ಆಚರಿಸುತ್ತಾರೆ’ ಎನ್ನುತ್ತಾರೆ ಸಮಾಜದ ಹಿರಿಯ ಕುಮಾರ ಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.