
ಹಳಿಯಾಳ: ನಮ್ಮ ಪರಿಸರದ ಸ್ವಚ್ಛತೆಯನ್ನು ಕಾಪಾಡಿದರೆ, ಪರಿಸರ ನೆಮ್ಮದಿಯ ಬದುಕನ್ನು ನೀಡುವುದಲ್ಲದೆ ನಮ್ಮಆರೋಗ್ಯವನ್ನು ಸುಧಾರಿಸಲು ಸಾಧ್ಯ ಎಂದು ಸಿವಿಲ್ ಹಿರಿಯ ನ್ಯಾಯಾಧೀಶೆ ಸುಜಾತಾ ಪಾಟೀಲ ಹೇಳಿದರು.
ಶುಕ್ರವಾರ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘದಿಂದ ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸುತ್ತ ಮುತ್ತಲು ಪರಿಸರ ಸ್ವಚ್ಛವಾಗಿದ್ದರೆ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಹೊಂದಿರಲು ಸಾಧ್ಯ. ಸ್ವಚ್ಛತೆ ಅಭಿಯಾನ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಿ. ನಮ್ಮ ನಮ್ಮ ಮನೆಯನ್ನು ಹೇಗೆ ನಿತ್ಯ ಸ್ವಚ್ಛವಾಗಿ ಇಟ್ಟುಕೊಳ್ಳಲು ಕಾರ್ಯಪ್ರವೃತ್ತರಾಗಬೇಕು ಎಂದರು.
ನ್ಯಾಯಾಧೀಶೆ ಗೀತಾ ಮಾತನಾಡಿ, ಸ್ವಚ್ಛತೆಯಿಂದ ಸದೃಢ ಆರೋಗ್ಯ ಹೊಂದಲು ಸಾಧ್ಯ. ವ್ಯಕ್ತಿ ಆರೋಗ್ಯ ಸದೃಢವಾದಲ್ಲಿ ಸಮಾಜ ಸದೃಢವಾಗುತ್ತದೆ. ಸಮಾಜದ ಸದೃಢವಾದಲ್ಲಿ ರಾಜ್ಯ ಹಾಗೂ ರಾಷ್ಟ್ರ ಸದೃಢವಾಗುತ್ತವೆ ಎಂದರು.
ವಕೀಲ ಸಂಘದ ಅಧ್ಯಕ್ಷ ಸುಂದರ ಕಾನಕತ್ರಿ, ಎಲ್ಲ ವಕೀಲ ಸಂಘದ ಸದಸ್ಯರು ನ್ಯಾಯಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.
ಮೌನ ಆಚರಣೆ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಜ್ಞಾಪಕಾರ್ಥವಾಗಿ ನ್ಯಾಯಾಲಯದಲ್ಲಿ ಎರಡು ನಿಮಿಷ ಮೌನ ಆಚರಿಸುವ ಮೂಲಕ ಹುತಾತ್ಮ ದಿನಾಚರಣೆ ಆಚರಿಸಲಾಯಿತು. ಸಿವಿಲ್ ಹಿರಿಯ ನ್ಯಾಯಾಧೀಶೆ ಸುಜಾತಾ ಪಾಟೀಲ, ನ್ಯಾಯಾಧೀಶೆ ಗೀತಾ, ವಕೀಲ ಸಂಘದ ಎಲ್ಲ ಸದಸ್ಯರು ನ್ಯಾಯಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.