ADVERTISEMENT

ಕಾರವಾರ: ಹಳ್ಳಿಗರಿಗೆ ಆರೋಗ್ಯ ಸೇವೆ ದುರ್ಲಭ

ಮಳೆಗಾಲದಲ್ಲೇ ಸಮಸ್ಯೆ ಗಂಭೀರ: ತಾಲ್ಲೂಕು ಕೇಂದ್ರಕ್ಕೆ ಸಾಗುವ ಅನಿವಾರ್ಯತೆ

ಗಣಪತಿ ಹೆಗಡೆ
Published 7 ಜುಲೈ 2025, 3:05 IST
Last Updated 7 ಜುಲೈ 2025, 3:05 IST
ಹಳಿಯಾಳದಲ್ಲಿರುವ ಆಯುಷ್ಮಾನ್‌ ಆರೋಗ್ಯ ಮಂದಿರದ ದುಸ್ಥಿತಿ
ಹಳಿಯಾಳದಲ್ಲಿರುವ ಆಯುಷ್ಮಾನ್‌ ಆರೋಗ್ಯ ಮಂದಿರದ ದುಸ್ಥಿತಿ   

ಕಾರವಾರ: ಆರೋಗ್ಯ ಕ್ಷೇತ್ರದಲ್ಲಿ ತೀರಾ ಹಿಂದುಳಿದಿರುವ ಜಿಲ್ಲೆಗಳ ಸಾಲಿನಲ್ಲಿರುವ ಉತ್ತರ ಕನ್ನಡದಲ್ಲಿ ಗ್ರಾಮೀಣ ಭಾಗದಲ್ಲಿ ವೈದ್ಯರ ಸೇವೆ ಲಭ್ಯತೆ ಬಗ್ಗೆ ಆಕ್ಷೇಪಗಳು ಹೆಚ್ಚುತ್ತಲೇ ಇವೆ. ಗುಡ್ಡಗಾಡು ಪ್ರದೇಶಗಳೇ ಹೆಚ್ಚಿರುವ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬರಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ.

ಜಿಲ್ಲೆಯ 83 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 21 ಕಡೆ ವೈದ್ಯರ ಹುದ್ದೆ ಖಾಲಿ ಇದೆ. ಸಮೀಪದ ಬೇರೊಂದು ಕೇಂದ್ರಗಳ ವೈದ್ಯರು ವಾರಕ್ಕೆ ಎರಡು ಅಥವಾ ಮೂರು ದಿನ ಖಾಲಿ ಇರುವ ಕೇಂದ್ರಗಳಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ಎರಡೂ ಕೇಂದ್ರಗಳ ವ್ಯಾಪ್ತಿಯ ಜನರಿಗೂ ಸಮಸ್ಯೆ ತಂದೊಡುತ್ತಿರುವ ದೂರುಗಳಿವೆ. ಸಾಮಾನ್ಯವಾಗಿ ಕಾಡುವ 14 ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಒದಗಿಸಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿದ ಉಪ ಆರೋಗ್ಯ ಕೇಂದ್ರಗಳಿಗೆ ಸ್ವಂತ ಕಟ್ಟಡ, ಸೌಲಭ್ಯಗಳು ಮರೀಚಿಕೆಯಾಗಿರುವ ದೂರುಗಳಿವೆ.

ಕಾರವಾರ ತಾಲ್ಲೂಕಿನ ಉಳಗಾ ಆರೋಗ್ಯ ಕೇಂದ್ರಕ್ಕೆ ವೈದ್ಯರಿಲ್ಲದೆ ಕೆಲ ತಿಂಗಳು ಕಳೆದಿದೆ. ಈ ಭಾಗದಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದು, ಚಿಕಿತ್ಸೆಗೆ 25 ಕಿ.ಮೀ ದೂರದ ಕಾರವಾರಕ್ಕೆ ಬರಬೇಕಾಗಿದೆ ಎನ್ನುತ್ತಾರೆ ಸ್ಥಳೀಯರಾದ ಚಂದಾ ನಾಯ್ಕ.

ADVERTISEMENT

ಜೊಯಿಡಾದಲ್ಲಿ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. 7 ಆರೋಗ್ಯ ಕೇಂದ್ರಗಳ ಪೈಕಿ 3ರಲ್ಲಿ ಮಾತ್ರ ವೈದ್ಯರಿದ್ದಾರೆ. ಕುಂಬಾರವಾಡ ಕೇಂದ್ರಕ್ಕೆ ವಾರದಲ್ಲಿ ಕೆಲ ದಿನ ಡಿಗ್ಗಿ ಆಸ್ಪತ್ರೆಯ ವೈದ್ಯರು ಬರುತ್ತಾರೆ. ಗುಂದ ಆರೋಗ್ಯ ಕೇಂದ್ರ ಉಳವಿ, ರಾಮನಗರ ಆಸ್ಪತ್ರೆ  ಜಗಲಪೇಟ್ ವೈದ್ಯರನ್ನು ಅವಲಂಭಿಸಿದೆ.

ಮುಂಡಗೋಡ ತಾಲ್ಲೂಕಿನ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾರದಲ್ಲಿ ಎರಡು ದಿನ ಮಾತ್ರ ವೈದ್ಯರು ಬಂದು ಹೋಗುತ್ತಾರೆ. ತಾಲ್ಲೂಕು ಆಸ್ಪತ್ರೆಯಲ್ಲಿಯೂ ಮಕ್ಕಳ ವೈದ್ಯ ಸೇರಿದಂತೆ ವಿವಿಧ ವಿಭಾಗಗಳ 6 ವೈದ್ಯರ ಹುದ್ದೆ ಖಾಲಿಯಿವೆ. ‘ಅರಿಶಿಣಗೇರಿ, ಹುನಗುಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಾರದಲ್ಲಿ ಎರಡು ದಿನ ವೈದ್ಯರು ಲಭ್ಯವಿರುತ್ತಾರೆ’ ಎನ್ನುತ್ತಾರೆ ತಾಲ್ಲೂಕು ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ.

ಹಳಿಯಾಳ ತಾಲ್ಲೂಕಿನ ಭಾಗವತಿ, ಸಾಂಬ್ರಾಣಿ, ಮುರ್ಕವಾಡ ಭಾಗಗಳಲ್ಲಿ ವೈದ್ಯರ ಕೊರತೆ ಇದೆ. 5 ಕಡೆಗಳಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ. ಸಿದ್ದಾಪುರ ತಾಲ್ಲೂಕಿನ ಬಿಳಗಿ ಮತ್ತು ದೊಡ್ಮನೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಲಭ್ಯವಿಲ್ಲ. 

‘ಅಂಕೋಲಾ ತಾಲ್ಲೂಕಿನ ಕೆಲವೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ವೈದ್ಯರ ಕೊರತೆ ಇರುವ ಕಡೆಗಳಲ್ಲಿ ವಾರದಲ್ಲಿ ಎರಡು ದಿನ ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತಿದೆ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಧಿಕಾರಿ ಡಾ.ಜಗದೀಶ್ ನಾಯ್ಕ.

ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿದೆ. ಹೊಸದಾಗಿ ಕಟ್ಟಡ ನಿರ್ಮಾಣವಾಗುತ್ತಿರುವುದರಿಂದ, ಈಗ ರೋಗಿಗಳ ಚಿಕಿತ್ಸೆಗೆ ದಾನಿಗಳು ಕಟ್ಟಿಸಿದ ಕಟ್ಟಡವೇ ಆಸರೆಯಾಗಿದೆ. ಹೊಸ ಕಟ್ಟಡ ಚಿಕ್ಕದಾಗಿದ್ದು ಮಳೆಗಾಲದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮಸ್ಯೆಯಾಗಿದೆ. 24 ಗಂಟೆ ಸೇವೆ ನೀಡಬೇಕಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಜೆ 6 ಗಂಟೆ ನಂತರ ಮುಚ್ಚಲಾಗುತ್ತಿದ್ದು, ರಾತ್ರಿ ಚಿಕಿತ್ಸೆ ಸಿಗದೆ ತೊಂದರೆಯಾಗುತ್ತಿದೆ ಎಂಬ ದೂರುಗಳಿವೆ.

‘ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರ ನೇಮಕಕ್ಕೆ ಪ್ರಯತ್ನ ನಡೆದಿದೆ. ವೈದ್ಯರು ಬರಲು ಒಪ್ಪುತ್ತಿಲ್ಲ’ ಎನ್ನುತ್ತಾರೆ ಉಸ್ತುವಾರಿ ವೈದ್ಯ ಡಾ.ಜಗದೀಶ ನಾಯ್ಕ.

ಭಟ್ಕಳ ತಾಲ್ಲೂಕಿನ ಕೋಣಾರ ಪ್ರಾಥಮಿಕ ಕೇಂದ್ರದಲ್ಲಿ ವೈದ್ಯರು ಲಭ್ಯರಿಲ್ಲ.‌ ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಚಿಕತ್ಸೆಗಾಗಿ ತಾಲ್ಲೂಕು ಆಸ್ಪತ್ರೆ ಅವಲಂಭಿಸಿದ್ದಾರೆ. ಮುರುಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಹಳತಾಗಿದೆ. ಪಟ್ಟಣದ ಮಣ್ಕುಳಿಯಲ್ಲಿರುವ ನಮ್ಮ ಕ್ಲಿನಿಕ್‍ನಲ್ಲಿ ವೈದ್ಯರ ಕೊರತೆ ಇದೆ.

‘ಕುಮಟಾ ತಾಲ್ಲೂಕಿನಲ್ಲಿ ವೈದ್ಯರ ಕೊರತೆ ಇದೆ. ಕತಗಾಲ ಹಾಗೂ ಕಲ್ಲಬ್ಬೆ ಕೇಂದ್ರಗಳ ವೈದ್ಯರು ಉನ್ನತ ಶಿಕ್ಷಣಕ್ಕೆ ರಜೆಯ ಮೇಲೆ ತೆರಳಿದ್ದಾರೆ. ಸಂತೆಗುಳಿ ಕೇಂದ್ರದಿಂದ ವಾರಕ್ಕೊಮ್ಮೆ ವೈದ್ಯರನ್ನು ಕತಗಾಲ ಮತ್ತು ಮೂರೂರು ಕೇಂದ್ರಗಳಿಗೆ ನಿಯೋಜಿಸಲಾಗುತ್ತದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ ತಿಳಿಸಿದ್ದಾರೆ.

ದಾಂಡೇಲಿ ತಾಲ್ಲೂಕಿನ ಆಲೂರು, ಬರ್ಚಿ, ಕುಳಗಿ,ಅಂಬಿಕಾನಗರ, ಬೊಮ್ಮನಳ್ಳಿ ಉಪ ಆರೋಗ್ಯ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಿದ್ದು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಹುದ್ದೆಗಳು ಖಾಲಿ ಇವೆ. ಎರಡೆರಡು ಕೇಂದ್ರಗಳನ್ನು ಒಬ್ಬರೇ ವೈದ್ಯರು ನಿಭಾಯಿಸುವ ಸ್ಥಿತಿ ಇದೆ.

ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ
ದಾಂಡೇಲಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಚೀಟಿ ಪಡೆಯಲು ಸರತಿ ಸಾಲಿನಲ್ಲಿ ನಿಂತ ಸಾರ್ವಜನಿಕರು 
ಶಿರಸಿ ತಾಲ್ಲೂಕಿನ ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರ
ವೈದ್ಯರ ಹುದ್ದೆ ಖಾಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮೀಪದ ಬೇರೆಒಂದು ಕೇಂದ್ರಗಳ ವೈದ್ಯರ ನಿಯೋಜನೆ ಮಾಡಿ ಸಮಸ್ಯೆ ಪರಿಹರಿಸಲು ಯತ್ನಿಸಲಾಗುತ್ತಿದೆ
ಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯಾಧಿಕಾರಿ
ದೊಡ್ಮನೆ ಮತ್ತು ಬಿಳಗಿಯಲ್ಲಿ ವೈದ್ಯರಿಲ್ಲದ ಕಾರಣ ಕ್ಯಾದಗಿ ಆರೋಗ್ಯ ಕೇಂದ್ರದಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದಟ್ಟಣೆ ಉಂಟಾಗುತ್ತಿದ್ದು ವೃದ್ಧರಿಗೆ ಮಕ್ಕಳಿಗೆ ಅನಾನುಕೂಲ ಹೆಚ್ಚುತ್ತಿದೆ
ಲಕ್ಷ್ಮಣ ನಾಯ್ಕ ಕ್ಯಾದಗಿ ಗ್ರಾಮಸ್ಥ
ಅಂಕೋಲಾದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಸಮಸ್ಯೆ ಹೆಚ್ಚಿದ್ದು ಚಿಕಿತ್ಸೆಗೆ ಬೇರೆ ತಾಲ್ಲೂಕುಗಳಿಗೆ ತೆರಳಬೇಕಾದ ಸ್ಥಿತಿ ಇದೆ
ರಾಜು ಕಣಗಿಲ ಸಾಮಾಜಿಕ ಕಾರ್ಯಕರ್ತ

ರೇಬಿಸ್ ಲಸಿಕೆ ಲಭ್ಯವಿಲ್ಲ

ಶಿರಸಿ ತಾಲ್ಲೂಕಿನ ಸುಗಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರಿಲ್ಲ. ಬನವಾಸಿ ಹಾಗೂ ಬಿಸಲಕೊಪ್ಪ ಭಾಗದಲ್ಲಿ ತಿಂಗಳೀಚೆಗೆ 25ಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣ ದಾಖಲಾಗಿದ್ದು ರೇಬಿಸ್ ಚುಚ್ಚುಮದ್ದಿನ ಕೊರತೆ ಕಾರಣಕ್ಕೆ ತಾಲ್ಲೂಕು ಆಸ್ಪತ್ರೆಗೆ ಬರುವ ಅನಿವಾರ್ಯತೆ ಅಲ್ಲಿನ ಜನತೆಗಿದೆ. ‘ನಾಯಿ ಕಡಿದರೆ ಗ್ರಾಮೀಣ ಭಾಗದ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ರೇಬಿಸ್ ಲಸಿಕೆ ಲಭ್ಯವಿಲ್ಲ’ ಎಂಬುದು ಬನವಾಸಿಯ ಮಂಜುನಾಥ ನಾಯ್ಕ ದೂರು. ‘ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೆಬೀಸ್ ಲಸಿಕೆ ಕೊರತೆಯಿರುವುದು ನಿಜ. ತಾಲ್ಲೂಕು ಆಸ್ಪತ್ರೆಯಲ್ಲಿ ಲಸಿಕೆ ಲಭ್ಯವಿದೆ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ.

ಖಾಸಗಿ ಮಳಿಗೆಗಳಲ್ಲಿ ಖರೀದಿಗೆ ಸಲಹೆ!

ಹೊನ್ನಾವರ ತಾಲ್ಲೂಕಿನ ಕಡತೋಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. ಮಂಕಿಯಲ್ಲಿರುವ ನಮ್ಮ ಕ್ಲಿನಿಕ್‌ನಲ್ಲೂ ವೈದ್ಯರಿಲ್ಲ. ‘ಗ್ರಾಮೀಣ ಭಾಗದಲ್ಲಿ ಒಟ್ಟೂ ಮೂರು ವೈದ್ಯರ ಕೊರತೆ ಇದೆ’ ಎಂದು ತಾಲ್ಲೂಕು ಪ್ರಭಾರ ಆರೋಗ್ಯ ವೈದ್ಯಾಧಿಕಾರಿ ಡಾ.ವೈಶಾಲಿ ನಾಯ್ಕ ತಿಳಿಸಿದ್ದಾರೆ. ‘ಆಸ್ಪತ್ರೆಗಳಲ್ಲಿ ಲಭ್ಯವಿರುವ ಔಷಧಗಳ ಗುಣಮಟ್ಟದ ಬಗ್ಗೆ ಅಲ್ಲಿನ ವೈದ್ಯರಿಗೇ ಅನುಮಾನಗಳಿದ್ದು ಖಾಸಗಿ ಅಂಗಡಿಗಳಲ್ಲಿ ಔಷಧ ಖರೀದಿಸುವಂತೆ ಸಲಹೆ ನೀಡುತ್ತಾರೆ’ ಎಂದು ಈಚೆಗೆ ಚಿಕಿತ್ಸೆಗೆ  ಹೋಗಿದ್ದ ವ್ಯಕ್ತಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ‘ಗುಂಡಿಬೈಲ್ ಕೆಂಚಗಾರ ಮೊದಲಾದ ಊರುಗಳಲ್ಲಿ ಸಿಡಿಬು ವ್ಯಾಪಕವಾಗಿ ಹಬ್ಬುತ್ತಿದೆ. ಇಂಥ ಗಂಭೀರ ಪ್ರಕರಣಗಳ ಕುರಿತು ಇಲಾಖೆಗೆ ಮಾಹಿತಿ ನೀಡದೆ ಆರೋಗ್ಯ ಕಾರ್ಯಕರ್ತರು ನಿರ್ಲಕ್ಷಿಸುತ್ತಿದ್ದಾರೆ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ರವಿ ಸೂರಿ, ಎಂ.ಜಿ.ನಾಯ್ಕ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ಮೋಹನ ನಾಯ್ಕ, ಪ್ರವೀಣಕುಮಾರ ಸುಲಾಖೆ, ಜ್ಞಾನೇಶ್ವರ ದೇಸಾಯಿ, ಸುಜಯ್ ಭಟ್, ಅಜಿತ್ ನಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.